ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳಂದ: ಸಿಡಿಲು ಬಡಿದು ಐದು ಎತ್ತು ಸಾವು

Last Updated 7 ಏಪ್ರಿಲ್ 2023, 13:00 IST
ಅಕ್ಷರ ಗಾತ್ರ

ಆಳಂದ (ಕಲಬುರಗಿ): ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿ ಗುರುವಾರ ಸಂಜೆ ಸುರಿದ ಮಳೆ ಹಾಗೂ ಸಿಡಿಲಿಗೆ ಐದು ಎತ್ತುಗಳು ಸಾವಿಗೀಡಾಗಿವೆ.

ತಾಲ್ಲೂಕಿನ ಕವಲಗಾ ಗ್ರಾಮದ ರೈತ ಮಲ್ಲೇಶಪ್ಪ ನಾಯ್ಕೋಡಿ ಅವರು ಹೊಲದ ಕೊಟ್ಟಿಗೆ ಮುಂದಿನ ಮರದ ಕೆಳಗೆ ಕಟ್ಟಿದ ಅಂದಾಜು ₹ 1.20 ಲಕ್ಷ ಮೌಲ್ಯದ ಎತ್ತುಗಳು ಸಿಡಿಲಿನ ಆಘಾತಕ್ಕೆ ಬಲಿಯಾಗಿವೆ. ಹೆಬಳಿ ಗ್ರಾಮದಲ್ಲಿ ರೈತ ರೇವಣಸಿದ್ದ ನಿಂಗಪ್ಪ ನಾಗೂರೆ ಅವರ ಹೊಲದಲ್ಲಿ ಗಿಡದ ಕೆಳಗೆ ಕಟ್ಟಿದ ಎತ್ತು, ಸಂಗೋಳಗಿ (ಸಿ) ಗ್ರಾಮದ ರೈತ ಅರವಿಂದ ಕಲ್ಯಾಣಪ್ಪ ಪೂಜಾರಿ ಅವರ ಹೊಲದಲ್ಲಿ ಕಟ್ಟಿದ ಎತ್ತು ಹಾಗೂ ಸುಂಟನೂರು ಗ್ರಾಮದ ರೈತ ದೇವಾನಂದ ಚನ್ನಬಸಪ್ಪ ಅವರಿಗೆ ಸೇರಿದ ಎತ್ತು ಸಿಡಿಲು ಅಪ್ಪಳಿಸಿ ಸ್ಥಳದಲ್ಲಿ ಮೃತಪಟ್ಟಿವೆ.

ತಾಲ್ಲೂಕಿನ ವಿವಿಧೆಡೆ ಗುರುವಾರ ರಾತ್ರಿಯಿಡೀ ಮಳೆ, ಗುಡುಗು ಸಿಡಿಲು ಅಬ್ಬರ ಜೋರಾಗಿತ್ತು. ಆಳಂದ ತಾಲ್ಲೂಕಿನ ಸರಸಂಬಾದಲ್ಲಿ 31 ಮಿಮೀ, ನರೋಣಾ 22 ಮಿಮೀ, ನಿಂಬರ್ಗಾ 19 ಮಿಮೀ, ಖಜೂರಿ 18 ಮಿಮೀ, ಮಾದನ ಹಿಪ್ಪರಗಿ 8 ಮಿಮೀ, ಕೊರಳ್ಳಿಯಲ್ಲಿ 3 ಮಿ.ಮೀ. ಮಳೆ ದಾಖಲಾಗಿದೆ.

ಈ ಅವಕಾಳಿ ಮಳೆಯು ಶುಕ್ರವಾರ ಮುಂಜಾನೆಯೂ ಮುಂದುವರಿಯಿತು. ಮಳೆಯಿಂದ ಜೋಳ, ಗೋಧಿ ರಾಶಿ ಮಾಡಿದ ನಂತರ ಸಂಗ್ರಹಿಸಲು ಇಟ್ಟಿದ್ದ ಮೇವು ಹಾಳಾಗಿದೆ. ಜೊತೆಗೆ ಕಲ್ಲಂಗಡಿ, ದ್ರಾಕ್ಷಿ ಮತ್ತಿತರ ತೋಟಗಾರಿಕೆ ಬೆಳೆಗಳು ಅಂತಿಮ ಹಂತದಲ್ಲಿ ಮಳೆಗೆ ಸಿಲುಕಿವೆ.

ಜಾತ್ರೆಗೆ ಅಡ್ಡಿ: ಹನುಮ ಜಯಂತಿ ಹಾಗೂ ಹುಣ್ಣಿಮೆ ನಿಮಿತ್ತ ಹಲವು ಗ್ರಾಮದಲ್ಲಿ ರಥೋತ್ಸವ, ಜಾತ್ರೆಗಳ ಸಂಭ್ರಮಕ್ಕೆ ಮಳೆ ಅಡ್ಡಿಯಾಯಿತು. ಪಟ್ಟಣದಲ್ಲಿ ಹನುಮಾನ್ ಜಾತ್ರೆ , ಮಟಕಿ ಗ್ರಾಮದ ಹನುಮಾನ್ ಜಾತ್ರೆಯಲ್ಲಿ ನಡೆಯಬೇಕಿದ್ದ ನಾಟಕ ಪ್ರದರ್ಶನವು ಮಳೆ ಕಾರಣ ರದ್ದುಗೊಂಡಿತು. ಜೀರಹಳ್ಳಿ ಗ್ರಾಮದ ಅಲ್ಲಮಪ್ರಭುದೇವರ ಜಾತ್ರೆಯು ಮಳೆಯ ನಡುವೆಯೇ ಗಂಧೋತ್ಸವ ಜರುಗಿತು. ಸನಗುಂದಾ, ಮದಗುಣಕಿ, ತಲೆಕುಣಿ, ಕಮಲಾನಗರ ಮತ್ತಿತರ ಗ್ರಾಮದಲ್ಲಿ ವಿವಿಧ ಜಾತ್ರೆಯ ಸಡಗರಕ್ಕೆ ಮಳೆಯು ಅಡ್ಡಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT