ಬುಧವಾರ, ಆಗಸ್ಟ್ 10, 2022
25 °C
ಜಯಂತ್ಯುತ್ಸವದಲ್ಲಿ ಸಿಯುಕೆ ಕುಲಸಚಿವ ಡಾ.ಬಸವರಾಜ ಡೋಣೂರ ಅಭಿಮತ

ವಚನ ಸಾಹಿತ್ಯಕ್ಕೆ ಫ.ಗು.ಹಳಕಟ್ಟಿ ಸೇವೆ ಅವಿಸ್ಮರಣಿಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜೇವರ್ಗಿ:ಡಾ.ಫ.ಗು.ಹಳಕಟ್ಟಿಯವರು ತಮ್ಮ ಜೀವನದುದ್ದಕ್ಕೂ ವಚನ ಸಾಹಿತ್ಯ ರಕ್ಷಣೆಗೆ ಅವಿರತವಾಗಿ ಶ್ರಮಿಸಿದ್ದಾರೆ. 12ನೇ ಶತಮಾನದಲ್ಲಿನ ಬಸವಾದಿ ಶರಣರು ತಾಡೋಲೆಗಳಲ್ಲಿ ರಚಿಸಿದ ವಚನಗಳ ಕಟ್ಟುಗಳನ್ನು ಪ್ರತಿ ಮನೆಗಳು ಹಾಗೂ ಮಠ, ಮಂದಿರಗಳಲ್ಲಿದ್ದ ತಾಡೋಲೆಗಳನ್ನು ಸಂಗ್ರಹಿಸಿ ಮುದ್ರಣ ಮಾಡಿಸುವ ಮುಂದಿನ ಪೀಳಿಗೆಗೆ ವಚನ ಸಾಹಿತ್ಯವನ್ನು ನೀಡಿದ್ದಾರೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಡಾ. ಬಸವರಾಜ ಡೋಣೂರ ಹೇಳಿದರು.

ಪಟ್ಟಣದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ ಶನಿವಾರ ಹಮ್ಮಿಕೊಂಡಿದ್ದ ವಚನ ಸಾಹಿತ್ಯದ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರ ಜಯಂತ್ಯುತ್ಸವ ಹಾಗೂ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕನ್ನಡ ವಿಷಯದಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಫ.ಗು.ಹಳಕಟ್ಟಿ ಅವರು ಈ ನಾಡಿನ ಹಾಗೂ ದೇಶದ ಬಹುದೊಡ್ಡ ಆಸ್ತಿ. ಅವರ ಅವಿರತ ಶ್ರಮದಿಂದ ಇಂದಿನ ಪೀಳಿಗೆಗೆ ವಚನ ಸಾಹಿತ್ಯ ಅಧ್ಯಯನಕ್ಕೆ ಲಭ್ಯವಾಗಿದೆ. ಇಂದು ಇಡೀ ಕನ್ನಡ ನಾಡಿನಲ್ಲಿ ಹಳಕಟ್ಟಿ ಅವರ ಜಯಂತ್ಯುತ್ಸವವನ್ನು ಆಚರಿಸ ಲಾಗು ತ್ತಿದೆ. ವಚನ ಸಾಹಿತ್ಯ ಹಾಗೂ ಶರಣ ಸಾಹಿತ್ಯಕ್ಕೆ ಅವರು ಅದ್ವಿತೀಯ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ನೆಲೋಗಿ ವಿರಕ್ತಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಇಂದಿನ ಯುವ ಪೀಳಿಗೆ ವಚನ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸುಸಂಸ್ಕೃ ಸಮಾಜ ನಿರ್ಮಾಣ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದರು.

ಸೊನ್ನದ ಸಿದ್ಧಲಿಂಗೇಶ್ವರ ವಿರಕ್ತ ಮಠದ ಪೀಠಾಧಿಪತಿ ಡಾ. ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಗಂವ್ಹಾರದ ಸದ್ಗುರು ತ್ರಿವಿಕ್ರಮಾನಂದ ಸರಸ್ವತಿ ಮಠದ ಪಾಂಡುರಂಗ ಮಹಾರಾಜರು ಸಾನಿಧ್ಯ ವಹಿಸಿದ್ದರು. ಸಾಹಿತಿ ಶರಣಗೌಡ ಪಾಟೀಲ ಜೈನಾಪೂರ ಉಪನ್ಯಾಸ ನೀಡಿದರು. 

ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕನ್ನಡ ವಿಷಯದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಸತ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ವಿಜಯಕುಮಾರ ಹಿರೇಮಠ, ಗೌರವಾಧ್ಯಕ್ಷ ಡಾ.ಅಮರೇಶ ಕೋಳಕೂರ, ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಕೆ.ಬಿರಾದಾರ, ಪುರಸಭೆ ಉಪಾಧ್ಯಕ್ಷ ಗುರುಶಾಂತಯ್ಯ ಹಿರೇಮಠ, ಗೌರವ ಕಾರ್ಯದರ್ಶಿಗಳಾದ ಕಲ್ಯಾಣಕುಮಾರ ಸಂಗಾವಿ, ಶ್ರೀಹರಿ ಕರಕಿಹಳ್ಳಿ, ಬಿ.ಜಿ.ಪಾಟೀಲ ರಾಸಣಗಿ, ಡಾ. ಮಹಾಂತೇಶ ಹಿರೇಮಠ, ಷಣ್ಮುಖಪ್ಪ ಹಿರೇಗೌಡ, ವೆಂಕಟೇಶ ಹರವಾಳ, ಶಿಕ್ಷಕಿ ಬಸಮ್ಮ ಹೂಗಾರ, ಎಸ್.ಟಿ.ಬಿರಾದಾರ, ಉಮಾಕಾಂತ ಗೊಲಗೇರಿ, ಮರೆಪ್ಪ ಸರಡಗಿ, ಬಸವರಾಜ ಬಾಗೇವಾಡಿ, ಪ್ರಕಾಶ ಫುಲಾರೆ, ನಿವೃತ್ತ ಶಿಕ್ಷಕ ಕಂಟೆಪ್ಪ ಹರವಾಳ, ಚಂದ್ರಶೇಖರ ತುಂಬಗಿ, ರಾಜು ಮುದ್ದಡಗಿ, ಶಿಕ್ಷಕ ಶರಣಪ್ಪ ಧಾರವಾಡಕರ ಸೇರಿ ವಿವಿಧ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮೃದ್ಧಿ ಗೋಳೆದ್ ವಚನ ನೃತ್ಯ ಪ್ರದರ್ಶಿಸಿದರು. ಸಾಹಿತಿ ಡಾ.ಧರ್ಮಣ್ಣ ಕೆ ಬಡಿಗೇರ ಪ್ರಾಸ್ತಾವಿಕ ಮಾತನಾಡಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.