ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: ಪ್ರವೇಶ ಶುಲ್ಕ ಮೂರು ಪಟ್ಟು ಹೆಚ್ಚಳ!

ವಿಜ್ಞಾನ ಸ್ನಾತಕೋತ್ತರ: ₹ 4,650 ಇದ್ದ ಶುಲ್ಕ, ಈ ಬಾರಿ ₹ 14,450ಕ್ಕೆ
Published 17 ಜನವರಿ 2024, 6:44 IST
Last Updated 17 ಜನವರಿ 2024, 6:44 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯವು ಉನ್ನತ ಶಿಕ್ಷಣ ಇಲಾಖೆಯ ಸೂಚನೆ ಮೇರೆಗೆ ವಿವಿಧ ಸ್ನಾತಕ ಹಾಗೂ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಶುಲ್ಕವನ್ನು ಪ್ರಸಕ್ತ ಶೈಕ್ಷಣಿಕ ಅವಧಿಯಿಂದ ಎರಡರಿಂದ ಮೂರು ಪಟ್ಟು ಹೆಚ್ಚಿಸಲು ಮುಂದಾಗಿದ್ದು, ವಿ.ವಿ.ಯ ಈ ನಿರ್ಧಾರ ಬಡ ವಿದ್ಯಾರ್ಥಿಗಳಿಗೆ ಬರಸಿಡಿಲಿನಂತೆ ಬಂದೆರಗಿದೆ.

ಇಲ್ಲಿಯವರೆಗೂ ಸರ್ಕಾರಿ ಸ್ವಾಮ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಕೈಗೆಟಕುವ ದರದಲ್ಲಿ ಶುಲ್ಕವನ್ನು ನಿಗದಿ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಮೂರು ಪಟ್ಟು ಶುಲ್ಕ ಹೆಚ್ಚಳ ಮಾಡುವುದರ ಜೊತೆಗೆ, ಒಮ್ಮೆಲೇ ಅಷ್ಟೂ ಶುಲ್ಕವನ್ನು ಪಾವತಿ ಮಾಡಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ತಿಳಿದು ಬಂದಿದೆ. ಇಷ್ಟೊಂದು ಹಣವನ್ನು ಒಮ್ಮೆಲೇ ಕಟ್ಟುವ ಅನಿವಾರ್ಯತೆಗೊಳಗಾಗುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದಲೇ ವಂಚಿತರಾಗುವ ಸಾಧ್ಯತೆ ಇದೆ ಎಂದು ಶಿಕ್ಷಣ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆ ಹಾಗೂ ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಇತ್ತೀಚಿನ ವರ್ಷಗಳಲ್ಲಿ ವಿಶ್ವವಿದ್ಯಾಲಯಗಳಿಗೆ ಹೆಚ್ಚಿನ ಅನುದಾನ ಒದಗಿಸುತ್ತಿಲ್ಲ. ಇದರಿಂದಾಗಿ ವಿ.ವಿ.ಗಳಲ್ಲಿ ಬೋಧನೆ, ಸಂಶೋಧನೆ ಚಟುವಟಿಕೆಗಳು ಕುಂಠಿತಗೊಂಡಿವೆ. ವಿಶ್ವವಿದ್ಯಾಲಯ ತನ್ನ ಖರ್ಚನ್ನು ತಾನೇ ಭರಿಸಿಕೊಳ್ಳಬೇಕು ಎಂಬ ಧೋರಣೆ ಹೊಂದಿರುವ ಸರ್ಕಾರಗಳು ಆ ಖರ್ಚನ್ನು ವಿದ್ಯಾರ್ಥಿಗಳ ಪ್ರವೇಶ ಶುಲ್ಕ, ಪರೀಕ್ಷಾ ಶುಲ್ಕ ಹಾಗೂ ವಿವಿಧ ಪ್ರಮಾಣಪತ್ರಗಳ ಮೇಲಿನ ದಂಡದ ಮೊತ್ತ ಹೆಚ್ಚಳ ಮಾಡುವ ಮೂಲಕ ಭರಿಸಿಕೊಳ್ಳಬೇಕು ಎಂದು ಪರೋಕ್ಷ ಸೂಚನೆ ನೀಡಿದ್ದರಿಂದ ಗುಲಬರ್ಗಾ ವಿ.ವಿ. ಇದೀಗ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ.

ಒಂದು ಅಂದಾಜಿನ ಪ್ರಕಾರ ಕಳೆದ ವರ್ಷ ₹ 4,650 ಶುಲ್ಕ ಪಾವತಿ ಮಾಡಿದ್ದರೆ ಈ ಬಾರಿ ಆ ಮೊತ್ತವನ್ನು ₹ 14,450ಕ್ಕೆ ಹೆಚ್ಚಿಸಲಾಗಿದೆ. ಸ್ನಾತಕೋತ್ತರ ಕೋರ್ಸ್‌ನ ವಿಜ್ಞಾನ ನಿಕಾಯಗಳ ಬಹುಬೇಡಿಕೆಯ ಕೋರ್ಸ್‌ಗಳ ಶುಲ್ಕವನ್ನು ₹ 30 ಸಾವಿರದವರೆಗೂ ಹೆಚ್ಚಿಸಲಾಗಿದೆ ಎಂದು ವಿ.ವಿ.ಯ ಪ್ರಾಧ್ಯಾಪಕರೊಬ್ಬರು ‘ಪ್ರಜಾವಾಣಿ‘ಗೆ ಖಚಿತಪಡಿಸಿದರು.

ಗುವಿವಿಗೆ ಹೆಚ್ಚು ಬೇಡಿಕೆ: ಬೀದರ್, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ಒಂದೊಂದು ವಿಶ್ವವಿದ್ಯಾಲಯಗಳು ಆರಂಭವಾಗಿದ್ದರೂ ಅವುಗಳಲ್ಲಿ ಬಹುತೇಕ ವಿವಿಧ ಕೋರ್ಸ್‌ಗಳು ಆರಂಭವಾಗಿಲ್ಲ. ಪ್ರಾಧ್ಯಾಪಕರ ನೇಮಕಾತಿಯೂ ಇಲ್ಲ. ಹೀಗಾಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳ ವಿದ್ಯಾರ್ಥಿಗಳು ಈಗಲೂ ಗುಲಬರ್ಗಾ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿಯೇ ಅಧ್ಯಯನ ಮಾಡಲು ಇಚ್ಛೆ ಪಡುತ್ತಾರೆ. ದೂರದ ಉರುಗಳಿಂದ ಇಲ್ಲಿಗೆ ಬಂದು ದುಬಾರಿ ಕೊಠಡಿ ಬಾಡಿಗೆ ಪಡೆದು ವಾಸವಾಗುವುದರ ಜೊತೆಗೆ ಹೆಚ್ಚಿನ ಶುಲ್ಕವನ್ನೂ ಭರಿಸುವ ಅನಿವಾರ್ಯತೆಗೆ ವಿದ್ಯಾರ್ಥಿಗಳು ಸಿಲುಕಲಿದ್ದಾರೆ ಎಂದು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ (ಎಐಎಸ್‌ಇಸಿ) ಜಿಲ್ಲಾ ಸಂಚಾಲಕ ಆರ್‌.ಕೆ. ವೀರಭದ್ರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಕರೂಪದ ಶುಲ್ಕ ಜಾರಿ?

ಪ್ರತಿ ವರ್ಷ ಸಾಮಾನ್ಯ ಇತರೆ ಹಿಂದುಳಿದ ವರ್ಗ ಪ್ರವರ್ಗ 1 ಹಾಗೂ ಪರಿಶಿಷ್ಟ ಸಮುದಾಯಗಳ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಹೆಚ್ಚು ಕಡಿಮೆ ಇರುತ್ತಿತ್ತು. ಆದರೆ ಪ್ರಸಕ್ತ ವರ್ಷದಿಂದ ಎಲ್ಲರಿಗೂ ಸಾಮಾನ್ಯ ವಿದ್ಯಾರ್ಥಿಗಳಷ್ಟೇ ಅಧಿಕ ಶುಲ್ಕವನ್ನು ವಸೂಲಿ ಮಾಡಲು ವಿಶ್ವವಿದ್ಯಾಲಯ ಮುಂದಾಗಿದೆ ಎಂದು ಗೊತ್ತಾಗಿದೆ. ಇದರಿಂದಾಗಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳೂ ಉನ್ನತ ಶಿಕ್ಷಣ ಪಡೆಯಬೇಕು ಎಂದರೆ ಹೆಚ್ಚಿನ ಶುಲ್ಕ ತೆರಬೇಕಾದ ಸನ್ನಿವೇಶ ಎದುರಾಗಿದೆ ಎಂದು ವಿ.ವಿ. ಮೂಲಗಳು ತಿಳಿಸಿವೆ. ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆಯಾ ವರ್ಗದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ದೊರೆಯುತ್ತದೆ. ಆದರೆ ತಾವು ಹಿಂದೆ ಅಧ್ಯಯನ ಮಾಡಿದ ಕೋರ್ಸ್‌ನ ಅಂಕಪಟ್ಟಿಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿದರೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ. ಆದರೆ ಗುಲಬರ್ಗಾ ವಿ.ವಿ. ಪರೀಕ್ಷೆ ನಡೆಸಿ ಹಲವು ತಿಂಗಳಾದರೂ ಅಂಕಪಟ್ಟಿಗಳನ್ನೇ ನೀಡುತ್ತಿಲ್ಲ. ಹೀಗಾಗಿ ಶಿಷ್ಯವೇತನದಿಂದಲೂ ವಂಚಿತರಾಗುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಇಂದು ಮಹತ್ವದ ಸಭೆ

ಶುಲ್ಕ ಹೆಚ್ಚಳ ಕುರಿತು ಚರ್ಚಿಸಲು ಕುಲಪತಿ ಪ್ರೊ. ದಯಾನಂದ ಅಗಸರ ಕುಲಸಚಿವ (ಆಡಳಿತ) ಬಿ. ಶರಣಪ್ಪ ಅವರು ಇದೇ 17ರಂದು ವಿಶ್ವವಿದ್ಯಾಲಯದ ಡೀನ್‌ ಹಾಗೂ ವಿಭಾಗ ಮುಖ್ಯಸ್ಥರ ಸಭೆಯನ್ನು ಕರೆದಿದ್ದಾರೆ. ಸಭೆಯಲ್ಲಿ ಶುಲ್ಕ ಹೆಚ್ಚಳದ ನಿರ್ಧಾರಕ್ಕೆ ಒಪ್ಪಿಗೆ ಪಡೆಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಗುಲಬರ್ಗಾ ವಿಶ್ವವಿದ್ಯಾಲಯದ ಶುಲ್ಕ ಹೆಚ್ಚಳದಿಂದ ಹಲವು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಸರ್ಕಾರ ವಿ.ವಿ.ಗಳಿಗೆ ಅನುದಾನ ಹೆಚ್ಚಿಸಬೇಕು
-ಸ್ನೇಹಾ ಕಟ್ಟಿಮನಿ, ಜಿಲ್ಲಾ ಅಧ್ಯಕ್ಷೆ ಎಐಡಿಎಸ್‌ಓ ವಿದ್ಯಾರ್ಥಿ ಸಂಘಟನೆ
ವಿಶ್ವವಿದ್ಯಾಲಯಗಳು ಶುಲ್ಕ ಹೆಚ್ಚಳ ನಿರ್ಧಾರವನ್ನು ಹಿಂದಕ್ಕೆ ಪಡೆಯದಿದ್ದರೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದೇಶ ವಾಪಸ್ ಪಡೆಯಬೇಕು
-ಪಾಯಪ್ಪ ಯಾದವ್, ಎಬಿವಿಪಿ ಕಲಬುರಗಿ ತಾಲ್ಲೂಕು ಸಂಚಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT