ಗುರುವಾರ , ಅಕ್ಟೋಬರ್ 21, 2021
28 °C

ಕಲಬುರ್ಗಿ: ದಾಖಲೆ ನಾಶ ಆರೋಪ; ಗುವಿವಿ ಕುಲಸಚಿವರ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಅಗತ್ಯ ಶೈಕ್ಷಣಿಕ ಅರ್ಹತೆ ಇಲ್ಲದೇ, ನಿಯಮಾವಳಿ ಮೀರಿ ಪಿಎಚ್‌.ಡಿ.ಗೆ ನೋಂದಣಿ ಪಡೆದ ಅಭ್ಯರ್ಥಿಯೊಬ್ಬರ ದಾಖಲೆಗಳನ್ನು ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ನನಗೆ ನೀಡಿಲ್ಲ’ ಎಂದು ಆರೋಪಿಸಿ ಸಿಂಡಿಕೇಟ್ ಸದಸ್ಯ ಮೊಹಮ್ಮದ್ ಅಬ್ದುಲ್ ಮುಜೀಬ್ ಅವರು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ ಅವರ ವಿರುದ್ಧ ವಿಶ್ವವಿದ್ಯಾಲಯ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಅಲ್ಲದೇ, ವಿ.ವಿ.ಯ ಶಿಕ್ಷಣ ವಿಭಾಗದ ಮುಖ್ಯಸ್ಥೆ ಸುರೇಖಾ ಕ್ಷೀರಸಾಗರ, ಸಿಬ್ಬಂದಿ ಶೈಲಜಾ ಅಂಗಡಿ ಹಾಗೂ ಪಿಎಚ್‌.ಡಿ.ಗೆ ನೋಂದಣಿ ಮಾಡಿದ್ದ ಶಾಂತಪ್ಪ ಜಿ. ಸೋಮಾ ಅವರ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

‘ಶಾಂತಪ್ಪ ಸೋಮಾ 2009–10ನೇ ಸಾಲಿನಲ್ಲಿ ಶಿಕ್ಷಣ ವಿಭಾಗದಲ್ಲಿ ಪಿಎಚ್‌.ಡಿ. ಸಂಶೋಧನೆ ನಡೆಸಲು ನೋಂದಣಿ ಮಾಡಿಕೊಂಡಿದ್ದರು. ಶಾಂತಪ್ಪ ಪಿಎಚ್‌.ಡಿ. ಅರ್ಜಿ ಶುಲ್ಕ ಪಾವತಿಸದಿದ್ದರೂ, ಎಂ.ಫಿಲ್, ನೆಟ್‌ ಮಾಡದವರಿಗಾಗಿ ನಡೆಸುವ ಪಿಎಚ್.ಡಿ. ಪ್ರವೇಶ ಪರೀಕ್ಷೆಗೆ ಹಾಜರಾಗದಿದ್ದರೂ ಮೆರಿಟ್ ಪಟ್ಟಿಯಲ್ಲಿ ಅರೆಕಾಲಿಕ ಕೋಟಾದಡಿ ವಿಭಾಗದ ಮುಖ್ಯಸ್ಥೆ ಪ್ರೊ. ಸುರೇಖಾ ಕ್ಷೀರಸಾಗರ ಅವರು ಪ್ರವೇಶ ನೀಡಿದ್ದಾರೆ. ಈ ಪ್ರಕರಣವನ್ನು ಕುಲಸಚಿವರ ಗಮನಕ್ಕೆ ತಂದರೂ ಅವರು ಸೂಕ್ತ ಕ್ರಮ ಕೈಗೊಂಡಿಲ್ಲ. ಅಲ್ಲದೇ, ಶಾಂತಪ್ಪ ಅವರ ಪ್ರವೇಶಾತಿ ವಿವರ ಕೇಳಿದಾಗ ಶುಲ್ಕದ ವಿವರಗಳು ಕಚೇರಿ ಕಡತದಲ್ಲಿ ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ‘ಸಾಕ್ಷಿ ನಾಶ ಆರೋಪ ಸತ್ಯಕ್ಕೆ ದೂರವಾದುದು. ಪಿಎಚ್‌.ಡಿ. ಅಭ್ಯರ್ಥಿಗಳ ದಾಖಲೆಯನ್ನು ಆ ವಿಭಾಗದ ಗುಮಾಸ್ತರು ನಿರ್ವಹಿಸಬೇಕೇ ಹೊರತು ಕುಲಸಚಿವರಲ್ಲ. ಕಾನೂನು ಏನು ಕ್ರಮ ಕೈಗೊಳ್ಳುತ್ತದೋ ಕೈಗೊಳ್ಳಲಿ. ತನಿಖಾಧಿಕಾರಿ ಕೇಳಿದರೆ ಈ ಬಗ್ಗೆ ನಮ್ಮ ಬಳಿ ಇರುವ ಮಾಹಿತಿ ನೀಡುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು