ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡುವೆ: ಸಚಿವ ಪ್ರಿಯಾಂಕ್ ಖರ್ಗೆ

ಮಂಗಳವಾರ, ಏಪ್ರಿಲ್ 23, 2019
32 °C
ಸಂವಾದ ಕಾರ್ಯಕ್ರಮ

ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡುವೆ: ಸಚಿವ ಪ್ರಿಯಾಂಕ್ ಖರ್ಗೆ

Published:
Updated:
Prajavani

ಕಲಬುರ್ಗಿ: ‘ರಾಜಕೀಯದಲ್ಲಿ ಎಷ್ಟು ವರ್ಷ ಇರುತ್ತೇನೋ ಗೊತ್ತಿಲ್ಲ. ಆದರೆ, ಇರುವಷ್ಟು ದಿನ ಒಳ್ಳೆಯ ಕೆಲಸಗಳನ್ನು ಮಾಡುತ್ತೇನೆ. ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಕಳಚಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದ ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಚ್‌ಕೆಸಿಸಿಐ) ಸಭಾಂಗಣದಲ್ಲಿ ‘ಎಮರ್ಜಿಂಗ್ ಕಲಬುರ್ಗಿ’ ಸಂಘಟನೆಯು ಸೋಮವಾರ ಆಯೋಜಿಸಿದ್ದ ‘ಉದ್ಯಮಿಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಮಾಜ ಕಲ್ಯಾಣ ಇಲಾಖೆಯಲ್ಲಿ ₹30 ಸಾವಿರ ಕೋಟಿ ಅನುದಾನವಿದೆ. ಶಿಕ್ಷಣ, ಉದ್ಯೋಗ ಮತ್ತು ಮೂಲಸೌಕರ್ಯ ಒದಗಿಸುವುದು ಇಲಾಖೆಯ ಧ್ಯೇಯವಾಗಿದೆ. ಎರಡು ಕೋಟಿ ಜನರೊಂದಿಗೆ ನಾನು ಮುಖಾಮುಖಿ ಆಗುತ್ತೇನೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸುಮಾರು 70 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದು, ಅವರಿಗೆಲ್ಲ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗಿದೆ’ ಎಂದು ತಿಳಿಸಿದರು.

‘ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ದಿ. ಎನ್.ಧರ್ಮಸಿಂಗ್ ಅವರು ಈ ಭಾಗಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರು ಮಾಡಿದಷ್ಟು ಅಭಿವೃದ್ಧಿ ಕೆಲಸಗಳನ್ನು ಯಾರೂ ಮಾಡಿಲ್ಲ. ವಿಮಾನ ನಿಲ್ದಾಣ ನಿರ್ಮಾಣ ಖರ್ಗೆ ಅವರ ಕನಸಾಗಿತ್ತು. ಅದು ಈಗ ಸಾಕಾರಗೊಂಡಿದೆ. ಈ ಅನೇಕರು ಟೀಕೆ–ಟಿಪ್ಪಣಿ ಮಾಡುತ್ತಾರೆ. ಹಾಗಂತ ನನಗೆ ಬೇಸರವಿಲ್ಲ’ ಎಂದರು.

‘ನೋಟು ರದ್ದತಿಯಿಂದ ಬ್ಯಾಂಕುಗಳು ದಿವಾಳಿಯಾಗಿವೆ. ಜನಕಲ್ಯಾಣ ಯೋಜನೆಗಳಿಗೆ, ಉದ್ಯಮಿಗಳಿಗೆ ಸಾಲ ಸಿಗುತ್ತಿಲ್ಲ. ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಕೇಂದ್ರ ಸರ್ಕಾರ ಉದ್ಯಮಿಗಳ ಪರವಾಗಿದ್ದು, ರೈತರ ಪರವಾಗಿಲ್ಲ. ರೈತರ ಸಾಲ ಮನ್ನಾ ಮಾಡಿಲ್ಲ’ ಎಂದು ಉದ್ಯಮಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಎಮರ್ಜಿಂಗ್ ಕಲಬುರ್ಗಿ’ಯ ಸಂಘಟನೆಯ ಆಲೂರಿ ವೆಂಕಟ್, ನಿಖಿಲ್ ಕಿವಡೆ, ನಿತೀನ್ ಟಿ.ಟಿ., ಪೂಜಾ ವಿ.ಕೆ., ಪ್ರಶಾಂತ್ ಕೌಸಾಳೆ ಇದ್ದರು.

ಬಿಡುವಿನ ವೇಳೆಯಲ್ಲಿ ಓದು

‘ರಾಜಕೀಯ ಒತ್ತಡದ ಮಧ್ಯೆಯೂ ಓದುವುದು ಇಷ್ಟ. ಅರ್ಥಶಾಸ್ತ್ರ ಸೇರಿದಂತೆ ಅನೇಕ ವಿಷಯಗಳನ್ನು ಓದುತ್ತೇನೆ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸುತ್ತೇನೆ. ಸಮಾಜ ಸೇವೆ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಬಂದಿರುವುದರಿಂದ ಸದಾ ಜನರ ಮಧ್ಯೆ ಇದ್ದು, ಅವರ ಆಗು–ಹೋಗುಗಳ ಬಗ್ಗೆ ವಿಚಾರಿಸುತ್ತೇನೆ’ ಎಂದರು.

‘ಭಾವಾಂತರ ಯೋಜನೆ ಜಾರಿಗೆ ತನ್ನಿ’

‘ಭಾವಾಂತರ ಯೋಜನೆಯನ್ನು ಜಾರಿಗೆ ತರಬೇಕು ಮತ್ತು ದಾಲ್‌ಮಿಲ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಬೇಕು’ ಎಂದು ಎಚ್‌ಕೆಸಿಸಿಐ ಅಧ್ಯಕ್ಷ ಅಮರನಾಥ ಪಾಟೀಲ ಮನವಿ ಮಾಡಿದರು.

‘ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್)ಗಳನ್ನು ಸ್ಥಾಪಿಸಬೇಕು. ರಾಷ್ಟ್ರೀಯ ಹೆದ್ದಾರಿಗಳನ್ನು ವಿಸ್ತರಿಸಬೇಕು. ಇನ್‌ಕ್ಯುಬೇಷನ್ ಕೇಂದ್ರಗಳನ್ನು ಆರಂಭಿಸಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ)ಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಟ್ರೇಡ್ ಲೈಸನ್ಸ್‌ ವಿತರಣೆಯನ್ನು ಸರಳೀಕರಿಸಬೇಕು’ ಎಂದು ಹೇಳಿದರು.

ಸಂವಾದದಲ್ಲಿ ಸಚಿವರು ಹೇಳಿದ್ದು

*ಸಾಮಾಜಿಕ ಜಾಲತಾಣಗಳ ಬಳಕೆಯಿಂದ ಯುವಜನರು ಓದಿನತ್ತ ಗಮನ ಹರಿಸುತ್ತಿಲ್ಲ

*‘ಸಮೃದ್ಧಿ’, ‘ಐರಾವತ’ ಹಾಗೂ ‘ಪ್ರಬುದ್ಧ’ ಯೋಜನೆಗಳ ಮೂಲಕ ಯುವಕರಿಗೆ ಅವಕಾಶ

*ಕಲಬುರ್ಗಿಯಲ್ಲಿ ರಾಜ್ಯದ ಮೊದಲ ‘ಮಹಿಳಾ ಕೈಗಾರಿಕಾ ಪಾರ್ಕ್’ ಸ್ಥಾಪನೆ

*ದಾಲ್‌ಮಿಲ್‌ಗಳ ಪುನಶ್ಚೇತನಕ್ಕೆ ಸರ್ಕಾರದಿಂದ ಅಗತ್ಯ ಕ್ರಮ

*ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪೆಟ್ರೋಲ್, ಡೀಸೆಲ್‌ ಜಿಎಸ್‌ಟಿ ವ್ಯಾಪ್ತಿಗೆ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !