ಗುರುವಾರ , ಜೂನ್ 24, 2021
25 °C
ಗೊಬ್ಬರಕ್ಕೆ ಹೆಚ್ಚುವರಿ ಹಣ ವಸೂಲಿ; ದಿಢೀರ್ ಭೇಟಿ ನೀಡಿದ ಜಿ.ಪಂ. ಅಧ್ಯಕ್ಷೆ

ರಸಗೊಬ್ಬರ ಅಂಗಡಿ ಲೈಸೆನ್ಸ್ ಅಮಾನತಿಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಿಲ್ಲೆಯಲ್ಲಿ ರೈತರಿಗೆ ಯೂರಿಯಾ ರಸಗೊಬ್ಬರ ಕೊರತೆಯಾಗುತ್ತಿದೆ ಎಂಬ ಬಗ್ಗೆ ದೂರುಗಳು ಬಂದಿದ್ದರಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಅವರು ಮಂಗಳವಾರ ನಗರದ ಗಂಜ್ ಪ್ರದೇಶದಲ್ಲಿರುವ ವಿವಿಧ ರಸಗೊಬ್ಬರ ಅಂಗಡಿಗೆ ಭೇಟಿ ನೀಡಿದಾಗ ಗೊಬ್ಬರಕ್ಕೆ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದ್ದ ಚನ್ನವೀರ ಅಗ್ರೊ ಏಜೆನ್ಸಿಯ ಲೈಸೆನ್ಸ್‌ ಅಮಾನತುಗೊಳಿಸಲು ಸೂಚನೆ ನೀಡಿದರು.

ಏಜೆನ್ಸಿಯವರು ಯೂರಿಯಾ ರಸಗೊಬ್ಬರ ದಾಸ್ತಾನು ಇದ್ದರೂ ಕೃತಕ ಅಭಾವ ಸೃಷ್ಟಿಸಿ ರೈತರಿಂದ ಹೆಚ್ಚುವರಿ ಹಣ ಪಡೆದು ಮಾರಾಟ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದರಿಂದ ಈ ಅಂಗಡಿಯ ಲೈಸನ್ಸ್ ಅಮಾನತುಗೊಳಿಸುವಂತೆ ಸ್ಥಳದಲ್ಲಿದ್ದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ರತೇಂದ್ರನಾಥ ಸುಗೂರ ಅವರಿಗೆ ಸೂಚನೆ ನೀಡಿದರು.

ಬಕ್ಕಂಪ್ರಭು ಅಗ್ರೊ ಕೇಂದ್ರಕ್ಕೂ ಭೇಟಿ ನೀಡಿದ ಅಧ್ಯಕ್ಷರು, ಅಲ್ಲಿಯೂ ರಸಗೊಬ್ಬರ ದಾಸ್ತಾನಿದ್ದರೂ ಇನ್ನು ಬಂದಿಲ್ಲ ಎಂದು ಅಂಗಡಿಯವರು ಸುಳ್ಳು ಹೇಳಿದರು. ಸ್ಥಳದಲ್ಲಿದ್ದ ರೈತರು ಅಂಗಡಿಯವರು ರಸಗೊಬ್ಬರವನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸುವರ್ಣಾ ಮಾಲಾಜಿ ಅವರು, ಅಗ್ರೊ ಕೇಂದ್ರದವರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಪಾಸಣೆ ನಂತರ ಮಾತನಾಡಿದ ಸುವರ್ಣಾ, ಜಿಲ್ಲೆಯಲ್ಲಿ ಯೂರಿಯಾ ದಾಸ್ತಾನು ಕೊರತೆ ಇರುವುದಿಲ್ಲ. ರೈತರು ಗಾಬರಿಯಾಗುವ ಅವಶ್ಯಕತೆ ಇಲ್ಲ. ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಮರ್ಪಕವಾಗಿ ಬೀಜ ಮತ್ತು ರಸಗೊಬ್ಬರವನ್ನು ದೊರಕುವ ರೀತಿಯಲ್ಲಿ ಎಲ್ಲಾ ಅಂಗಡಿಗಳಿಗೆ ಪ್ರತಿ ದಿನ ಭೇಟಿ ನೀಡಿ, ಮೇಲುಸ್ತುವಾರಿ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಕ್ರಿಮಿನಲ್ ಕೇಸ್: ಬೀಜ ಮತ್ತು ರಸಗೊಬ್ಬರ ಅಂಗಡಿಯವರು ಹೆಚ್ಚಿನ ದರಕ್ಕೆ ಮಾರಾಟ ಮಾಡಿದಲ್ಲಿ ಕೂಡಲೇ ಅವರ ಲೈಸನ್ಸ್ ರದ್ದುಪಡಿಸುವುದು ಹಾಗೂ ಅಂಗಡಿಯವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಖಡಕ್ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು, ಅಧ್ಯಕ್ಷೆಯ ಪತಿ ಹಣಮಂತರಾಯ ಮಾಲಾಜಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.