ಬುಧವಾರ, ಏಪ್ರಿಲ್ 21, 2021
23 °C
ಶಿವಶರಣ ಹರಳಯ್ಯ ಸಮಾಜದಿಂದ ಗ್ರಾ.ಪಂ. ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ

ಜಾತಿ, ಧರ್ಮ ನೋಡದೇ ಜನರಿಗೆ ಸಹಾಯ ಮಾಡಿ: ಶಾಸಕ ಬಸವರಾಜ ಮತ್ತಿಮೂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ನೂತನವಾಗಿ ಆಯ್ಕೆಯಾಗಿರುವ ಹರಳಯ್ಯ ಸಮಾಜದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಮತದಾರರ ಜಾತಿ, ಧರ್ಮವನ್ನು ನೋಡದೇ ಅವರ ಕೆಲಸಗಳನ್ನು ಮಾಡಿಕೊಡಬೇಕು’ ಎಂದು ಕಲಬುರ್ಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ ಕಿವಿಮಾತು ಹೇಳಿದರು.

ನಗರದಲ್ಲಿ ಬುಧವಾರ ಶ್ರೀ ಶಿವಶರಣ ಹರಳಯ್ಯ (ಸಮಗಾರ) ಮಚಗಾರ ಸಮಾಜದ ವತಿಯಿಂದ ಆಯೋಜಿಸಿದ್ದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಸನ್ಮಾನ ಹಾಗೂ ತಮ್ಮ 41ನೇ ದಿನಾಚರಣೆ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಎಲ್ಲ ಜಾತಿ, ಧರ್ಮದವರ ಆಶೀರ್ವಾದದಿಂದ ಆಯ್ಕೆಯಾಗಿ ಬಂದಿದ್ದೀರಿ. ಆದ್ದರಿಂದ ಮುಂದಿನ ಐದು ವರ್ಷ ಅವರ ಮನೆಗಳಿಗೆ ಭೇಟಿ ನೀಡಿ ಕುಂದು ಕೊರತೆಗಳನ್ನು ಆಲಿಸಿ ಅಗತ್ಯವಾದ ಸಹಾಯವನ್ನು ಮಾಡಿ. ಅನುದಾನ ಕೊರತೆ ಬಿದ್ದರೆ ಶಾಸಕರ ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ನಂತರ ಶಾಸಕ ಮತ್ತಿಮೂಡ ಜನ್ಮದಿನದ ನಿಮಿತ್ತ ಕೇಕ್ ಕತ್ತರಿಸಿ ಸಿಹಿ ಹಂಚಿದರು.

ಬಿಜೆಪಿ ಮುಖಂಡ ಅಂಬಾರಾಯ ಅಷ್ಠಗಿ ಮಾತನಾಡಿ, ‘ಮತ್ತಿಮೂಡ ಅವರು ಎಲ್ಲರ ಕೈಗೆ ಸಿಗುವ ಶಾಸಕರಾಗಿದ್ದು, ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಶಾಸಕರು ತಮ್ಮ ಜಾತಿಯ ಓಣಿಗಳಲ್ಲಿ ಮಾತ್ರ ರಸ್ತೆ, ಕುಡಿಯುವ ನೀರಿನಂತಹ ಕೆಲಸ ಮಾಡಿಕೊಡುತ್ತಿದ್ದರು. ಆದರೆ, ಬಸವರಾಜ ಮತ್ತಿಮೂಡ ಅವರು ಎಲ್ಲರನ್ನೂ ಸಮಾನರಾಗಿ ಕಾಣುತ್ತಾ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ’ ಎಂದು ಶ್ಲಾಘಿಸಿದರು.

ಕಮಲಾಪುರ ತಾಲ್ಲೂಕಿನ ಬಿಜೆಪಿ ಮುಖಂಡ ರವಿ ಬಿರಾದಾರ ಮಾತನಾಡಿ, ‘ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಾಕಷ್ಟು ಸಾಧನೆ ಮಾಡುತ್ತಿರುವ ಶಾಸಕರು ಕನಸುಗಳು ಈಡೇರಲಿ’ ಎಂದು ಹಾರೈಸಿದರು.

ಶಿವಶರಣಪ್ಪ ಹರಳಯ್ಯ (ಸಮಗಾರ) ಮಚಗಾರ ಸಮಾಜದ ಅಧ್ಯಕ್ಷ ಕಾಶಿರಾಯ ಎಸ್. ನಂದೂರಕರ ಮಾತನಾಡಿ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 19 ಮಹಿಳೆಯರು ಹಾಗೂ 11 ಜನ ಪುರುಷರು ಆಯ್ಕೆಯಾಗಿದ್ದಾರೆ. ಹರಳಯ್ಯ ಸಮಾಜದ ಭವನಕ್ಕೆ ಶಾಸಕ ಮತ್ತಿಮೂಡ ಅವರು ₹ 1 ಕೋಟಿ ಅನುದಾನ ನೀಡಿ ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಇನ್ನೂ ₹ 2.5 ಕೋಟಿ ಮೊತ್ತದ ಕೆಲಸಗಳು ಆಗಬೇಕಿದೆ. ಒಂದೇ ಕಡತದಲ್ಲಿ ಮಂಡಿಸಿ ಅನುದಾನ ಬಿಡುಗಡೆಗೆ ಶಾಸಕರು ಪ್ರಯತ್ನಿಸಬೇಕು’ ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆಯಾದ ಅಂಬವ್ವ ಶರಣಪ್ಪ ಹರಳಯ್ಯ, ಲಲಿತಾಬಾಯಿ ಶೆಳ್ಳಗಿ, ಕಸ್ತೂರಿಬಾಯಿ ಹರಳಯ್ಯ, ರೇಷ್ಮಾ ಹಾಗರಗುಂಡಗಿ, ನಿಂಗಮ್ಮ ಕಲಬೇನೂರ, ಅನಸೂಯಾ ಹರಳಯ್ಯ, ಪಾರ್ವತಿ ಗುಂಡೇಶ ಹರಳಯ್ಯ, ಮಹಾದೇವಿ, ಕಲಾವತಿ, ಲಲಿತಾಬಾಯಿ ಶ್ರೀಮಂತ, ಗಂಗಮ್ಮ ರಾಜೇಂದ್ರ ಬರುಡೆ, ಮಲ್ಲಮ್ಮ ನರಬೋಳಿ, ಕಸ್ತೂರಿಬಾಯಿ, ಸವಿತಾ ಕುಪೇಂದ್ರ, ಪೀರಪ್ಪ ಕಲ್ಲಪ್ಪ, ಕಲ್ಲಿನಾಥ ನರಬೋಳಿ, ಜಗನ್ನಾಥ, ಮುತ್ತುರಾಜ ಮೈಲಾರಿ ಶೆಳ್ಳಗಿ, ಸಂತೋಷ ರೇವಪ್ಪ ಹರಳಯ್ಯ, ಮಲ್ಲಿನಾಥ, ಚಂದ್ರಕಾಂತ, ಶಂಕರ ಹೊನ್ನಪ್ಪ ಹೆಬ್ಬಾಳ, ನಾಗರಾಜ ಇಟಗಾ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸುವರ್ಣಾ ಮಾಲಾಜಿ, ಬಿಜೆಪಿ ಮುಖಂಡ ಹಣಮಂತರಾಯ ಮಾಲಾಜಿ, ಜಿ.ಪಂ. ಸದಸ್ಯ ಗುರುಶಾಂತ ಪಾಟೀಲ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಂಗಮೇಶ ನಾಗನಹಳ್ಳಿ, ಬಿಜೆಪಿ ಮುಖಂಡ ಮಂಜು ರೆಡ್ಡಿ, ಮುಖಂಡರಾದ ಯಶವಂತರಾಯ ಅಷ್ಠಗಿ, ಶಿವಾ ಅಷ್ಠಗಿ, ಹರಳಯ್ಯ ಸಮಾಜದ ಮುಖಂಡ ಸಿದ್ದಣ್ಣ ಭಾವಿಮನಿ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು