ಗುರುವಾರ , ಸೆಪ್ಟೆಂಬರ್ 23, 2021
24 °C
ಮಹಾನಗರ ಪಾಲಿಕೆ ಚುನಾವಣಾಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ನಿರ್ದೇಶನ

ಜವಾಬ್ದಾರಿಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ: ವಿ.ವಿ. ಜ್ಯೋತ್ಸ್ನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಸೆಪ್ಟಂಬರ್ 3ರಂದು ನಡೆಯುವ ಮಹಾನಗರ ಪಾಲಿಕೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ನೇಮಕಗೊಂಡ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು’ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ನಿರ್ದೇಶನ ನೀಡಿದರು.

ಚುನಾವಣೆ ಸಿದ್ಧತೆ ಹಾಗೂ ಜವಾಬ್ದಾರಿಗಳ ಕುರಿತು ಶುಕ್ರವಾರ ಸಭೆ ನಡೆಸಿದ ಅವರು, ‘ಒಬ್ಬ ಚುನಾವಣಾಧಿಕಾರಿಗೆ 5 ವಾರ್ಡ್‍ಗಳನ್ನು ನೀಡಲಾಗಿದ್ದು, ಪ್ರತಿಯೊಂದು ವಾರ್ಡಿನ ಸಂಪೂರ್ಣ ಮಾಹಿತಿ ತಮ್ಮಲ್ಲಿ ಇರಬೇಕು. ಸಂಬಂಧಪಟ್ಟ ವಾರ್ಡ್‍ಗಳಿಗೆ ಭೇಟಿ ನೀಡಬೇಕು. ಆ. 16ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗುತ್ತಿದೆ. ಆದ್ದರಿಂದ ವೇಳಾಪಟ್ಟಿಯಿಂದ ಹಿಡಿದು ನಾಮಪತ್ರ ಹಿಂತೆಗೆಯುವವರೆಗೂ ನೀತಿ ಸಂಹಿತೆ ಗಮನದಲಿಟ್ಟುಕೊಂಡು ಚುರುಕಾಗಿ ಕೆಲಸ ಮಾಡಬೇಕು’ ಎಂದರು.

ನಾಮಪತ್ರ ಸಲ್ಲಿಕೆ ಸಮಯದಲ್ಲಿ ಅಭ್ಯರ್ಥಿಗಳು ನೀಡುವ ನಾಮಪತ್ರವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಬೇಕು. ಪ್ರಮುಖವಾಗಿ ನಮೂನೆ, ಘೋಷಣಾ ಪತ್ರ, ಜಾತಿ ಪ್ರಮಾಣ ಪತ್ರ, ಚಿರಾಸ್ತಿ, ಚರಾಸ್ತಿ, ಕ್ರಿಮಿನಲ್ ಹಿನ್ನೆಲೆ ಇನ್ನಿತರ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಮೂನೆಯನ್ನು ತೆಗೆದುಕೊಳ್ಳಬೇಕು. ಚುನಾವಣಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು ಎಂದರು.

ಎಲ್ಲಾ ಹಂತದಲ್ಲೂ ಕೋವಿಡ್-19 ಸುರಕ್ಷತಾ ನಿಯಮಗಳನ್ನು ಪಾಲನೆಯಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

‌ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಶಶಿಶೇಖರ್ ರೆಡ್ಡಿ ಅವರು ಅಧಿಕಾರಿಗಳಿಗೆ ಚುನಾವಣಾ ನಿಯಮ ಹಾಗೂ ಪಾಲನೆಗಳ ಕೈಪಿಡಿ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರ ವಣಿಕ್ಯಾಳ, ಸಹಾಯಕ ಆಯುಕ್ತೆ ಮೋನಾ ರೂಟ್ ಹಾಗೂ ವಾರ್ಡ್‌ಗಳ ಚುನಾವಣಾಧಿಕಾರಿಗಳು ಇದ್ದರು.

ಕೋವಿಡ್‌ ವೇಸ್ಟೇಜ್‌ ನಿಯಂತ್ರಣ: ‘ಕೋವಿಡ್‌ ಲಸಿಕೆ ವೈಲ್‌ಗಳ ವೇಸ್ಟೇಜ್‌ ತಡೆಯುವಲ್ಲಿ ಜಿಲ್ಲೆಯು ನಂಬರ್‌ ಒನ್ ಸ್ಥಾನದಲ್ಲಿದೆ. ನಮ್ಮ ವೈದ್ಯಕೀಯ ಸಿಬ್ಬಂದಿಯ ವಹಿಸಿದ ಕಾಳಜಿಪೂರ್ವಕ ಕೆಲಸದಿಂದ ಇದು ಸಾಧ್ಯವಾಗಿದೆ. ಸದ್ಯ ಶೇಕಡ –1.3 ವೇಸ್ಟೇಜ್‌ ಪ್ರಮಾಣ ಇದೆ’ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಹೇಳಿದರು.

‘ಇದುವರೆಗೂ ಜಿಲ್ಲೆಯಲ್ಲಿ ಶೇ 10ರಷ್ಟು ಜನ ಎರಡೂ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ನಗರದ ಜನಸಂಖ್ಯೆಯಲ್ಲಿ ಶೇ 55ರಷ್ಟು ಮಂದಿಗೆ ಮೊದಲ ಲಸಿಕೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ 35ರಷ್ಟು ಸಾಧನೆಯಾಗಿದೆ. ಒಟ್ಟಾರೆ 9.15 ಲಕ್ಷ ಜನ ಚುಚ್ಚುಮದ್ದು ಪಡೆದಿದ್ದಾರೆ’ ಎಂದು ಅವರು ನಗರದಲ್ಲಿ ಶುಕ್ರವಾರ ಮಧ್ಯಮದವರಿಗೆ ತಿಳಿಸಿದರು.

ಕಾಲೇಜುಗಳಲ್ಲಿ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ 84,629 ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.