ಬುಧವಾರ, ಅಕ್ಟೋಬರ್ 21, 2020
23 °C
ಕೊಚ್ಚಿಹೋದ ರಸ್ಯೆಗಳು, ಮುಳಗಿದ ಸೇತುವೆಗಳಳು, ಗುರುವಾರವೂ ಸಂಚಾರ ಅಸ್ತವ್ಯಸ್ತ

ಗ್ರಾಮ ತೊರೆಯುವ ಭೀತಿಯಲ್ಲಿ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಧಾರಾಕಾರ ಮಳೆ ಹಾಗೂ ಕಾಗಿಣಾ ನದಿಯ ಪ್ರವಾಹದಿಂದ ತಾಲ್ಲೂಕಿನ ಜನಜೀವನ ಅಸ್ತವ್ಯಸ್ತವಾಗಿದೆ. ನದಿ ದಂಡೆಯ ಮೇಲಿರುವ ತೊಸನಹಳ್ಳಿ (ಟಿ), ಮಲಕೂಡ ಗ್ರಾಮಗಳ ನೂರಾರು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಗ್ರಾಮಸ್ಥರು ಬುಧವಾರ ರಾತ್ರಿ ಮನೆ ಖಾಲಿ ಮಾಡಿ ಬೇರೆಡೆ ಆಶ್ರಯ ಪಡೆಯಲು ತೀವ್ರ ಪರದಾಡಿದರು.

ದಂಡೋತಿ, ಮುಡಬೂಳ, ಭಾಗೋಡಿ, ಕಾಟಮ್ಮದೇವರಹಳ್ಳಿ, ಇಂಗಳಗಿ ಗ್ರಾಮಗಳಿಗೆ ನೀರು ನುಗ್ಗಿದೆ. ಗುರುವಾರ ನಸುಕಿನ 3 ಗಂಟೆಯವರೆಗೆ ನದಿಯ ಪ್ರವಾಹವು ವೇಗವಾಗಿ ಏರುತ್ತಿದೆ. ಇದರಿಂದ ಊರು ತೊರೆಯಬೇಕಾದ ಅನಿವಾರ್ಯತೆ ಹಲವರಿಗೆ ಬಂದಿದೆ. ದಂಡೋತಿ ಗ್ರಾಮದ 30ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಜನರು ಮನೆ ಖಾಲಿ ಮಾಡಿದ್ದಾರೆ. ಹಳ್ಳದ ಬಸವೇಶ್ವರ ದೇವಾಲಯ, ಬಲಭೀಮೆಶ್ವರ ದೇವಾಲಯ, ಅಂಗನವಾಡಿ ಕೇಂದ್ರ, ಪಶು ಆಸ್ಪತ್ರೆ ಜಲಾವೃತಗೊಂಡವು. ಮುಡಬೂಳ ಗ್ರಾಮವು ನಡುಗಡ್ಡೆಯಾಗಿ ಮಾರ್ಪಟ್ಟಿತ್ತು. ಕಾಗಿಣಾ ನದಿ ಪ್ರವಾಹದ ಹಿನ್ನೀರು ಗ್ರಾಮವನ್ನು ಸುತ್ತುವರೆದಿತ್ತು. ಮರಗೋಳ ಹಳ್ಳ, ನಾಗಾವಿ ಹಳ್ಳದ ನೀರು ಗ್ರಾಮವು ಚಿತ್ತಾಪುರ ಪಟ್ಟಣ ಮತ್ತು ಇತರೆ ಗ್ರಾಮಗಳಿಂದ ಸಂಪರ್ಕ ಕಡಿದುಕೊಂಡಿದೆ.

ಮುಳುಗಿರುವ ಸೇತುವೆಗಳು: ದಂಡೊತಿ ಸೇತುವೆ, ಮುಡಬೂಳ, ಮುತ್ತಗಾ, ಶಂಕರವಾಡಿ, ಗೋಳಾ, ಇಂಗಳಗಿ, ಮಲಕೂಡ ಗ್ರಾಮಗಳ ಬಾಂದಾರು ಸೇತುವೆಗಳು ಗುರುವಾರವೂ ಪ್ರವಾಹದಲ್ಲಿ ಮುಳುಗಿವೆ. ಶಹಾಬಾದ್ ಹತ್ತಿರ ಕಾಗಿಣಾ ನದಿ ಸೇತುವೆ ಗುರುವಾರವೂ ಮುಳುಗಿದ್ದರಿಂದ ಚಿತ್ತಾಪುರ ಪಟ್ಟಣವೂ ಎಲ್ಲಾ ಮಾರ್ಗದಿಂದ ಕಲಬುರ್ಗಿಯ ಸಾರಿಗೆ ಸಂಚಾರ, ಸಂಪರ್ಕ ಕಡಿದುಕೊಂಡಿದೆ.

ಕೊಚ್ಚಿ ಹೋದ ರಸ್ತೆ: ವಾಘ್ದರಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ ರಸ್ತೆ ಮಾರ್ಗದ ತಾಲ್ಲೂಕಿನ ಗುಂಡಗುರ್ತಿ ಗ್ರಾಮದ ಹತ್ತಿರ ದೊಡ್ಡ ಹಳ್ಳಕ್ಕೆ ಕಟ್ಟಿರುವ ಸೇತುವೆಯ ರಸ್ತೆ ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗಿ ಚಿತ್ತಾಪುರ, ಸೇಡಂ-ಕಲಬುರ್ಗಿ ಸಾರಿಗೆ ಸಂಚಾರ ಸಂಪೂರ್ಣ ಬಂದ್ ಆಗಿದೆ. ಸೇತುವೆಗೆ ಹೊಂದಿಕೊಂಡು ಬೃಹತ್ ಗುಂಡಿ ಉಂಟಾಗಿದೆ. ಬೃಹತ್ ವಾಹನಗಳ ಓಡಾಟದಿಂದ ಅಪಾಯ ಆಗಬಹುದು ಎಂದು ಹೆದ್ದಾರಿಯ ಸಂಚಾರ ಬಂದ್ ಮಾಡಲಾಗಿದೆ.

ಎರಡು ದಿನದ ಪ್ರವಾಹಕ್ಕೆ ಕನಿಷ್ಠ 10 ಸಾವಿರಕ್ಕೂ ಅಧಿಕ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಚಿತ್ತಾಪುರ ವಿದ್ಯುತ್ ಘಟಕಕ್ಕೆ ವಿದ್ಯುತ್ ಸರಬರಾಜು ಮಾಡುವ ಎರಡು ಬೃಹತ್ ಟವರ್‌ಗ‌ಳು ಮುರಿದು ಬಿದ್ದಿವೆ. ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು