ಭಾನುವಾರ, ಜನವರಿ 17, 2021
17 °C
ಕುಟುಂಬ ಸಮೇತ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿದ ರೈತರು, ಉದ್ಯಾನಗಳಲ್ಲಿ ಸಂಭ್ರಮಿಸಿದ ನಗರವಾಸಿಗಳು

ಎಳ್ಳ ಅಮಾವಾಸ್ಯೆ; ಹೊಲಗಳಲ್ಲಿ ಚರಗ ಸಂಭ್ರಮ

ಲಕ್ಷ್ಮಣ ಟಿ.ನಾಯಕ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಬುಧವಾರ ಎಳ್ಳ ಅಮಾವಾಸ್ಯೆಯ ಸಡಗರ. ನಗರದಗಳ ಜನರು ತಮ್ಮ ನೆಚ್ಚಿನ ಉದ್ಯಾನ, ಕಲ್ಯಾಣ ಮಂಟಪ, ದೇವಸ್ಥಾನಗಳಿಗೆ ಹೋಗಿ ಸಂಭ್ರಮಿಸಿದರೆ; ಹಳ್ಳಿಯ ಜನ ಹೊಲಗಳಿಗೆ ಹೋಗಿ ಹಬ್ಬದ ಸಡಗರ ಅನುಭವಿಸಿದರು.

ಸಮೃದ್ಧ ಬೆಳೆಯ ಬಯಕೆ ಹೊತ್ತು ಹೊಲಕ್ಕೆ ಚರಗ ಚೆಲ್ಲುವ ಮೂಲಕ ಕೃಷಿಕರು ಭೂಮಿತಾಯಿಗೆ ನಮಿಸಿದರು. ಮೈದುಂಬಿ ನಿಂತ ಭೂರಮೆಗೆ ಸೀಮಂತ ಮಾಡುವ ಉದ್ದೇಶದಿಂದ ಈ ಎಳ್ಳ ಅಮಾವಾಸ್ಯೆ ಆಚರಿಸುವುದು ವಾಡಿಕೆ. ರೈತಾಪಿ ಜನರು ಬೆಳಿಗ್ಗೆಯೇ ಎದ್ದು ಹೊಸ ಬಟ್ಟೆಗಳನ್ನು ಧರಿಸಿ, ತರಹೇವಾರು ಖಾದ್ಯಗಳನ್ನು ಮಾಡಿಕೊಂಡು ಹೊಲಕ್ಕೆ ಹೋಗಿ ಚರಗ ಚೆಲ್ಲಿದರು. ಮಹಿಳೆಯರು, ಮಕ್ಕಳು, ಹಿರಿಯರು ಸೇರಿಕೊಂಡು ಹೊಲದಲ್ಲಿ ಓಡಾಡಿ ಸಂಭ್ರಮಿಸಿದರು. ಮರದ ಕೆಳಗೆ ಐದು ಕಲ್ಲುಗಳನ್ನು ಇಟ್ಟು ಅವರನ್ನೇ ಪಾಂಡವರು ಎಂದು ಪೂಜೆ ಮಾಡಿದರು.

ಕಲಬುರ್ಗಿ ತಾಲ್ಲೂಕಿನ ಹಲವು ಕಡೆಗಳಲ್ಲಿ ರೈತರ ಹೊಲದಲ್ಲಿ ಟೆಂಟ್‌ ಹಾಕಿ ಚರಗ ಚೆಲ್ಲಿ ನೆಂಟರಿಸ್ಟರಿಗೆ ಊಟ ಹಾಕಿದಲ್ಲದೇ, ಜೋಳ ಸೇರಿದಂತೆ ವಿವಿಧ ಬೆಳೆಗಳ ಜತೆಯೇ ದಿನ ಕಳೆದರು. ಹೊಲದ ತುಂಬೆಲ್ಲ ಸಂಚರಿಸಿ ಹುಲ್ಲುಲ್ಲುಗೋ… ಚಲಾಂಬ್ರಿಗೋ… ಎನ್ನುತ್ತ ಚರಗ ಚೆಲ್ಲಿದರು.

ಹಿಂಗಾರು ಫಸಲು ಸಮೃದ್ಧವಾಗಿ ಬರಲಿ, ಮನೆತುಂಬ ದವಸ–ಧಾನ್ಯ ತುಂಬಲಿ ಎಂಬ ಬೇಡಿಕೆಯೊಂದಿಗೆ ರೈತರು ತಮ್ಮ ಹೊಲದಲ್ಲಿ ಪೂಜೆ ಸಲ್ಲಿಸುವುದು ಎಳ್ಳ ಅಮಾವಾಸ್ಯೆ ವಿಶೇಷ. ಕುಟುಂಬದ ಸದಸ್ಯರು ಜೋಳ, ಸಜ್ಜೆ ರೊಟ್ಟಿ, ಜೋಳದ ಕಡಬು, ಪುಂಡಿಪಲ್ಯ, ತರಕಾರಿ, ಖಡಕ್ ರೊಟ್ಟಿ, ಅನ್ನ, ಸಾಂಬಾರು, ವಿವಿಧ ನಮೂನೆಯ ಭಜ್ಜಿ ಹಾಗೂ ಸಿಹಿ ತಿಂಡಿಗಳಾದ ಗೋಧಿ ಹುಗ್ಗಿ, ಮಾದಲಿ, ಜಾಮೂನು, ಶ್ಯಾವಿಗೆ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಿದರು.

ಹೊಲ ಇಲ್ಲದವರು ಕೂಡ ಎಳ್ಳ ಅಮಾವಾಸ್ಯೆಯನ್ನು ಸಂಭ್ರಮವನ್ನು ಮನೆಯ ಹಿತ್ತಲು, ಉದ್ಯಾನ ಮುಂತಾದ ಸ್ಥಳಗಳಲ್ಲಿ ಆಚರಿಸಿದರು. ಕೆಲವರು ಪರಿಚಯಸ್ಥರ ಹೊಲಕ್ಕೆ ತೆರಳಿ ಊಟ ಮಾಡಿದರು.

ನಗರದ ಪಬ್ಲಿಕ್‌ ಗಾರ್ಡನ್‌ ಹಾಗೂ ಮೃಗಾಲಯದ ಆವರಣದಲ್ಲಿ ಕುಟುಂಬದ ಸದಸ್ಯರೊಡನೆ ಊಟ ಸವಿದರು. ಮಕ್ಕಳು, ಯುವಕ, ಯುವತಿಯರು ಊಟವಾದ ಬಳಿಕ ಉದ್ಯಾನದಲ್ಲೇ ಆಟವಾಡಿ ಸಂಭ್ರಮಿಸಿದರು. ಕೆಲವರು ಸೆಲ್ಫಿ ತೆಗೆದುಕೊಂಡರು.

ಭೂತಾಯಿಯ ಆರಾಧನೆಗೆ ಚರಗ ಅರ್ಪಿಸಲು ರೈತರು, ಮಹಿಳೆಯರು ವಾರದ ಮುಂಚೆಯೇ ಶೇಂಗಾ ಹೋಳಿಗೆ, ಸುರಳಿ ಹೋಳಿಗೆ, ಕರ್ಚಿಕಾಯಿ, ಶೇಂಗಾ ಹೋಳಿಗೆ, ಎಳ್ಳು ಹಚ್ಚಿದ ಖಡಕ್‌ ಸಜ್ಜೆ, ಜೋಳದ ರೊಟ್ಟೆ, ಮಡಿಕೆ, ಹೆಸರು ಪಲ್ಯ ಶೇಂಗಾ, ಗುರೆಳ್ಳು, ಅಗಸಿ, ಪುಠಾಣಿ ಚಟ್ನಿ ಸಿದ್ಧತೆ ಮಾಡಿಕೊಳ್ಳುವುದು ಕಲಬುರ್ಗಿ ಭಾಗದಲ್ಲಿ ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಸಂಪ್ರದಾಯ.

ಅದರಲ್ಲೂ ಜೋಳದ ಕಡುಬು, ಶೀಖರಣೆ ಜತೆ ವಿವಿಧ ಖಾದ್ಯಗಳನ್ನು ತಯಾರಿಸಿ ಭೂಮಿತಾಯಿಗೆ ಅರ್ಪಿಸಿ ತಾವೂ ಸೇವಿಸಿ ಸಂಭ್ರಮಿಸಿದ್ದು ಕಂಡುಬಂತು.

ಕೃಷಿಕ ಮಹಿಳೆಯರು ಇಂದು ಹೊಸ ಸೀರೆ ಉಟ್ಟು ಆಭರಣಗಳನ್ನು ಹಾಕಿಕೊಂಡು ಪುರುಷರು, ಮಕ್ಕಳು ಹೊಸ ಬಟ್ಟೆ ಧರಿಸಿಕೊಂಡು ಚರಗದ ಬುತ್ತಿಯನ್ನು ಚಕ್ಕಡಿ, ಟ್ರಾಕ್ಟರ್‌ನಲ್ಲಿ ಇಟ್ಟುಕೊಂಡು ಹೊಲಕ್ಕೆ ಹೋಗಿದ್ದರು.

ಸಂಕ್ರಾಂತಿ ಖರೀದಿ ಜೋರು

ಕಲಬುರ್ಗಿ: ಜನವರಿ 15ರಂದು ಜಿಲ್ಲೆಯಲ್ಲಿ ಸಂಕ್ರಾಂತಿ ಸಡಗರ ಮನೆ ಮಾಡಲಿದೆ. ಇದರ ಅಂಗವಾಗಿ ಸೂಪರ್‌ ಮಾರುಕಟ್ಟೆ, ಕಣ್ಣಿ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಬುಧವಾರವೇ ಖರೀದಿ ಭರಾಟೆ ನಡೆಯಿತು. ಮಾರುಕಟ್ಟೆಗಳು ಜನರಿಂದ ತುಂಬಿದ್ದವು. ಹೊಸ ಬಟ್ಟೆ ಖರೀದಿಯೂ ಜೋರಾಗಿತ್ತು.

ಎಳ್ಳು–ಬೆಲ್ಲ ಮಿಶ್ರಣದ ಪ್ಯಾಕೆಟ್‌ಗಳು,  ಕಬ್ಬು, ಬೊರೆಹಣ್ಣು, ಸುಲಗಾಯಿ, ಅಕ್ಕಿ, ಎಳ್ಳಿನ ಉಂಡೆ, ಹೂ, ಹಣ್ಣು, ಪಂಚಪಳಾರದ ಖರೀದಿ ಜೋರಾಗಿ ನಡೆಯಿತು. ಹಬ್ಬದ ಕಾರಣ ದಿನಸಿ, ತರಕಾರಿ ಬೆಲೆ ಸಹಜವಾಗಿಯೇ ಹೆಚ್ಚಾಗಿದೆ. ಪೂಜಾ ಸಾಮಗ್ರಿಗಳ ಬೆಲೆ ದುಬಾರಿ ಆಗಿದ್ದರೂ ಸಂಭ್ರಮಕ್ಕೆ ತಡೆಯಿಲ್ಲ. ಎಳ್ಳುಬೆಲ್ಲದ ಸಣ್ಣಸಣ್ಣ ಪಾಕೆಟ್‌ ಮಾಡಿದ ವ್ಯಾಪಾರಿಗಳು ₹ 25 ಹಾಗೂ ₹30ರಂತೆ ಮಾರಾಟ ಮಾಡಲಾಗುತ್ತಿದೆ.

ಅಧ್ಯಾತ್ನ– ವಿಜ್ಞಾನ– ಜನಪದದ ಸಂಭ್ರಮ: ದಕ್ಷಿಣಾಯನದಿಂದ ಉತ್ತರಾಯನ ಗೋಳಕ್ಕೆ ಸಂಚರಿಸುವ ಸೂರ್ಯನು ಮಕರ ರಾಶಿ ಪ್ರವೇಶಿಸುತ್ತಾನೆ. ಖಗೋಳದಲ್ಲಿ ಸಂಭವಿಸುವ ಈ ಮಹಾ ಪರಿವರ್ತನೆಯನ್ನು ಭಾರತೀಯ ವಿಜ್ಞಾನಿಗಳು ‘ಮಕರ ಸಂಕ್ರಮಣ’ ಎಂದು ಹೆಸರಿಸಿದ್ದಾರೆ.

ನಗರದ ಶರಣಬಸವೇಶ್ವರ ದೇವಸ್ಥಾನ, ರಾಮಮಂದಿರ ಹಾಗೂ ಕೋರಂಟಿ ಹನುಮಾನ ದೇವಸ್ಥಾನಗಳಲ್ಲಿ ಗುರುವಾರ (ಜ. 14) ಬೆಳಿಗ್ಗೆಯಿಂದ ಸಂಜೆಯವರೆಗೆ ಪೂಜೆಗಳು ನಡೆಯಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು