ಭಾನುವಾರ, ಆಗಸ್ಟ್ 14, 2022
28 °C

ರೈತ ಮುಖಂಡರ ಬಂಧನಕ್ಕೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ವಿಧಾನ ಪರಿಷತ್‌ನಲ್ಲಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ ಅಂಗೀಕರಿಸಿರುವುದನ್ನು ಮತ್ತು ಅದನ್ನು ವಿರೋಧಿಸಿದ ರೈತ ಸಂಘಟನೆಗಳ ಮುಖಂಡರನ್ನು ಬಂಧಿಸಿರುವ ಕ್ರಮವನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷವು ಖಂಡಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ.ದಿವಾಕರ್, ‘ಕೃಷಿ ಭೂಮಿಯನ್ನು ಶ್ರೀಮಂತ ಉದ್ಯಮಿಗಳು ಖರೀದಿಸಲು ಅವಕಾಶ ನೀಡುವ ಈ ಮಸೂದೆಗೆ ರೈತ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಗಿದ್ದರೂ ಅದಕ್ಕೆ ಯಾವುದೇ ಬೆಲೆ ಕೊಡದೆ ಬಿಜೆಪಿ ಸರ್ಕಾರವು ಅಪ್ರಜಾತಾಂತ್ರಿಕವಾಗಿ ವಿಧಾನ ಪರಿಷತ್ತಿನಲ್ಲಿ ಅಂಗೀಕರಿಸಿದೆ. ಮಣ್ಣಿನ ಮಕ್ಕಳ ಪಕ್ಷವೆಂದು ಹೇಳಿಕೊಳ್ಳುವ ಜೆಡಿಎಸ್ ಸದಸ್ಯರು ಈ ಮಸೂದೆಗೆ ನಾಚಿಕೆಯಿಲ್ಲದೆ ಬೆಂಬಲ ಸೂಚಿಸಿ ಅವಕಾಶವಾದಿ ರಾಜಕೀಯಕ್ಕೆ ಮಿತಿಯೆಂಬುದೇ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಟೀಕಿಸಿದ್ದಾರೆ.

ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ, ರಾಜ್ಯದ ವಿವಿಧ ರೈತ ಸಂಘಟನೆಗಳ ಮುಖಂಡರನ್ನು ಬಂಧಿಸಲಾಗಿದೆ. ರೈತ ಕೃಷಿ ಕಾರ್ಮಿಕರ ಸಂಘಟನೆಯ (ಎಐಕೆಕೆಎಂಎಸ್) ರಾಜ್ಯ ನಾಯಕರಾದ ಶಿವಪ್ರಕಾಶ್ ಎಚ್.ಪಿ. ಮತ್ತು ಎಐಯುಟಿಯುಸಿಯ ಶ್ರೀಕಾಂತ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಚಾಮರಸ ಮಾಲಿಪಾಟೀಲ, ಐಕ್ಯ ಹೋರಾಟ ಸಮಿತಿಯ ಪ್ರಕಾಶ್ ಕಮ್ಮರಡಿ ಮೊದಲಾದ ನಾಯಕರು ಬಂಧನಕ್ಕೊಳಗಾಗಿದ್ದಾರೆ. ರೈತರನ್ನು ಮನವೊಲಿಸಲು ಕೈಲಾಗದ ‌ಸರ್ಕಾರ ಬಲಪ್ರಯೋಗದ ಮೂಲಕ ಹೋರಾಟವನ್ನು ಬಗ್ಗು ಬಡಿಯುವ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದೆ. ಬಂಧನಕ್ಕೊಳಗಾದ ಹೋರಾಟಗಾರರನ್ನು ತಕ್ಷಣವೇ ಬೇಷರತ್ತಾಗಿ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು