ಭಾನುವಾರ, ಜೂನ್ 20, 2021
20 °C
ಬಿಸಿಎಂ ಜಿಲ್ಲಾ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆ ಆರೋಪ

ಆರ್‌ಟಿಐ ಕಾರ್ಯಕರ್ತ ಸೇರಿ ಇಬ್ಬರ ವಿರುದ್ಧ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಆರ್‌ಟಿಐ ಕಾರ್ಯಕರ್ತ ಸಿದ್ದರಾಮಯ್ಯ ಹಿರೇಮಠ ಹಾಗೂ ಅಂದೋಲಾ ಮಲ್ಲಿಕಾರ್ಜುನ ಎಂಬುವವರು ನಮ್ಮ ಕಚೇರಿಗೆ ಬಂದು ಬೆದರಿಕೆ ಹಾಕಿ ಸರ್ಕಾರಿ ಕೆಲಸಕ್ಕೆ ಅಡ್ಡಿ ಉಂಟು ಮಾಡಿದ್ದಾರೆ’ ಎಂದು ಬಿಸಿಎಂ ಇಲಾಖೆಯ ಜಿಲ್ಲಾ ಅಧಿಕಾರಿ ರಮೇಶ ಸಂಗಾ ಅವರು ಇಲ್ಲಿಯ ಸ್ಟೇಶನ್ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

‘ಜುಲೈ 13ರಂದು ಸಿದ್ದರಾಮಯ್ಯ ಹಿರೇಮಠ, ಅಂದೋಲಾ ಮಲ್ಲಿಕಾರ್ಜುನ ಹಾಗೂ ಅವರ ಸಹಚರರು ಹತ್ತಾರು ಆರ್‌ಟಿಐ ಅರ್ಜಿಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು. ಹಿರೇಮಠ ಕಾರಿನಲ್ಲಿ ಕುಳಿತುಕೊಂಡು ಆಂದೋಲಾ ಮಲ್ಲಿಕಾರ್ಜುನ ಹಾಗೂ ಸ್ನೇಹಿತರನ್ನು ಕಳುಹಿಸಿ ಕಚೇರಿ ಬಾಗಿಲಿನ ಮುಂಭಾಗದಲ್ಲಿ ದಾಂದಲೆ ಮಾಡುತ್ತಾ, ಎಲ್ಲಿ ಅಧಿಕಾರಿ ಅವನಿಗೆ ಪಾಠ ಕಲಿಸುತ್ತೇನೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ’ ಎಂದು ದೂರಿನಲ್ಲಿ  ತಿಳಿಸಿದ್ದಾರೆ.

‘ಕೋವಿಡ್–19 ನಿಯಂತ್ರಣ ಕೆಲಸದಲ್ಲಿ ಕಾರ್ಯನಿರತರಾಗಿದ್ದೇವೆ ಎಂದು ಹೇಳಿದ್ದರೂ ಇಲಾಖೆಯ ವ್ಯವಸ್ಥಾಪಕರಿಗೆ ಕರೆ ಮಾಡಿ ಎಲ್ಲಿದ್ದೀಯಾ ಕೂಡಲೇ ಬಂದು ಆರ್‌ಟಿಐ ಅರ್ಜಿಗೆ ಉತ್ತರಿಸಿ ಟೈಪ್ ಮಾಡುವಂತೆ ನಿಂದನೆ ಮಾಡಿದ್ದಾರೆ. ಅದಲ್ಲದೇ ಕಚೇರಿ ಕೆಲಸ ಮಾಡುತ್ತಿರುವಾಗ ಹಿರೇಮಠ ಸಾಕಷ್ಟು ಸಲ ವಾಟ್ಸ್‌ ಆ್ಯಪ್ ಮೂಲಕ ಸಂದೇಶಗಳನ್ನು ಕಳುಹಿಸಿ ಒಮ್ಮೆ ಹಿಂದಿನ ಜಿಲ್ಲಾಧಿಕಾರಿಯು ಪೋಕ್ಸೊ ಕಾಯ್ದೆ ಅಡಿಯ ಪ್ರಕರಣ ದಾಖಲಿಸಿರುವ ಪತ್ರದ ಪ್ರತಿಯನ್ನು ಕಳುಹಿಸಿ, ಹಣ ನೀಡದಿದ್ದರೆ ನಿನಗೂ ಇದೇ ಗತಿ ಎಂದು ಕರೆ ಮಾಡಿರುತ್ತಾರೆ. ಜನವರಿ 30ರಂದು ಅನಾಮಧೇಯ ಮುದ್ರಿತಗೊಳ್ಳುವ ಪೂರ್ವದ ದಿನಪತ್ರಿಕೆಯನ್ನು ಕಳುಹಿಸಿ ನಿಮ್ಮ ವಿರುದ್ಧ ಕೆಆರ್‌ ಐಡಿಎಲ್ ಕುರಿತಂತೆ ಪತ್ರಿಕೆಯಲ್ಲೇ ಕೆಟ್ಟದಾಗಿ ಬರಲಿದೆ. ಒಂದು ವೇಳೆ ಹಣ ನೀಡದಿದ್ದರೆ ಅದನ್ನು ಮುದ್ರಿಸಿ ತೇಜೋವಧೆ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇಷ್ಟು ದಿನ ಏಕೆ ಸುಮ್ಮನಿದ್ದರು?

‘ಜುಲೈ 13ರಂದು ಘಟನೆ ನಡೆದಿದ್ದರೆ ಅಂದೇ ಸಂಗಾ ಅವರು ಎಫ್‌ಐಆರ್‌ ದಾಖಲಿಸಬೇಕಾಗಿತ್ತು. ಇಷ್ಟು ದಿನ ಏಕೆ ಸುಮ್ಮನಿದ್ದರು’ ಎಂದು ಅಂದೋಲಾದ ಸಿದ್ಧಲಿಂಗ ಸ್ವಾಮೀಜಿ ಪ್ರಶ್ನಿಸಿದ್ದಾರೆ.

ತಮ್ಮ ಸಹಚರ ಅಂದೋಲಾ ಮಲ್ಲಿಕಾರ್ಜುನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ‘ಬಿಸಿಎಂ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರಿಗೆ ಪಾಜಿಟಿವ್ ಬಂದಿದ್ದರಿಂದ ಸೀಲ್‌ಡೌನ್ ಮಾಡಲಾಗಿತ್ತು. ನಾನು ಎರಡು ಅರ್ಜಿಗಳನ್ನು ಕೊಟ್ಟು ಬರುವಂತೆ ಮಲ್ಲಿಕಾರ್ಜುನ ಅವರನ್ನು ಕಳಿಸಿದ್ದೆ. ಸೀಲ್‌ಡೌನ್ ಇದ್ದುದರಿಂದ ಕಚೇರಿ ವ್ಯವಸ್ಥಾಪಕರಿಗೆ ಹೊರಗಿನಿಂದಲೇ ಕರೆ ಮಾಡಿದಾಗ ಒಂದು ವಾರ ಬಿಟ್ಟು ಬರಲು ಹೇಳಿದ್ದರು. ಇಷ್ಟು ದಿನಗಳ ಬಳಿಕ ಈಗ ಎಫ್‌ಐಆರ್‌ ದಾಖಲಿಸುವ ಉದ್ದೇಶವೇನು’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು