ಗುರುವಾರ , ಅಕ್ಟೋಬರ್ 22, 2020
21 °C
ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ.ಸಾಗರ್ ನೇತೃತ್ವದಲ್ಲಿ ಭಾರಿ ಪ್ರತಿಭಟನೆ

ಉತ್ತರ ಪ್ರದೇಶ ಸರ್ಕಾರ ವಜಾಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಉತ್ತರ ಪ್ರದೇಶದ ಹಾಥರಸ್‍ನಲ್ಲಿ ದಲಿತ ಯುವತಿಯ ಮೇಲಿನ ಗುಂಪು ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಘಟನೆ ಖಂಡಿಸಿ ಹಾಗೂ ಅಲ್ಲಿನ ಯೋಗಿ ಆದಿತ್ಯನಾಥ್ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಆಗ್ರಹಿಸಿ ಮಂಗಳವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಡಿ.ಜಿ.ಸಾಗರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಗರದ ಜಗತ್ ವೃತ್ತಕ್ಕೆ ವಿವಿಧ ಕಡೆಗಳಿಂದ ಬಂದಿದ್ದ ಕಾರ್ಯಕರ್ತರು ಕೆಲಹೊತ್ತು ರಸ್ತೆ ನಡೆಸಿದ ಬಳಿಕ ಅಲ್ಲಿಂದ ಸರ್ದಾರ್‌ ವಲ್ಲಭಭಾಯಿ ಪಟೇಲ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯವರೆಗೂ ಮೆರವಣಿಗೆ ನಡೆಸಿದರು.

ಉತ್ತರ ಪ್ರದೇಶದ ಮತ್ತು ಕೇಂದ್ರ ಸರ್ಕಾರದ ಬಿಜೆಪಿ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಸಹ ಮಂಗಳವಾರ ಹೋರಾಟಗಳು ನಡೆದವು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿ.ಜಿ.ಸಾಗರ, ಯುವತಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಮುಚ್ಚಿಹಾಕುವಲ್ಲಿ ಸ್ವತಃ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ರಾತ್ರೋರಾತ್ರಿ ಯುವತಿಯ ಶವವನ್ನು ಸುಟ್ಟು ಹಾಕಿದ್ದಾರೆ. ಅವರ ಕುಟುಂಬದವರಿಗೂ ತಿಳಿಸದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಇಡೀ ಸರ್ಕಾರವೇ ಸೇರಿಕೊಂಡು ಆರೋಪಿಗಳನ್ನು ರಕ್ಷಣೆ ಮಾಡುತ್ತಿದೆ ಎಂದು ಅವರು ಹೇಳಿದರು.

ಸಂತ್ರಸ್ತ ಕುಟುಂಬಸ್ಥರ ಭೇಟಿಗೆ ಮಾಧ್ಯಮದವರಿಗೂ ಮನೆಗೆ ಹೋಗಲು ಅವಕಾಶ ನೀಡುತ್ತಿಲ್ಲ. ಯುವತಿಯ ಅತ್ಯಾಚಾರ, ಕೊಲೆ ಬೆನ್ನಲ್ಲೇ ಮತ್ತೊಬ್ಬ ಶಾಲಾ ಬಾಲಕಿ ಮೇಲೂ ಸಾಮೂಹಿಕ ಅತ್ಯಾಚಾರ ನಡಿದಿದೆ. ಉತ್ತರಪ್ರದೇಶದಲ್ಲಿ ಮಹಿಳೆಯರು, ಮಕ್ಕಳ ರಕ್ಷಣೆ ಮಾಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡರಾದ ಕೃಷ್ಣಪ್ಪ ಕಾರಣಿಕ, ಉಮೇಶ ನರೋಣಾ, ರೇವಣಸಿದ್ಧಪ್ಪ ಜಾಲಿ, ಮಲ್ಲಣ್ಣ ಕೊಡಚಿ, ಜೈಭೀಮ ಕೋರಳ್ಳಿ, ನಾಗಪ್ಪ ಕೋರೆ, ಬಿ.ಸಿ.ವಾಲಿ, ರಾಜು ಸಂಕಾ, ಎಸ್.ಪಿ. ಸುಳ್ಳದ, ಸುಭಾಷ ಡಾಂಗೆ, ರತ್ನಾಕರ್, ಎಸ್.ಎಂ.ಪಟ್ಟಣಕರ್, ಅಂಬಣ್ಣ ಜೀವಣಗಿ, ಕವಿತಾ ಜಂಬಗಿ, ರವಿ ಬಡಿಗೇರ, ಶಿವಶರಣ ಮಾರಡಗಿ, ಪ್ರಭಾಕರ, ದೇವೇಂದ್ರ ಹೆಗ್ಗಡೆ, ಮಲ್ಲಿನಾಥ, ಮರೆಪ್ಪ ಹಾಗೂ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು