ಶನಿವಾರ, ಸೆಪ್ಟೆಂಬರ್ 18, 2021
26 °C

ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆತಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅಫಜಲಪುರ: ಸೊನ್ನ ಭೀಮಾ ಏತ ನೀರಾವರಿ ಕಾಲುವೆಗಳಲ್ಲಿನ ಹೂಳು ತೆಗೆದು, ನೀರು ಹರಿಸುವಂತೆ ಒತ್ತಾಯಿಸಿ ತಾಲ್ಲೂಕು ಪ್ರಾಂತ ರೈತ ಸಂಘಟನೆ ಹಾಗೂ ಜಲ ಸಮಿತಿಗಳ ಒಕ್ಕೂಟದ ರೈತರು ಸೋಮವಾರ ಕಲಬುರ್ಗಿ–ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

‘ಹೆದ್ದಾರಿಯಲ್ಲಿ ಪ್ರತಿಭಟಸಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ನೀರಾವರಿ ಕಚೇರಿ ಮುಂದೆ ನಡೆಸುವಂತೆ‘ ಕೋರಿದ ಸಿಪಿಐ ಜಗದೀಶ ಪಾಳಾ ಅವರ ಮನವಿಗೆ ಪ್ರತಿಭಟನಾಕಾರರು ಸ್ಪಂದಿಸಿದರು.

ಉಪವಿಭಾಗದ ಅಧಿಕಾರಿ ಮೋನಾ ರೋತ್ ಅವರು ರೈತ ಮುಖಂಡರ ಮನವಿ ಪತ್ರ ಸ್ವೀಕರಿಸಿ, ‘ಕೆಲವೇ ದಿನಗಳಲ್ಲಿ ರಾಜ್ಯ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಹಾಗೂ ರೈತರ ಜತೆ ಸಭೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸುವುದಾಗಿ‘ ಭರವಸೆ ನೀಡಿದರು.

ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಮಾತನಾಡಿ, ’ಸುಮಾರು ₹ 900 ಕೋಟಿ ವೆಚ್ಚದ ಭೀಮಾ ಏತ ನೀರಾವರಿ ಯೋಜನೆ ಆರಂಭವಾಗಿ 2 ದಶಕ ಕಳೆದರೂ 43 ಗ್ರಾಮಗಳಿಗೆ ಕಾಲುವೆ ನೀರು ಹರಿದಿಲ್ಲ. ಕಾಲುವೆ ಹೂಳು ತೆಗೆಯುವಲ್ಲಿ ಅವ್ಯವಹಾರ ನಡೆದಿದ್ದು, ವರ್ಷದಲ್ಲಿ 2 ಬೆಳೆಗಳನ್ನು ಸಹ ಬೆಳೆಯಲು ಆಗುತ್ತಿಲ್ಲ. ಕಚೇರಿಯ ಎಲ್ಲ ವ್ಯವಸ್ಥೆ ಇದ್ದರೂ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮೊಶೆಟ್ಟಿ ಮಾತನಾಡಿ, ‘2022ರ ಏಪ್ರಿಲ್ ವೇಳೆಗೆ ಕಾಲುವೆಯಲ್ಲಿ ನೀರು ಹರಿಸಬೇಕು. ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಭೂಮಿ ಕಳೆದುಕೊಂಡ ರೈತರಿಗೆ ಆಲಮಟ್ಟಿ ಯೋಜನೆ ಅಡಿ ಪರಿಹಾರ ನೀಡಿ, ಮುಳುಗಡೆಯಾದ ಗ್ರಾಮದ ಜನರಿಗೆ ಪುನರ್ವಸತಿ ಕಲ್ಪಿಸಬೇಕು‘ ಎಂದು ಆಗ್ರಹಿಸಿದರು.

ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ ಜಾಕಾ ಮಾತನಾಡಿ, ‘ಉದ್ಯೋಗ ಖಾತ್ರಿ ಯೋಜನೆಯಡಿ ಕಾಲುವೆ ಹೂಳೆತ್ತಲಾಗುವುದು. ಈ ಬಗ್ಗೆ ತಾಲ್ಲೂಕು ಪಂಚಾಯಿತಿ ಇಒ ಜತೆ ಚರ್ಚಿಸಲಾಗುವುದು. ಗ್ರಾಮ ಪಂಚಾಯಿತಿ ಪಿಡಿಒಗಳ ಸಭೆ ಕರೆಯುತ್ತೇವೆ‘ ಎಂದು ಹೇಳಿದರು.

 ಪ್ರತಿಭಟನೆಯಲ್ಲಿ ಮುಖಂಡರಾದ ಅಲ್ತಾಫ್ ಇನಾಮದಾರ, ಅಮೃತರಾವ ಪಾಟೀಲ, ಸಿದ್ದರಾಮ ದಣ್ಣೂರ, ಭೀಮರಾವ ಗೌರ, ಅಪ್ಪಾಸಾಬ ಪಾಟೀಲ, ಗುರು ಚಾಂದಕೋಟೆ, ಭಾಗಣ್ಣ ಕುಂಬಾರ, ಸಿದ್ದು ಮಗಿ, ಮಹಾಂತೇಶ ಬಡದಾಳ, ಅಮರ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ನಾಗಯ್ಯ ಆಕಾಶ ಮಠ, ಅಶೋಕ ಬಬಲೇಶ್ವರ, ಬಸಣ್ಣ ಗುಣಾರಿ, ಬಸವರಾಜ ನಾಗನೂರ, ನಾಗಣ್ಣ ಸುತಾರ, ಯಲ್ಲಾಲಿಂಗ ನೆಲೋಗಿ, ಶಿವಶರಣಪ್ಪ ಪಾಟೀಲ, ಅಶೋಕ ಬಗಲಿ, ಶಬ್ಬೀರ ನದಾಫ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು