ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಣಮಗೇರಾ ಸಮೀಪದ ಕಾರ್ಖಾನೆ ಬಳಿ ರೈತರಿಂದ ಪ್ರತಿಭಟನೆ

Last Updated 3 ನವೆಂಬರ್ 2022, 14:10 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಚಿಣಮಗೇರಾ ಗ್ರಾಮದಲ್ಲಿರುವ ಕೆಪಿಆರ್‌ ಶುಗರ್ಸ್ ಅಂಡ್ ಅ‍‍ಪೆರಲ್ಸ್ ಸಕ್ಕರೆ ಕಾರ್ಖಾನೆಯು ಕಬ್ಬು ನುರಿಸುವ ಹಂಗಾಮು ಶುರುವಾದರೂ ಇನ್ನೂ ರೈತರಿಂದ ಕಬ್ಬು ಪಡೆಯುತ್ತಿಲ್ಲ ಮತ್ತು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾರ್ಖಾನೆ ವ್ಯಾಪ್ತಿಯ ಕಬ್ಬು ಬೆಳೆಗಾರರು ಸಿದ್ದರಾಮ ಶಿವಾಚಾರ್ಯರ ನೇತೃತ್ವದಲ್ಲಿ ಗುರುವಾರ ಕಾರ್ಖಾನೆ ಬಳಿ ಪ್ರತಿಭಟನೆ ನಡೆಸಿದರು.

‘ಕಬ್ಬು ಬೆಳೆಗಾರರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಕಬ್ಬು ನುರಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು. ಜಿಲ್ಲಾಡಳಿತಕ್ಕೆ ಒಂದು ವಾರದ ಗಡುವು ನೀಡುತ್ತೇವೆ. ಸಮಸ್ಯೆ ಬಗೆಹರಿಸದಿದ್ದಲ್ಲಿ, ಕಾರ್ಖಾನೆಯ ಗೇಟಿನ ಕೀಲಿ ಒಡೆದು ಕಬ್ಬಿನ ಲಾರಿಗಳನ್ನು ಒಳತರಲಾಗುವುದು’ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶ್ರೀಮಂತ ಬಿರಾದಾರ ಮಾತನಾಡಿ, ‘ರೈತರು ಇದೀಗ ಕಬ್ಬು ಬೆಳೆಯುವ ಪ್ರಮಾಣ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಈಗ ಇರುವ ನಾಲ್ಕು ಕಾರ್ಖಾನೆಗಳ ಜೊತೆಗೆ ಇನ್ನೂ ಎರಡು ಆರಂಭವಾದರೂ ಸಾಕಾಗುವುದಿಲ್ಲ. ಹೀಗಾಗಿ, ಕೆಪಿಆರ್‌ ಕಾರ್ಖಾನೆ ಆಡಳಿತ ಮಂಡಳಿಯವರು ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ. ಆದರೆ, ರೈತರಿಗೆ ತೊಂದರೆ ನೀಡಬೇಡಿ. ಮೊದಲೇ ಅತಿವೃಷ್ಟಿಯಿಂದ ಕಷ್ಟದಲ್ಲಿರುವ ರೈತರನ್ನು ಕೆಣಕಬೇಡಿ’ ಎಂದರು.

‘ರೈತರು ತಾವು ಕಷ್ಟಪಟ್ಟು ಬೆಳೆದ ಕಬ್ಬನ್ನು ತಮಗೆ ಉತ್ತಮ ಬೆಲೆ ಸಿಗುವ ಕಾರ್ಖಾನೆಗೆ ನೀಡಲು ಸ್ವತಂತ್ರರು. ಈ ವಿಚಾರದಲ್ಲಿ ಕಾರ್ಖಾನೆಯವರು ಒತ್ತಡ ಹೇರುವಂತಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ತ್ರಿಪಕ್ಷೀಯ ಒಪ್ಪಂದವು ಉತ್ತಮ ಆಗಿದ್ದು, ಅದನ್ನು ಪಾಲಿಸಲು ಎಲ್ಲರೂ ಒತ್ತಡ ಹಾಕಬೇಕು’ ಎಂದು ಹೇಳಿದರು.

ನವ ಕರ್ನಾಟಕ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ದಯಾನಂದ ಪಾಟೀಲ ಮಾತನಾಡಿ, ‘ರೈತರ ಭಾವನೆಗಳಿಗೆ ಜಿಲ್ಲಾಡಳಿತ ಬೆಲೆ ಕೊಟ್ಟು ಎರಡು ಸಕ್ಕರೆ ಕಾರ್ಖಾನೆಗಳ ಮಧ್ಯೆ ಉಂಟಾಗಿರುವ ವಿವಾದವನ್ನು ಇತ್ಯರ್ಥಗೊಳಿಸಬೇಕು. ರೈತರ ಕಬ್ಬು ನುರಿಸುವ ವ್ಯವಸ್ಥೆ ಮಾಡಬೇಕು’ ಎಂದರು.

ಅಫಜಲಪುರ ತಹಶೀಲ್ದಾರ್ ಸಂಜೀವಕುಮಾರ ದಾಸರ ಅವರಿಗೆ ಮನವಿಪತ್ರ ಸಲ್ಲಿಸಿದರು. ರೈತ ಮುಖಂಡರಾದ ಸಿದ್ದರಾಮ ಧಣ್ಣೂರ ಗುಡ್ಡೇವಾಡಿ, ಮಹಾಂತಪ್ಪ ಬಬಲೇಶ್ವರ ಮಾತೋಳಿ, ಲತೀಫ್ ಪಟೇಲ್ ಅತನೂರ, ಶರಣಕುಮಾರ ಬಿಲ್ಲಾಡ, ಮಂಜು ವಿಭೂತಿ, ಶರಣು, ಸಮರ್ಥ, ಶಾಂತಪ್ಪ ಮಾಲಿಪಾಟೀಲ, ಮಲ್ಲಿನಾಥ, ಹಣಮಂತ ಮೇಳಕುಂದಾ, ಮಡಿವಾಳಪ್ಪ ಹೂವಿನಹಳ್ಳಿ, ಸೋಮಶೇಖರ ಕುಂಬಾರ ನೇತೃತ್ವ, ಶಿವರಾಜ ಜಾಲಿಹಾಳ, ಶರಣಪ್ಪ ಜಿಡಗೆ ಬಂದರವಾಡ, ರವಿ, ತುಕಾರಾಮ ದಣ್ಣೂರ ಇದ್ದರು.

ಚಟುವಟಿಕೆ ಯಾಕೆ ಸ್ಥಗಿತ?

ಕೆಪಿಆರ್ ಶುಗರ್ಸ್ ತನ್ನ ವ್ಯಾಪ್ತಿಯನ್ನು ಮೀರಿ ರೈತರಿಂದ ಹೆಚ್ಚುವರಿ ಕಬ್ಬು ಪಡೆದು ನುರಿಸಿದೆ ಎಂದು ಆರೋಪಿಸಿ ಆಳಂದ ತಾಲ್ಲೂಕಿನ ಭೂಸನೂರ ಎಸ್‌ಎಲ್ಎನ್ ಸಕ್ಕರೆ ಕಾರ್ಖಾನೆಯು ಹೈಕೋರ್ಟ್‌ನ ಕಲಬುರಗಿ ಪೀಠದ ಮೆಟ್ಟಿಲೇರಿತ್ತು. ಹೀಗಾಗಿ, ಕೆಪಿಆರ್‌ ಶುಗರ್ಸ್ ಕಾರ್ಖಾನೆ ಕಬ್ಬು ನುರಿಸುವುದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿ, ಸಮಸ್ಯೆ ಇತ್ಯರ್ಥಗೊಳಿಸುವ ಹೊಣೆಯನ್ನು ಜಿಲ್ಲಾಡಳಿತಕ್ಕೆ ವಹಿಸಿತ್ತು. ಹೀಗಾಗಿ, ಕೆಪಿಆರ್‌ ಶುಗರ್ಸ್ ಚಟುವಟಿಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕಾರ್ಖಾನೆ ಸ್ಥಗಿತಗೊಂಡಿದ್ದರಿಂದ ರೈತರು ಕಬ್ಬು ನುರಿಸುವುದಕ್ಕೆ ತೊಂದರೆಯಾಗಿದೆ. ಇನ್ನಷ್ಟು ದಿನ ಬಿಟ್ಟರೆ ಕಬ್ಬು ಒಣಗಿ ಹೋಗಿ ಇಳುವರಿ ಕುಂಠಿತವಾಗುತ್ತದೆ. ಜಿಲ್ಲಾಧಿಕಾರಿಗಳು ಮಧ್ಯಸ್ಥಿಕೆ ವಹಿಸಿ ತಕ್ಷಣ ಸಮಸ್ಯೆಯನ್ನು ಬಗೆಹರಿಸಬೇಕು
ಸಿದ್ದರಾಮ ಶಿವಾಚಾರ್ಯರು
ಚಿಣಮಗೇರಾ ಮಹಾಂತಪುರ ಮಠ

ಹತ್ತಾರು ರೈತರು ತಮ್ಮ ಜಮೀನು ನೀಡಿ ಇಲ್ಲಿ ಕಾರ್ಖಾನೆ ಬರುವಂತೆ ಸಹಕರಿಸಿದ್ದಾರೆ. ಶ್ರೀಮಠವೂ ಇದಕ್ಕಾಗಿ ಭೂಮಿ ನೀಡಿದೆ. ಜಿಲ್ಲಾಡಳಿತವು ರೈತರ ಮನವಿಯನ್ನು ಪುರಸ್ಕರಿಸಿ ಕಾರ್ಖಾನೆ ಪುನರಾರಂಭಿಸಬೇಕು. ಇಲ್ಲಿ ರೈತರ ಹಿತಾಸಕ್ತಿ ಮುಖ್ಯವಾಗಬೇಕು
ವೀರಮಹಾಂತ ಶಿವಾಚಾರ್ಯರು
ಚಿಣಮಗೇರಾ ಮಠ

ರೈತರ ಮನವಿಯನ್ನು ಜಿಲ್ಲಾಧಿಕಾರಿ ಅವರಿಗೆ ತಲುಪಿಸುತ್ತೇನೆ. ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸುತ್ತೇನೆ
ಸಂಜೀವಕುಮಾರ ದಾಸರ
ಅಫಜಲಪುರ ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT