ಸೋಮವಾರ, ಫೆಬ್ರವರಿ 24, 2020
19 °C
ಲೂಟಿಕೋರರಿಗೆ ಸಾಥ್ ನೀಡುತ್ತಿರುವ ಪೊಲೀಸ್‌ರು; ಆರೋಪ

ದುಮ್ಮದ್ರಿ: ಎಗ್ಗಿಲ್ಲದೆ ಸಾಗಿದೆ ಮರಳು ದಂಧೆ

ಮಂಜುನಾಥ ದೊಡಮನಿ Updated:

ಅಕ್ಷರ ಗಾತ್ರ : | |

Prajavani

ಯಡ್ರಾಮಿ: ತಾಲ್ಲೂಕಿನ ದುಮ್ಮದ್ರಿ ಗ್ರಾಮದ ಹಳ್ಳದಿಂದ ನಿತ್ಯ ನೂರಾರು ಟ್ರಿಪ್ ಮರಳು ಅಕ್ರಮವಾಗಿ ಸಾಗಿಸಲಾಗುತ್ತಿದೆ. ಪೊಲೀಸ್ ಅಧಿಕಾರಿಗಳೇ ಶ್ರೀರಕ್ಷೆಗೆ ನಿಂತಿರುವುದು ಮರಳು ಲೂಟಿಕೋರರಿಗೆ ವರದಾನವಾಗಿದೆ.

‘ಪ್ರತಿ ಟ್ರ್ಯಾಕ್ಟರ್ ಮರಳಿನ ಹಿಂದೆ ಒಂದು ಪೊಲೀಸ್ ಬೈಕ್ ಕಾವಲು ಕಾಯುತ್ತದೆ’ ಎನ್ನುತ್ತಾರೆ ಮರಳು ಸಾಗಿಸುವ ಟ್ರ್ಯಾಕ್ಟರ್ ಚಾಲಕರು. ನಿತ್ಯ ಹಗಲು ರಾತ್ರಿಯೆನ್ನದೆ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಪ್ರತಿ ಸಲದ ಟ್ರಿಪ್‍ಗೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಲಾಗಿದೆಯಂತೆ. ‘ಸಮೀಪದ ಪೊಲೀಸ್ ಠಾಣೆಗೆ, ತಹಶೀಲ್ದಾರ್ ಕಚೇರಿ ಸೇರಿದಂತೆ ಎಲ್ಲರಿಗೂ ಮಾಮೂಲು ಕೊಡುತ್ತೇವೆ. ಒಂದು ಟ್ರ್ಯಾಕ್ಟರ್‌ಗೆ ತಿಂಗಳಿಗೆ ₹25-30 ಸಾವಿರ ಮಾಮೂಲಿ ಕೊಡಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಚಾಲಕರು ಹೇಳಿದ್ದಾರೆ.

ಪೊಲೀಸರ ಕುಮ್ಮಕ್ಕಿನಿಂದ ರಾಜಾರೋಷವಾಗಿ ಮರಳು ಸಾಗಿಸಲಾಗುತ್ತಿದೆ. ಕೆಲವು ಕಡೆ ಹಳ್ಳದಲ್ಲಿ ಆಳವಾಗಿ ಬಾವಿ ತೋಡಿ ಅದರಲ್ಲಿ ಮರಳು ಶೇಖರಣೆ ಮಾಡಲಾಗುತ್ತದೆ. ಕಡಕೋಳ, ಖೈನೂರ, ತೆಲಗಬಾಳ ಮತ್ತು ಜಂಬೇರಾಳ ಹಳ್ಳದಿಂದ ತರುವ ಮರಳು ಪೊಲೀಸ್ ಠಾಣೆಯ ಎದುರಿನಿಂದಲೇ ಸಾಗಿಸಲಾಗುತ್ತಿದೆ. ತಮ್ಮ ಕಣ್ಮುಂದೆಯೇ ಮರಳಿನ ಟ್ರ್ಯಾಕ್ಟರ್ ಹೋಗುತ್ತಿದ್ದರೂ ಪೊಲಿಸರು ಮೂಕಪ್ರೇಕ್ಷರಾಗಿರುತ್ತಾರೆ.

ಮೇಲಧಿಕಾರಿಗಳೇ ಮರಳು ಮಾಫಿಯಾಗೆ ರಕ್ಷಣೆ ಕೊಡುತ್ತಿರುವಾಗ ನಾವೇನು ಮಾಡುವುದು ಅಂತಾರೆ ಹೆಸರು ಹೇಳಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು. ಯಡ್ರಾಮಿ ಪಿಎಸ್‍ಐ ಅವರು ತಮ್ಮ ಠಾಣೆಯ ಎದುರಿಗೆ ನಿಂತು ಮರಳಿನ ಟ್ರ್ಯಾಕ್ಟರ್ ಹಾದು ಹೋಗುತ್ತಿರುವುದನ್ನು ನೋಡಿದರೂ ನೋಡದಂತೆ ಇರುತ್ತಾರೆ.

ದುಮ್ಮದ್ರಿಯಿಂದ ಅಡ್ಡ ರಸ್ತೆ ಹಿಡಿದು ಹಂಗರಗಾ(ಕೆ) ಕ್ರಾಸ್ ಮಾರ್ಗವಾಗಿ ಮರಳು ಸಾಗಣೆ ನಡೆಯುತ್ತಿದೆ. ಹಂಗರಗಾ(ಕೆ) ಗ್ರಾಮದಲ್ಲಿ ದಿನನಿತ್ಯ ಮುಂಜಾನೆ 5 ಗಂಟೆಯಿಂದ ಅಕ್ರಮ ಮರಳು ಸಾಗಣೆ ಆರಂಭವಾಗುತ್ತದೆ. ಇದನ್ನು ಪೊಲೀಸರು ಪ್ರಶ್ನಿಸದಿರುವುದರಿಂದ ಗ್ರಾಮದಲ್ಲಿ ಅಕ್ರಮವಾಗಿ ಮರಳು ಮಾರಾಟ ಹೆಚ್ಚಾಗಿದೆ.

ದುಮ್ಮದ್ರಿ, ಹಂಗರಗಾ(ಕೆ), ತೆಲಗಬಾಳ, ಖೈನೂರ, ಕಡಕೋಳ, ಜಂಬೇರಾಳ ಸೇರಿದಂತೆ ತಾಲ್ಲೂಕಿನ ಬಹುತೇಕ ಎಲ್ಲ ಪ್ರಮುಖ ಹಳ್ಳಗಳು ಮರಳು ದಂಧೆಯ ಹೊಡೆತಕ್ಕೆ ತತ್ತರಿಸಿವೆ. ಹಲವು ಹಳ್ಳಗಳು ಮತ್ತು ಕೆರೆಗಳು ವಿರೂಪಗೊಂಡಿವೆ. ತಾಲ್ಲೂಕಿನಲ್ಲಿ ಮರಳು ಮಾರಾಟ ಬಲಿಷ್ಠವಾಗಿ ಬೆಳೆಯಲು ಪೊಲೀಸರು ನೆರವಾಗಿರುವುದೇ ಕಾರಣ ಎನ್ನುತ್ತಾರೆ.

ಅಕ್ರಮ ಮರಳು ಗಣಿಗಾರಿಕೆಯಿಂದ ನಮ್ಮ ಹೊಲಗಳಲ್ಲಿರುವ ಬೆಳೆಗಳು ಹಾಳಾಗುತ್ತಿವೆ. ಹೊಲದಲ್ಲಿ ಹತ್ತಿ ಗಿಡಗಳಿದ್ದರೂ ಅದರ ಮೇಲೆಯೇ ಟ್ರ್ಯಾಕ್ಟರ್‌ಗಳು ಹಾದು ಹೋಗುತ್ತಿವೆ ಎಂದು ರೈತರೊಬ್ಬರು ಆಪಾದಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು