ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳೆ ನಷ್ಟ; ಕೇಳುವವರಿಲ್ಲ ರೈತರ ಸಂಕಷ್ಟ

ಕಲಬುರ್ಗಿ ಜಿಲ್ಲೆಯ ವಿವಿಧೆಡೆ ಹಾಳಾದ ತೊಗರಿ, ಹೆಸರು, ಉದ್ದಿನ ಬೆಳೆ; ಸಮೀಕ್ಷೆ ವಿಳಂಬ
Last Updated 13 ಸೆಪ್ಟೆಂಬರ್ 2021, 4:22 IST
ಅಕ್ಷರ ಗಾತ್ರ

ಕಲಬುರ್ಗಿ: ತೊಗರಿಯ ಕಣಜ ಎಂದು ಕರೆಸಿಕೊಂಡ ಕಲಬುರ್ಗಿ ಜಿಲ್ಲೆಗೆ ವರುಣ ಈ ಬಾರಿ ಅವಕೃಪೆ ತೋರಿದ ಪರಿಣಾಮ ಬಹುತೇಕ ತೊಗರಿ ಬೆಳೆ ನೀರಲ್ಲಿ ನಿಂತು ರೈತರಿಗೆ ಕಣ್ಣೀರು ತರಿಸಿದೆ. ಜೊತೆಗೆ, ರೊಕ್ಕದ ಬೆಳೆ ಎಂದು ಕರೆಸಿಕೊಳ್ಳುವ ಅಲ್ಪಾವಧಿಯ ಹೆಸರು, ಉದ್ದು, ಸೋಯಾ ಸಹ ಮಳೆಯ ಹೊಡೆತಕ್ಕೆ ಕೊಳೆತು ಹೋಗಿವೆ.

ಕಳೆದ ಬಾರಿ ಸೆಪ್ಟೆಂಬರ್, ಅಕ್ಟೋಬರ್‌ನಲ್ಲಿ ಸುರಿದ ಮಳೆ ಹಾಗೂ ಮಹಾರಾಷ್ಟ್ರದ ಅಣೆಕಟ್ಟೆಗಳಿಂದ ಜಿಲ್ಲೆಯ ಭೀಮಾ ನದಿಗೆ ವ್ಯಾಪಕವಾಗಿ ನೀರು ಹರಿಸಿದ್ದರಿಂದ ಅಫಜಲಪುರ, ಕಲಬುರ್ಗಿ, ಜೇವರ್ಗಿ, ಚಿತ್ತಾಪುರ, ಶಹಾಬಾದ್‌ ತಾಲ್ಲೂಕಿನಲ್ಲಿ ಬೆಳೆದಿದ್ದ ಬೆಳೆಗಳಿಗೆ ಭಾರಿ ಹಾನಿಯಾಗಿತ್ತು. ಈ ಬಾರಿಯಾದರೂ ಉತ್ತಮ ಇಳುವರಿ ದೊರೆಯಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, 15 ದಿನಗಳಿಂದ ಸುರಿದ ಮಳೆಯು ತೀವ್ರ ನಿರಾಸೆಯನ್ನೂ, ಆರ್ಥಿಕ ನಷ್ಟವನ್ನೂ ಮಾಡಿದೆ.

ಕೊರೊನಾ ಲಾಕ್‌ಡೌನ್‌ನಿಂದ ತತ್ತರಿಸಿ ಬೇರೆ ರಾಜ್ಯಗಳಿಗೆ ಕೆಲಸಕ್ಕೆ ಹೋಗಿದ್ದವರು ವಾಪಸಾಗಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಹೀಗಾಗಿ, ಈ ಬಾರಿ ದಾಖಲೆಯ 7.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ತೊಗರಿ, ಹೆಸರು, ಉದ್ದಿನ ಬೆಳೆಯನ್ನು ಬೆಳೆಯಲಾಗಿತ್ತು.

ಆದರೆ, ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಸುರಿದ ಮಳೆಯು ಉತ್ತಮ ಬೆಳೆ ಬಂದು ಒಂದಷ್ಟು ಆದಾಯದ ನಿರೀಕ್ಷೆಯಲ್ಲಿದ್ದ ರೈತಾಪಿ ಜನಗಳ ಜಂಘಾಬಲವನ್ನು ಉಡುಗಿಸಿದೆ. ಜಿಲ್ಲಾಡಳಿತವು ಕೃಷಿ, ಕಂದಾಯ ಇಲಾಖೆಯ ಸಹಯೋಗದಲ್ಲಿ ಕೂಡಲೇ ಜಂಟಿ ಸಮೀಕ್ಷೆಯನ್ನು ನಡೆಸಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.

ಇತ್ತೀಚೆಗೆ ಕೇಂದ್ರ ಪುರಸ್ಕೃತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಮೇಲ್ವಿಚಾರಣೆ ಸಮಿತಿ (ದಿಶಾ) ಸಭೆಯಲ್ಲಿ ಸಂಸದ ಡಾ. ಉಮೇಶ ಜಾಧವ ಅವರು, ‘ಬೆಳೆ ಹಾನಿಯಾದ ಬಗ್ಗೆ ಕೂಡಲೇ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ನಷ್ಟದ ವರದಿ ಸಲ್ಲಿಸಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಎಲ್ಲ ತಾಲ್ಲೂಕುಗಳಲ್ಲಿ ಯುದ್ಧೋಪಾದಿಯಲ್ಲಿ ಸಮೀಕ್ಷೆ ನಡೆಸಿ ತಕ್ಷಣವೇ ಪರಿಹಾರ ಘೋಷಿಸಬೇಕು ಎಂಬ ಒತ್ತಾಯವೂ ಕೇಳಿ ಬರುತ್ತಿದೆ.

ಚಿಂಚೋಳಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಹೆಸರು ಉದ್ದು ಸಂಪೂರ್ಣ ಹಾಳಾಗಿದೆ. ಇದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೋಹಿಣಿ ಮಳೆಯಲ್ಲಿ ಬಿತ್ತನೆ ನಡೆಸಿದ ಶೇ 10ರಷ್ಟು ರೈತರಿಗೆ ಮಾತ್ರ ಬೆಳೆ ಕೈಗೆ ಬಂದಿವೆ. ಆದರೆ ಮಿರ್ಗಾ ಹಾಗೂ ನಂತರ ಬಿತ್ತನೆ ನಡೆಸಿದ ಹೊಲಗಳಲ್ಲಿ ರಾಶಿ ಸಮಯದಲ್ಲಿಯೇ ಮಳೆ ಬೇತಾಳನಂತೆ ಬಂದೆರಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ.

ಹಿಂಗಾರಿನ ಕೃಷಿ ಚಟುವಟಿಕೆ ಜತೆಗೆ ಹಬ್ಬ ಹರಿದಿನಗಳ ಆಚರಣೆಗೆ ಊರುಗೋಲಾಗುತ್ತಿದ್ದ ಅಲ್ಪಾವಧಿಯ ಹೆಸರು, ಉದ್ದು ಬೆಳೆ ಪ್ರಸಕ್ತ ವರ್ಷ ಮಳೆಗೆ ಆಹುತಿಯಾಗಿದ್ದರಿಂದ ರೈತರು ಲೇವಾದೇವಿಗಾರರ ಮೊರೆ ಹೋಗುವಂತಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಲೇವಾದೇವಿಗಾರರು ಹಣ ನೀಡುತ್ತಿಲ್ಲ. ಇದರಿಂದ ರೈತರು ತೀವ್ರ ತೊಂದರೆಗೆ ಸಿಲುಕಿದ್ದಾರೆ.

ಉದ್ದು, ಹೆಸರು ಬೆಳೆಯ ಜತೆಗೆ ತಗ್ಗು ಪ್ರದೇಶದ ಹೊಲಗಳಲ್ಲಿನ ತೊಗರಿ ಹಾಗೂ ಸೋಯಾ ಸೇರಿ 20 ಸಾವಿರ ಹೆಕ್ಟೇರ್ ಹಾಳಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಮಳೆಯಿಂದ ಈ ಪ್ರಮಾಣ 25 ಸಾವಿರಕ್ಕೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಸಹಾಯಕ ಕೃಷಿ ನಿರ್ದೆಶಕ ಅನಿಲಕುಮಾರ ರಾಠೋಡ ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ 6269 ಹೆಕ್ಟೇರ್ ಹೆಸರು, 3743 ಹೆಕ್ಟೇರ್ ಉದ್ದು, 9782 ಹೆಕ್ಟೇರ್ ತೊಗರಿ ಹಾಗೂ 256 ಹೆಕ್ಟೇರ್ ಸೋಯಾ ಮಳೆಯಿಂದ ಹಾಳಾಗಿದೆ. ಈ ಕುರಿತು ಜಂಟಿ ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ.

ಉದ್ದು ಹೆಸರು ಕೈಗೆ ಬಾರದೇ ವಿಫಲವಾಗಿದ್ದರಿಂದ ಈಗ ಹೊಲ ಸ್ವಚ್ಛಗೊಳಿಸಲು ರೈತರು ಸಾಲ ಮಾಡದೇ ವಿಧಿಯಿಲ್ಲ. ಮತ್ತೆ ಮಳೆ ಸುರಿದರೆ ಉದ್ದು ಹೆಸರು ಬೀಜ ತಿರುಗಿಲ್ಲ. ಈಗ ತೊಗರಿ ಮತ್ತು ಸೋಯಾ ಬೆಳೆಗೂ ಅದೇ ಗತಿ ಬಂದರೂ ಅಚ್ಚರಿಯಿಲ್ಲ ಎಂದು ಚಿಂಚೋಳಿ ತಾಲ್ಲೂಕಿನ ಹೇಮ್ಲಾನಾಯಕ ತಾಂಡಾದ ರೈತ ವಿಜಯಕುಮಾರ ಜಾಧವ ಹೇಳುತ್ತಾರೆ.

ಕಾಳಗಿ ತಾಲ್ಲೂಕಿನಲ್ಲಿ ಈ ವರ್ಷ ಅತಿಹೆಚ್ಚು ಮಳೆಯಾಗಿದೆ. ಅದರಲ್ಲೂ ತಾಲ್ಲೂಕಿನ ಕೋಡ್ಲಿ, ಹಲಚೇರಾ, ಕಾಳಗಿ, ತೆಂಗಳಿ, ಅರಣಕಲ್, ಕಂದಗೂಳ, ರಟಕಲ್, ಗೋಟೂರ, ಕೊಡದೂರ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಸುರಿದಿದೆ.

ಈ ಪರಿಣಾಮ ಹೊಲಗಳಲ್ಲಿ ನೀರು ಜಾಸ್ತಿ ನಿಂತುಕೊಂಡು ಮುಂಗಾರು ಬೆಳೆ ಹೆಸರು, ಉದ್ದು, ತೊಗರಿಗೆ ಕಂಟಕವಾಗಿದೆ. ಹೆಸರು, ಉದ್ದು ರಾಶಿ ಮಾಡುವ ಮುನ್ನವೇ ಮಳೆ ಬಂದ ಕಾರಣ ಹೊಲಗಳಲ್ಲೆ ಫಳ್ಳೆ, ಕಾಯಿ ನೆನೆದು ಕೊಳೆತು ಹೋಗಿದೆ. ತೊಗರಿ ಬೆಳೆ ತೇವಾಂಶ ಹೆಚ್ಚಾಗಿ ಒಣಗಿದೆ. ಒಟ್ಟಾರೆ ತಾಲ್ಲೂಕಿನಲ್ಲಿ ಅರ್ಧದಷ್ಟು ಬೆಳೆಗಳು ಸಂಪೂರ್ಣ ಹಾಳಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ನಾವದಗಿ ಗ್ರಾಮದ ರೈತ ಗೌರಿಶಂಕರ ಸೂರವಾರ, ತೆಂಗಳಿ ಗ್ರಾಮದ ಪ್ರಸಾದ ಹಳ್ಳಿ ತಿಳಿಸಿದ್ದಾರೆ.

ಅಫಜಲಪುರ ತಾಲ್ಲೂಕಿನಲ್ಲಿ ಕಳೆದ ಒಂದು ತಿಂಗಳಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ಸುರಿದ ಮಳೆಯಿಂದ ಸುಮಾರು 10 ಸಾವಿರ ಎಕರೆಯಲ್ಲಿ ಬೆಳೆದ ಬೆಳೆ ಹಾನಿಯಾಗಿದೆ.

ಪ್ರತಿ ಗ್ರಾಮದಲ್ಲಿ ಬೆಳೆಗಳು ಹಾನಿಯಾಗಿದೆ. ಅದರಲ್ಲಿಯೂ ತಗ್ಗು ಪ್ರದೇಶದ ಜಮೀನಿನಲ್ಲಿ ಬಿತ್ತನೆಯಾಗಿರುವ ತೊಗರಿ, ಸೂರ್ಯಕಾಂತಿ ಬೆಳೆಗಳು ಹಾನಿಯಾಗಿವೆ. ನಿರಂತರ ಮಳೆಯಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ ವಿವಿಧ ಬೆಳೆಗಳು ಹಾನಿಯಾದ ಬಗ್ಗೆ ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ ಮಾತನಾಡಿ, ‘ಕೃಷಿ ಇಲಾಖೆಯವರು ಬೆಳೆ ಹಾನಿಯಾದ ಬಗ್ಗೆ ಸಮೀಕ್ಷೆ ಕಾರ್ಯ ನಡೆಸುತ್ತಿದ್ದಾರೆ. ಇನ್ನುವರೆಗೂ ನಿಖರವಾದ ವರದಿ ಬಂದಿಲ್ಲ’ ಎಂದರು.

‘ಅಫಜಲಪುರ ತಾಲ್ಲೂಕಿನಲ್ಲಿ 10 ಸಾವಿರ ಎಕರೆ ಬೆಳೆ ಮಳೆ ಹಾನಿಯಾಗಿದೆ. ಇದರ ಬಗ್ಗೆ ಸರ್ಕಾರ ಗಮನ ಹರಿಸಿ ಅವರಿಗೆ ಪರಿಹಾರ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು. ಕೃಷಿ ಇಲಾಖೆ ಹಾಗೂ ಕಂದಾಯ ಇಲಾಖೆಯವರು ಸರಿಯಾದ ರೀತಿಯಲ್ಲಿ ಬೆಳೆ ಸಮೀಕ್ಷೆ ಮಾಡಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಸಾಕಷ್ಟು ಬೆಳೆ ಹಾನಿಯಾಗಿದೆ. ಇದರ ಬಗ್ಗೆ ಸರ್ಕಾರದ ಬಳಿ ಮಾಹಿತಿ ಇಲ್ಲ’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ, ಮುಖಂಡರಾದ ಲಕ್ಷ್ಮಣ ಕಟ್ಟಿಮನಿ, ಶ್ಯಾಮಸುಂದರ ಮಠಪತಿ ಹಾಗೂ ವಿಜಯಕುಮಾರ ಪಾಟೀಲ ಮತ್ತು ಮಾಶಾಳದ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಶಿವು ಪ್ಯಾಟಿ ಹೇಳುತ್ತಾರೆ.

ಆಳಂದ ತಾಲ್ಲೂಕಿನಲ್ಲಿ ಕಳೆದ ವಾರ ಸುರಿದ ಬಾರಿ ಮಳೆಗೆ ತಾಲ್ಲೂಕಿನ ವಿವಿಧೆಡೆ ಮುಂಗಾರು ಬೆಳೆಗಳಾದ ಉದ್ದು, ತೊಗರಿ, ಸೋಯಾಬೀನ್‌ ಹಾಗೂ ಕಬ್ಬು ಬೆಳೆಯು ಅಧಿಕ ಪ್ರಮಾಣದಲ್ಲಿ ಹಾನಿಯಾಗಿದೆ. ಮಳೆಯಿಂದ ಬೆಳೆ ಹಾನಿಯಾದ ರೈತರು ಪರಿಹಾರದ ನಿರೀಕ್ಷೆಯಲ್ಲಿ ಕಾಯುತ್ತಿದ್ದರು. ಆದರೆ, ಬೆಳೆ ಹಾನಿ ಸಮೀಕ್ಷೆ ಕಾರ್ಯ ಮಾತ್ರ ವಿಳಂಬವಾಗುತ್ತಿದೆ.

ತಾಲ್ಲೂಕಿನಲ್ಲಿ ಅಂದಾಜು 21 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಇದರಲ್ಲಿ ಅಮರ್ಜಾ ಅಣೆಕಟ್ಟೆಯ ನೀರು ಬಿಡುಗಡೆಯಿಂದ ಒಟ್ಟು 180 ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳ ಪ್ರಾಥಮಿಕ ವರದಿ ನೀಡಿದ್ದಾರೆ.

ಶಾಸಕ ಸುಭಾಷ ಗುತ್ತೇದಾರ ಸಹ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಒಂದು ವಾರದಲ್ಲಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ತಾಕೀತು ಮಾಡಿದ್ದಾರೆ.

ಪ್ರಮುಖವಾಗಿ ಆಳಂದ, ಖಜೂರಿ, ನಿಂಬರ್ಗಾ ವಲಯದಲ್ಲಿ ಅಧಿಕ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಅಮರ್ಜಾ ನದಿ ಪಾತ್ರದ ತಡೋಳಾ, ಖಂಡಾಳ, ಸಾಲೇಗಾಂವ, ಮಟಕಿ, ಹೆಬಳಿ, ತೀರ್ಥ, ಜೀರಹಳ್ಳಿ, ಶಖಾಪುರ, ಪಡಸಾವಳಿ, ಎಲೆ ನಾವದಗಿ, ಕೊಡಲ ಹಂಗರಗಾ, ಕೊರಳ್ಳಿ, ಭೂಸನೂರು, ಧಂಗಾಪುರ, ಹಿತ್ತಲ ಶಿರೂರ, ದೇವಂತಗಿ, ಜವಳಿ (ಡಿ) ಹಾಗೂ ಬೆಣ್ಣೆತೊರಾ ನದಿ ಪಾತ್ರದ ಸನಗುಂದಾ, ದೇಗಾಂವ, ಬಿಲಗುಂದಿ, ಕಮಲಾನಗರ, ಬೋಧನ, ರಾಚಣ್ಣ ವಾಗ್ದರಿ ಗ್ರಾಮದ ಹಳ್ಳಕೊಳ್ಳಗಳು ಭರ್ತಿಯಾಗಿ ಹರಿದಿವೆ. ಮೂರು ದಿನಗಳ ಕಾಲ ಹಳ್ಳದ ದಂಡೆಯಲ್ಲಿರುವ ಹೊಲಗದ್ದೆಗಳಲ್ಲಿ ನೀರು ನುಗ್ಗಿ ಮುಂಗಾರು ಬೆಳೆಗಳು ಜಲಾವೃತವಾಗಿವೆ.

ಸೋಯಾಬೀನ್ ಬೆಳೆ ಸ್ಥಿತಿ ಇದಕ್ಕೆ ಹೊರತಲ್ಲ. ಹಲವು ಗ್ರಾಮದಲ್ಲಿ ರಾಶಿಗೆ ಬಂದ ಉದ್ದು ಬೆಳೆಯು ಸತತ ಮಳೆಯಿಂದ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿ ಬರಲಿಲ್ಲ ಎನ್ನುವ ಪರಿಸ್ಥಿತಿ ಹಲವು ರೈತರದಾಗಿದೆ ಎಂದು ಪ್ರಗತಿಪರ ರೈತ ಆದಿನಾಥ ಹೀರಾ ತಿಳಿಸಿದರು.

ಯಡ್ರಾಮಿ ತಾಲ್ಲೂಕಿನ ಬಹುತೇಕ ಗ್ರಾಮಗಳ ಜಮೀನಿನಲ್ಲಿ ಈಚೆಗೆ ಸುರಿದ ಹಿಂಗಾರು ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗಿವೆ. ಇನ್ನೂ ಕೆಲವು ಜಮೀನುಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗಿದೆ. ಹೋದ ಬಾರಿ ಈ ಪರಿಸ್ಥಿತಿಗೆ ರೈತರು ಸಂಕಷ್ಟಕ್ಕೆ ಎದುರಿಸಿದರು. ಈ ಬಾರಿಯೂ ಮಳೆಗೆ ಬೆಳೆ ಹಾನಿಯಾಗಿರುವುದು ನುಂಗಲಾರದ ತುತ್ತಾಗಿದೆ. ಇನ್ನು ಅಳಿದುಳಿದ ಬೆಳೆಗೂ ಇನ್ನು ಮಳೆ ಬರುತ್ತಿರುವುದರಿಂದ ಅದು ಕೂಡ ಹಾನಿಯಾಗುವ ಆತಂಕ ಎದುರಾಗಿದೆ.

ತಾಲ್ಲೂಕಿನ ಸುಂಬಡ, ಹಂಗರಗಾ (ಕೆ), ಕೋಣಸಿರಸಗಿ, ಮಾಣಶಿವಣಗಿ, ಕರಕಿಹಳ್ಳಿ, ಹಂಗರಗಾ (ಬಿ), ಆಲೂರು, ಕುಕನೂರ, ಇಜೇರಿ, ಸೈದಾಪುರ ಸೇರಿದಂತೆ ಅನೇಕ ಗ್ರಾಮಗಳ ಜಮೀನಿನಲ್ಲಿ‌ ನೀರು ನಿಂತು ಬೆಳೆ ಹಾನಿಯಾಗಿದೆ.

ಯಾರು ಏನೆಂತಾರೆ?

ಜುಲೈ 8ರಿಂದ 23ರವರೆಗೆ 300 ಮಿಲಿ ಮೀಟರ್ ಮಳೆ ಸುರಿದಿದ್ದರ ಸಮೀಕ್ಷೆ ಮುಕ್ತಾಯವಾಗಿದ್ದು, ಆಗಸ್ಟ್‌, ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದ ಹಾಳಾದ ಬೆಳೆಯ ಸಮೀಕ್ಷೆ ಪ್ರಗತಿಯಲ್ಲಿದೆ. ಕಳೆದ ಬಾರಿ ಬೆಳೆ ನಷ್ಟಕ್ಕೆ ₹ 130 ಕೋಟಿ ಪರಿಹಾರ ಬಿಡುಗಡೆಯಾಗಿತ್ತು.

ಡಾ.ರತೇಂದ್ರನಾಥ ಸೂಗುರ

ಜಂಟಿ ಕೃಷಿ ನಿರ್ದೇಶಕ

ಫಸಲ್ ಬಿಮಾ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಬಹುತೇಕ ರೈತರಿಗೆ ಪರಿಹಾರ ಸಿಕ್ಕಿಲ್ಲ. ತಕ್ಷಣ ಕೃಷಿ ಇಲಾಖೆ ಸಮೀಕ್ಷೆ ಆರಂಭಿಸಬೇಕು. ಪ್ರತಿ ಎಕರೆ ಬೆಳೆ ನಷ್ಟಕ್ಕೆ ₹ 25 ಸಾವಿರ ಪರಿಹಾರ ನೀಡಬೇಕು. ವಿಮಾ ಕಂಪೆನಿಯು ರೈತರಿಗೆ ಸದಾ ಲಭ್ಯವಾಗಲು ಹೆಚ್ಚು ಸಹಾಯವಾಣಿ ಲೈನ್‌ಗಳನ್ನು ಆರಂಭಿಸಬೇಕು. ಹೆಸರು ಬೀಜವನ್ನು ಗುಜರಾತ್ ಮೂಲದ ಕಂಪನಿ ಮಾರಾಟವಾಗಿದ್ದು, ಅವೆಲ್ಲ ನಕಲಿಯಾಗಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಶರಣಬಸಪ್ಪ ಮಮಶೆಟ್ಟಿ

ಜಿಲ್ಲಾ ಅಧ್ಯಕ್ಷ, ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ಏರಿಕೆಯಾಗಿದೆ ಎಂದು ಪೆಟ್ರೋಲ್, ಡೀಸೆಲ್ ಬೆಲೆ ದಿಢೀರ್ ಹೆಚ್ಚಿಸವ ಸರ್ಕಾರ ರೈತರ ಬೆಳೆಗೆ ಆದ ನಷ್ಟದ ಪ್ರಮಾಣವನ್ನು ಏಕೆ ಏರಿಸುವುದಿಲ್ಲ. ಕೂಡಲೇ ವೈಜ್ಞಾನಿಕ ಮಾನದಂಡಗಳನ್ನು ಅನುಸರಿಸಿ ರೈತರಿಗೆ ಬೆಳೆ ನಷ್ಟಕ್ಕಾಗಿ ಪರಿಹಾರ ಘೋಷಣೆ ಮಾಡಬೇಕು

ವಿ. ನಾಗಮ್ಮಾಳ್

ರಾಜ್ಯ ಖಜಾಂಚಿ, ರೈತ ಕೃಷಿ ಕಾರ್ಮಿಕರ ಸಂಘಟನೆ

ನಿರಂತರ ಮಳೆಯಿಂದ ಸುಮಾರು 10 ಸಾವಿರ ಎಕರೆ ತಾಲ್ಲೂಕಿನಲ್ಲಿ ಬೆಳೆ ಹಾನಿಯಾಗಿದೆ ಸರ್ಕಾರ ತಕ್ಷಣ ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು. ಹಿಂಗಾರು ಹಂಗಾಮಿಗೆ ಬಿತ್ತನೆ ಮಾಡಲು ಬೆಳೆ ಹಾನಿಯಾದ ರೈತರಿಗೆ ಕಡಲೆ, ಸೂರ್ಯಕಾಂತಿ ಬೀಜಗಳನ್ನು ಉಚಿತವಾಗಿ ನೀಡಬೇಕು

ವಿಜಯಕುಮಾರ ಪಾಟೀಲ

ರೈತ ಮುಖಂಡ, ಬಳೂರ್ಗಿ

ಪ್ರಕೃತಿ ವಿಕೋಪ ಪರಿಹಾರ ನಿಧಿ ಅಡಿಯಲ್ಲಿ ಹೆಕ್ಟೇರ್‌ಗೆ ಗರಿಷ್ಠ ₹ 6800 ಪರಿಹಾರ ನೀಡಲಾಗುತ್ತಿದೆ. ಇದನ್ನು ಪರಿಷ್ಕರಿಸಿ ₹ 25 ಸಾವಿರಕ್ಕೆ ಹೆಚ್ಚಿಸಬೇಕು. ಇಲ್ಲವಾದರೆ ರೈತರ ದಿವಾಳಿ ಖಚಿತ

ಜಯರಾಮ ಪಾಟೀಲ
ರೈತ, ಭಕ್ತಂಪಳ್ಳಿ

ಉದ್ದು ಹೆಸರು ಬೆಳೆಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಕಳೆದ ವರ್ಷ ಬಿತ್ತಿದ ಬೀಜ ತಿರುಗಲಿಲ್ಲ. ಪ್ರಸಕ್ತ ವರ್ಷವೂ ಬಿದ್ದ ಕನಸು ಪುನರಾವರ್ತನೆಯಾಯಿತು. ಸರ್ಕಾರ ರೈತರ ಸಾಲ ಮನ್ನಾ ಮಾಡಲಿ

ಶಂಕರಗೌಡ ಅಲ್ಲಾಪುರ, ರೈತರು ಚಿಂಚೋಳಿ

ಸತತ ಎರಡು ವರ್ಷದಿಂದ ಅಮರ್ಜಾ ನದಿ ಪಾತ್ರ ಹಳ್ಳಕೊಳ್ಳದ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಸಮರ್ಪಕ ಬೆಳೆ ಹಾನಿ ಪರಿಹಾರ ದೊರೆಕಿಸಿ ಕೊಡಲು ತಾಲ್ಲೂಕು ಆಡಳಿತ ವಿಫಲವಾಗಿದೆ.

ಮೌಲಾ ಮುಲ್ಲಾ, ರೈತ ಹೋರಾಟಗಾರ


ಪ್ರಸಕ್ತ ವರ್ಷ ಅಧಿಕ ಮಳೆಯಿಂದ ಅಂದಾಜು 21 ಸಾವಿರ ಹೆಕ್ಟೇರ್ ಪ್ರದೇಶದ ಮುಂಗಾರು ಬೆಳೆಯು ಹಾನಿಯಾಗಿದೆ. ತಕ್ಷಣ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಾಗುವುದು.

ಶರಣಗೌಡ ಪಾಟೀಲ, ಕೃಷಿ ಸಹಾಯಕ ನಿರ್ದೇಶಕರು, ಆಳಂದ


ಅಮರ್ಜಾ ಅಣೆಕಟ್ಟೆ ನೀರು ಬಿಡುಗಡೆಯಿಂದ ಹಲವು ರೈತರ ಕಬ್ಬು ಬೆಳೆ ಹಾನಿಯಾಗಿದೆ. ತಕ್ಷಣ ಸಮೀಕ್ಷೆ ನಡೆಸಿದರೆ ಕೃಷಿ ಚಟುವಟಿಕೆ ಕೈಗೊಳ್ಳಲು ಅನುಕೂಲವಾಗಲಿದೆ.
ಶಾಮರಾವ ಅಂಬಾಜಿ, ರೈತ ಕೊರಳ್ಳಿ

ಪೂರಕ ಮಾಹಿತಿ

ಜಗನ್ನಾಥ ಶೇರಿಕಾರ, ಶಿವಾನಂದ ಹಸರಗುಂಡಗಿ, ಗುಂಡಪ್ಪ ಕರೆಮನೋರ, ಸಂಜಯ ಪಾಟೀಲ, ಮಂಜುನಾಥ ದೊಡ್ಡಮನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT