ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿಗಳು ಎಲ್ಲಿಂದ ದಾಖಲೆ ತರಬೇಕು?: ಸಿ.ಎಸ್‌.ದ್ವಾರಕಾನಾಥ ಪ್ರಶ್ನೆ

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕಾನಾಥ ಪ್ರಶ್ನೆ
Last Updated 23 ಜನವರಿ 2020, 14:32 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲು ಮುಂದಾದರೆ ಈ ದೇಶದ ಮೂಲನಿವಾಸಿಗಳಾದ ಅಲೆಮಾರಿಗಳು, ಬುಡಕಟ್ಟು ಸಮುದಾಯದವರಿಗೆ ಹೆಚ್ಚಿನ ತೊಂದರೆಯಾಗಲಿದೆ. ಊರಿಂದೂರಿಗೆ ಸಂಚರಿಸುವ ಅಲೆಮಾರಿಗಳು, ಅಕ್ಷರವನ್ನೇ ಅರಿಯದ ಬುಡಕಟ್ಟಿನವರು ಜನ್ಮ, ವಾಸಸ್ಥಳದ ದಾಖಲೆಗಳನ್ನು ಎಲ್ಲಿಂದ ತರಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್‌.ದ್ವಾರಕಾನಾಥ್ ಪ್ರಶ್ನಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತದಲ್ಲಿ 15 ಕೋಟಿ ಅಲೆಮಾರಿಗಳು, 8 ಕೋಟಿ ಬುಡಕಟ್ಟು ಸಮುದಾಯದವರು ಇದ್ದಾರೆ. ಊರಿಂದೂರಿಗೆ ತಿರುಗಾಡುವ ಹಗಲು ವೇಷಗಾರರು, ದಾಸರು, ಗೊಂಬೆ ಆಡಿಸುವವರು ಮೊದಲಾದ ಅಲೆಮಾರಿಗಳು ಹಾಗೂ ಕಾಡಿನಲ್ಲೇ ಶತಮಾನಗಳಿಂದ ವಾಸವಾಗಿರುವ, ನಾಗರಿಕ ಸಮಾಜದಿಂದ ದೂರವೇ ಇರುವ ಬುಡಕಟ್ಟು ಸಮುದಾಯದವರು ಜನ್ಮಸ್ಥಳದ, ಜನನದ ದಾಖಲೆಗಳನ್ನು ಎಲ್ಲಿಂದ ತರಬೇಕು. ಇದೆಲ್ಲ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಗೊತ್ತಿಲ್ಲವೆಂದೇನಲ್ಲ. ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಶೇಷ ಸ್ಥಾನ ಮಾನ ರದ್ದು, ತ್ರಿವಳಿ ತಲಾಖ್‌ ತೀರ್ಪು, ರಾಮಮಂದಿರ ತೀರ್ಪುಗಳೆಲ್ಲ ತಮ್ಮ ಕಾರ್ಯಸೂಚಿಯ ಪರವಾಗಿಯೇ ಬಂದುದರಿಂದ ತಮ್ಮನ್ನು ತಡೆಯುವವರೇ ಇಲ್ಲ, ಏನು ಮಾಡಿದರೂ ನಡೆಯುತ್ತದೆ ಎಂಬ ಸರ್ವಾಧಿಕಾರಿ ಧೋರಣೆಯಿಂದ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಜಾರಿಗೆ ತರಲು ಮುಂದಾಗಿದ್ದಾರೆ’ ಎಂದು ಟೀಕಿಸಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಬಂದರೆ ಎರಡು ಭಾರತಗಳು ಸೃಷ್ಟಿಯಾಗುತ್ತವೆ. ಒಂದು ಪೌರತ್ವವನ್ನು ಸಾಬೀತುಪಡಿಸಲಾಗದ ಅಸಹಾಯಕರ ಭಾರತ ಮತ್ತೊಂದು ಪೌರತ್ವ ಸಾಬೀತುಪಡಿಸಿದವರ ಭಾರತ. ಪೌರತ್ವ ಸಾಬೀತು ಮಾಡಲು ಸಾಧ್ಯವಾಗದ ಬಹುತೇಕರು ಈ ದೇಶದ ಮೂಲನಿವಾಸಿಗಳೇ ಆಗಿರುತ್ತಾರೆ’ ಎಂದರು.

ಬಿಜೆಪಿಗೆ ಮತ ನೀಡಿ ಗೆಲ್ಲಿಸಿದವರಿಗೂ ತಮ್ಮ ಪೌರತ್ವ ಸಾಬೀತು ಮಾಡಲು ಆಗುವುದಿಲ್ಲ. ಹಾಗಾದರೆ, ಬಿಜೆಪಿಯು ತನ್ನ ಆಯ್ಕೆ ಅಕ್ರಮ ಎಂದು ಘೋಷಿಸಿಕೊಳ್ಳುತ್ತದೆಯೇ ಎಂದು ಪ್ರಶ್ನಿಸಿದ ದ್ವಾರಕಾನಾಥ, ಮುಂದೊಂದು ದಿನ ಸಿಎಎ ಬಿಜೆಪಿ ಬುಡಕ್ಕೇ ಬರುತ್ತದೆ. ಇದನ್ನು ಅವರು ಮರೆತಂತಿದೆ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT