ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ನೆರೆ, ಅತಿವೃಷ್ಟಿಗೆ ಬದುಕು ನೀರುಪಾಲು

Published 31 ಜುಲೈ 2023, 5:35 IST
Last Updated 31 ಜುಲೈ 2023, 5:35 IST
ಅಕ್ಷರ ಗಾತ್ರ

ಮಲ್ಲಿಕಾರ್ಜನ ನಾಲವಾರ

ಕಲಬುರಗಿ: ‘ಜೀವನ ಬಾಳ್ ಕರಾಬ್ ಆಗೆದ್ರಿ. ಇಬ್ರು ಮಕ್ಕಳ್ ಇದ್ರು. ಒಬ್ಬ ನದಿ ನೀರಾಗ್ ಕೊಚ್ಕೊಂಡು ಹೋದ. ಬಾಡಿ ಸಿಗಲಿಲ್ಲ. ಇನ್ನೊಬ್ಬ ಆಕ್ಸಿಡೆಂಟ್‌ನ್ಯಾಗ್ ತೀರಿಕೊಂಡ. ನದ್ಯಾಗ್ ಕೊಚ್ಕೊಂಡ್ ಹೋದವನ ಬಾಡಿ ಸಿಗಲಿಲ್ಲ ಅಂತ ಡೆತ್ ಸರ್ಟಿಫಿಕೇಟ್ ಕೊಡ್ತಿಲ್ಲ, ಪರಿಹಾರನೂ ಬರುತ್ತಿಲ್ಲ. ಮಿನಿಸ್ಟರ್, ಎಂಎಲ್‌ಎ, ಆಫೀಸರನ್ನು ಭೇಟಿಯಾದ್ರೂ ಕೆಲಸ ಆಗ್ತಿಲ್ಲ...’

...ಹೀಗೆ ಹೇಳುತ್ತಾ ಕಣ್ಣೀರು ಸುರಿಸಿದವರು ಎರಡು ವರ್ಷಗಳ ಹಿಂದೆ ಕಾಗಿಣಾ ನದಿ ಪ್ರವಾಹದಲ್ಲಿ ಕೋಚ್ಚಿ ಹೋದ ಪ್ರಹ್ಲಾದ್ ದೋಡ್ಲಾ ಅವರ ತಂದೆ ದಶರಥ ಕಾಶಪ್ಪ ಅವರು.

ಚಿಂಚೋಳಿ ತಾಲ್ಲೂಕಿನ ಪೊತಂಗಲ್ ಗ್ರಾಮದ ನಿವಾಸಿಯಾಗಿರುವ ದಶರಥ ಅವರಂತಹ ನೆರೆ ಮತ್ತು ಅತಿವೃಷ್ಟಿ ತಂದೊಡ್ಡುವ ಹತ್ತಾರು ಕಣ್ಣೀರನ ಕಥೆಗಳು ಕೆಳ ಭೀಮಾ ಉಪ ಜಲಾನಯನ ಪ್ರದೇಶದಲ್ಲಿ ಸಿಗುತ್ತವೆ. ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಮಳೆಗಾಲದಲ್ಲಿ ಎದುರಾಗುವ ಸಂಕಷ್ಟಗಳಿಗೆ ಎದೆಯೊಡ್ಡಿ ಬದುಕು ಕಟ್ಟಿಕೊಳ್ಳುವುದು ಇಲ್ಲಿನವರಿಗೆ ಅನಿವಾರ್ಯವಾಗಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ರಾಜ್ಯ ಪ್ರವಾಹ ಅಪಾಯ ನಿರ್ವಹಣೆ ಕ್ರಿಯಾ ಯೋಜನೆ–2022ರ ಅನ್ವಯ, ಕೆಳ ಭೀಮಾ ಉಪ ಜಲಾನಯನ ಪ್ರದೇಶವು ವಿಜಯಪುರ, ಕಲಬುರಗಿ, ಯಾದಗಿರಿ ಮತ್ತು ಬೀದರ್ ಜಿಲ್ಲೆಗಳನ್ನು ಒಳಗೊಂಡಿದೆ. ಇಲ್ಲಿ ವಾರ್ಷಿಕ 242 ಮಿ.ಮೀ.ನಿಂದ 1,124 ಮಿ.ಮೀ. ನಡುವೆ ಮಳೆಯಾಗುತ್ತದೆ. ಭೀಮಾ, ಕಾಗಿಣಾ, ಮುಲ್ಲಮಾರಿ, ಕಮಲಾವತಿ, ಅಮರ್ಜಾ ಸೇರಿ ಇತರೆ ನದಿ, ಹಳ್ಳಗಳು ಮಳೆಗಾಲದಲ್ಲಿ ತುಂಬಿ ಹರಿದು, ನೆರೆಯನ್ನು ಹೊತ್ತು ತರುತ್ತವೆ.

ಜಿಲ್ಲೆಯಲ್ಲಿ ಸಂಭವನೀಯ ನೆರೆಯ 122 ಗ್ರಾಮಗಳನ್ನು ಗುರುತಿಸಲಾಗಿದ್ದು ಅವುಗಳ ಮೇಲೆ ನಿಗಾ ಇರಿಸಲು 54 ಅಧಿಕಾರಿಗಳನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ
ಬಿ.ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ

2005ರಿಂದ 2021ರ ನಡುವೆ ಜಿಲ್ಲೆಯ ಅಫಜಲಪುರ, ಸೇಡಂ, ಚಿತ್ತಾಪುರ, ಶಹಾಬಾದ್, ಕಾಳಗಿ, ಜೇವರ್ಗಿ ಮತ್ತು ಯಡ್ರಾಮಿ, ಆಳಂದ ತಾಲ್ಲೂಕಗಳಲ್ಲಿ 5ರಿಂದ 6 ಬಾರಿ ಹಾಗೂ ಚಿಂಚೋಳಿ ತಾಲ್ಲೂಕಿನಲ್ಲಿ 7ರಿಂದ 8 ಬಾರಿ ಪ್ರವಾಹ ಸಂಭವಿಸಿದೆ. ಈ ಅವಧಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ನೀರು ಪಾಲಾಗಿದ್ದು, ಜೀವ ಹಾನಿಯೂ ಸಂಭವಿಸಿದೆ.

ಕೆಳ ಭೀಮಾ ಉಪ ಜಲಾನಯನದ ನಾಲ್ಕು ಜಿಲ್ಲೆಗಳಲ್ಲಿ 292 ಗ್ರಾಮಗಳು ನೆರೆಗೆ ತುತ್ತಾಗುತ್ತವೆ. ಇದರಲ್ಲಿ 112 ಅತ್ಯಂತ ಅಪಾಯಕಾರಿ ಹಾಗೂ 180 ಮಧ್ಯಮ ಅಪಾಯಕಾರಿ ಗ್ರಾಮಗಳನ್ನಾಗಿ ಗುರುತಿಸಲಾಗಿದೆ. ಇವುಗಳ ಪೈಕಿ ಅತಿಹೆಚ್ಚು ಗ್ರಾಮಗಳು ಅಂದರೆ 238 ಗ್ರಾಮಗಳು ಬರುವುದು ಕಲಬುರಗಿ ಜಿಲ್ಲೆಯಲ್ಲಿ. ಅವುಗಳಲ್ಲಿ 89 ಅತ್ಯಂತ ಅಪಾಯಕಾರಿ ಹಾಗೂ 149 ಮಧ್ಯಮ ಅಪಾಯಕಾರಿ ನೆರೆ ಪೀಡಿತ ಗ್ರಾಮಗಳಿವೆ. ಭೀಮಾ ಮತ್ತು ಅದರ ಉಪನದಿಗಳು ಉಕ್ಕೇರಿದಾಗ ಈ ಗ್ರಾಮಗಳ ನಿವಾಸಿಗಳು ಆತಂಕಕ್ಕೆ ಒಳಗಾಗುತ್ತಾರೆ.

ಆಗಾಗ ಸಂಭವಿಸುವ ಪ್ರವಾಹ ತಡೆಗೆ ದೀರ್ಘಾಕಾಲಿನ ಯೋಜನೆಗಳನ್ನು ರೂಪಿಸಬೇಕು. ನೆರೆಯ ನೀರು ಸಂಗ್ರಹಿಸಿ ಬೇಸಿಗೆಯ ವೇಳೆ ಬಳಸಿಕೊಳ್ಳುವಂತೆ ಆಗಬೇಕು
ಸಂಗೀತಾ ಕಟ್ಟಿಮನಿ, ಪರಿಸರ ತಜ್ಞೆ

‘ನೆರೆಯು ಕೃಷಿ, ತೋಟಗಾರಿಕೆ ಬೆಳೆಗಳು ಹಾಗೂ ಮೂಲಸೌಕರ್ಯಗಳಿಗೂ ಧಕ್ಕೆ ತರುತ್ತಿದೆ. ಮಣ್ಣು ಕೊಚ್ಚಿಕೊಂಡು ಹೋಗಿ ಕೃಷಿಯ ಮೇಲೆ ದೀರ್ಘಕಾಲದ ಪರಿಣಾಮ ಬೀರುವಂತೆ ಮಾಡುತ್ತದೆ. ಗಿಡ–ಮರಗಳನ್ನು ಧರೆಗೆ ಉರುಳಿಸುತ್ತದೆ. ಅತಿಯಾದ ತೇವಾಂಶದಿಂದಾಗಿ ರೋಗಗಳು ಹಬ್ಬಿ, ಇಳುವರಿಯನ್ನು ಕುಂಠಿತಗೊಳಿಸುತ್ತದೆ. ಎರಡ್ಮೂರು ದಿನಗಳಲ್ಲಿ ಬಂದು ಹೋಗುವ ಪ್ರವಾಹ ಮತ್ತು ಅತಿವೃಷ್ಟಿಯು ರೈತರ ಹಾಗೂ ಜನಸಾಮಾನ್ಯರ ವರ್ಷದ ಅನ್ನವನ್ನು ಕಸಿದುಕೊಳ್ಳುತ್ತದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ’ ಎನ್ನುತ್ತಾರೆ ಪರಿಸರ ತಜ್ಞರು.

ಕಳೆದ ವರ್ಷ 10 ಜನರ ಸಾವು

2022ರಲ್ಲಿ ಮಳೆ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 10 ಜನರು ಬಲಿಯಾಗಿದ್ದು 47 ಜಾನುವಾರುಗಳು ಮೃತಪಟ್ಟಿವೆ. 1065 ಮನೆಗಳಿಗೆ ಭಾಗಶಃ ಮತ್ತು ಗಂಭೀರ ಹಾನಿಯಾಗಿವೆ. 1.81 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ.

340 ಹೆಕ್ಟೇರ್ ಪ್ರದೇಶದಲ್ಲಿನ ತೋಟಗಾರಿಕೆ ಬೆಳೆಗೂ ಹಾನಿಯಾಗಿದೆ. 52.68 ಕಿ.ಮೀ. ರಾಜ್ಯ ಹೆದ್ದಾರಿ 40 ಕಿ.ಮೀ. ಜಿಲ್ಲಾ ಪ್ರಮುಖ ರಸ್ತೆ ಹಾಗೂ 554 ಕಿ.ಮೀ. ಗ್ರಾಮೀಣ ರಸ್ತೆ ಮಳೆಗೆ ಕೊಚ್ಚಿಕೊಂಡು ಹೋಗಿತ್ತು. ಸರ್ಕಾರಿ ಶಾಲೆಗಳ 20 ಹಾಗೂ 461 ಅಂಗನವಾಡಿ ಕೇಂದ್ರಗಳ ಕಟ್ಟಡಗಳಿಗೆ ಧಕ್ಕೆ ಆಗಿತ್ತು. 175 ಸೇತುವೆಗಳು ಮಳೆ ಮತ್ತು ನೆರೆಗೆ ಹಾನಿಗೀಡಾಗಿದ್ದವು. 1677 ವಿದ್ಯುತ್ ಕಂಬಗಳು 397 ವಿದ್ಯುತ್ ಪರಿವರ್ತಕಗಳು ಸಹ ಹಾನಿಯಾದವು. ಇಂತಹ ಹಾನಿಯು ಪ್ರತಿ ವರ್ಷ ಮರುಕಳಿಸುತ್ತಿರುತ್ತದೆ.

ನೀರಿನಲ್ಲಿ ಕೊಚ್ಚಿ ಹೋದ ಚಿಂಚೋಳಿಯ ಪ್ರಹ್ಲಾದ್ ದೊಡ್ಲಾ ಅವರ ಕುಟುಂಬಸ್ಥರು ಬಡತನದ ಜೀವನ ನಡೆಸುತ್ತಿದ್ದಾರೆ. ಪರಿಹಾರಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದು ಬಸವಳಿದಿದ್ದಾರೆ
ಜಗನ್ನಾಥ ರೋಂಪಳ್ಳಿ, ಸಾಮಾಜಿಕ ಕಾರ್ಯಕರ್ತ

ತಜ್ಞರನ್ನು ಹೊರಗಿಟ್ಟು ಯೋಜನೆಗಳ ಅನುಷ್ಠಾನ

‘ಕಿಂಡಿ ಹೊಂದಿರುವ ಅಣೆಕಟ್ಟು ಚೆಕ್‌ ಡ್ಯಾಂ ಕಾಲುವೆ ನಿರ್ಮಾಣದಲ್ಲಿ ತಜ್ಞರನ್ನು ಹೊರಗಿಟ್ಟು ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಪ್ರವಾಹ ತಡೆಯಬೇಕೆಂಬ ಉದ್ದೇಶ ಸಫಲ ಆಗುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು. ‘ಅಣೆಕಟ್ಟೆ ಕಾಲುವೆ ನಿರ್ಮಾಣ ಸಂಬಂಧ ಜಲಾನಯನ ಪ್ರದೇಶದ ಭೂರಚನೆ ನೀರಿನ ನೈಸರ್ಗಿಕ ಹರಿವಿನ ಮಾರ್ಗ ಭೂರೂಪಶಾಸ್ತ್ರ ಅಧ್ಯಯನ ಮಾಡುತ್ತಿಲ್ಲ. ಅಧಿಕಾರಿಗಳು ರಾಜಕಾರಣಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಹೀಗಾಗಿ ನೆರೆ ಬಂದಾಗ ನದಿ ನೀರು ಹರಿದು ಜನವಸತಿ ಪ್ರದೇಶಕ್ಕೆ ನುಗ್ಗುತ್ತದೆ’ ಎಂದರು.

ನದಿ ತೀರದಲ್ಲಿ ಹಸಿರು ವಲಯ ನಿರ್ಮಿಸಿ

‘ನದಿಯ ಬದಿಯಲ್ಲಿ ಮರಗಳನ್ನು ಬೆಳೆಸಬೇಕು. ನದಿ ತೀರದ ಎರಡು ಬದಿಯ 200 ಮೀಟರ್ ಹಸಿರು ವಲಯ ನಿರ್ಮಾಣ ಮಾಡಿದರೆ ನೆರೆಯ ನೀರು ಜನವಸತಿ ಜಮೀನಿಗೆ ನುಗ್ಗುವುದು ತಪ್ಪುತ್ತದೆ. ಬೇಸಿಗೆಯಲ್ಲಿ ನದಿ ಬತ್ತಿದಾಗ ಹಸಿರು ವಲಯದಿಂದ ನೀರು ಬಸಿಯುತ್ತದೆ’ ಎಂದು ಭೂ ವಿಜ್ಞಾನಿ ಮೋಹನ್‌ ಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜಲಾನಯನ ಪ್ರದೇಶದ ಸಮಗ್ರ ಅಧ್ಯಯನ ಮಾಡಿ ಕಾಲುವೆಯ ನೈಸರ್ಗಿಕ ಮಾರ್ಗ ಗುಡ್ಡಗಾಡು ಪ್ರದೇಶ ತಗ್ಗು ದಿನ್ನೆಗಳ ಅಧ್ಯಯನ ಮಾಡಬೇಕು. ಯಾವ ಪ್ರದೇಶದಲ್ಲಿ ವೇಗವಾಗಿ ಹರಿಯುತ್ತದೆ ಎಲ್ಲಿ ಅಗಲವಾಗಿ ಮತ್ತು ಕಿರಿದಾಗಿ ಹರಿಯುತ್ತದೆ ಎಂಬುದು ಅರಿತು ಚೆಕ್ ಡ್ಯಾಮ್ ಕಿಂಡಿ ಹೊಂದಿರುವ ಅಣೆಕಟ್ಟು ನಿರ್ಮಿಸಬೇಕು. ಹೆಚ್ಚುವರಿ ನೀರು ಹರಿದು ಬಂದಾಗ ಕಾಲುವೆಗಳ ಮೂಲಕ ಕೆರೆ ಕಟ್ಟೆಗಳು ಬರಡು ನೆಲ ಮತ್ತೊಂದು ನದಿ ಅಥವಾ ಹಳ್ಳಕ್ಕೆ ಬಿಡುವಂತಹ ವೈಜ್ಞಾನಿಕ ಕಾಲುವೆ ಜಾಲ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು. ‘ನದಿಯ ಮೂಲದಿಂದ ಕೊನೆಯ ಹಂತದವರೆಗೂ ನದಿ ಪಾತ್ರದಲ್ಲಿ ಬಿಳುತ್ತಿರುವ ಮಳೆಯ ಪ್ರಮಾಣ ಹರಿವಿನ ಮಟ್ಟವನ್ನು ವೈಜ್ಞಾನಿಕವಾಗಿ ಹಂಚಿಕೊಳ್ಳಬೇಕು. ಪ್ರತಿ 5ರಿಂದ 6 ವರ್ಷಗಳ ಅವಧಿಯಲ್ಲಿ 2 ವರ್ಷ ಬರಗಾಲ 3ನೇ ಹೆಚ್ಚು ಮಳೆ 4 ಮತ್ತು 5ನೇ ವರ್ಷದಲ್ಲಿ ಅತಿಹೆಚ್ಚು ಮಳೆಯಾಗಿ ನೆರೆ ಸಂಭವಿಸುತ್ತದೆ. 5–6 ವರ್ಷಕ್ಕೆ ಪುನರಾವರ್ತನೆ ಆಗುವುದನ್ನು ಭೂ ವಿಜ್ಞಾನಿಗಳು ಪತ್ತೆ ಹಚ್ಚಿದ್ದು ಇದಕ್ಕೆ ತಕ್ಕಂತೆ ಪ್ರವಾಹ ಮತ್ತು ಬರಗಾಲ ಎದುರಿಸಲು ಅಧಿಕಾರಿಗಳು ಸಿದ್ಧರಾಗಬೇಕು’ ಎಂದರು.

ನೀಮಾಹೊಸಳ್ಳಿ–ದೇಗಲಮಡಿ ನಡುವಿನ ಬ್ರಿಜ್ ಕಂ ಬ್ಯಾರೇಜ್ ಪ್ರವಾಹದಲ್ಲಿ ಮುಳುಗುವುದು ಸಾಮಾನ್ಯವಾಗಿದ್ದು ಗ್ರಾಮಕ್ಕೆ ನೀರು ನುಗ್ಗದಂತೆ ತಡೆ ಗೋಡೆ ನಿರ್ಮಿಸಬೇಕು
ಮಸ್ತಾನ ಇಟಲಿ ಗ್ರಾಮದ ಮುಖಂಡ

ನದಿ ತೀರದಲ್ಲಿ ತಡೆ ಗೋಡೆ ನಿರ್ಮಿಸಿ

ಸೇಡಂ: ಕಾಗಿಣಾ ಮತ್ತು ಅದರ ಉಪನದಿಗಳಿಂದಾಗಿ ತಾಲ್ಲೂಕಿನಲ್ಲಿ 16 ಪ್ರವಾಹ ಪೀಡಿತ ಗ್ರಾಮಗಳೆಂದು ಗುರುತಿಸಲಾಗಿದೆ. ಈ ಪೈಕಿ 5 ಅತ್ಯಂತ ಅಪಾಯಕಾರಿ ಹಾಗೂ 11 ಮಧ್ಯಮ ಅಪಾಯಕಾರಿ ಗ್ರಾಮಗಳಿವೆ. ಸೇಡಂನ ಕಮಲಾವತಿ ನದಿ ನೀರಿನ ಪ್ರವಾಹ ತಡೆಗಟ್ಟಲು ಸುಮಾರು ₹50 ಲಕ್ಷ ವೆಚ್ಚದಲ್ಲಿ ನದಿಗೆ ತಡೆಗೋಡೆ ನಿರ್ಮಿಸಲಾಗಿದೆ. ತಡೆಗೋಡೆಯೂ ಪಿಚ್ಚಿಂಗ್ ಕಲ್ಲು ಹಾಕಲಾಗಿದ್ದು ಮಧ್ಯದಲ್ಲಿ ಸಿಮೆಂಟ್‌ನ ಪಿಲ್ಲರ್‌ಗಳಿವೆ. ಸುಮಾರು 14 ಅಡಿಗೂ ಅಧಿಕ ಎತ್ತರದಲ್ಲಿ ತಡೆಗೋಡೆ ನಿರ್ಮಿಸಲಾಗಿದೆ. ಇಂತಹುದು ತಡೆಗಳನ್ನು ಇತರೆ ಪ್ರವಾಹ ಪೀಡಿತ ಗ್ರಾಮಗಳಲ್ಲಿ ನಿರ್ಮಿಸಿಬೇಕು ಎಂಬುದು ಸ್ಥಳೀಯರ ಆಗ್ರಹ.

ಸೇತುವೆ ಎತ್ತರ ಹೆಚ್ಚಳ ಯಾವಾಗ?

ಚಿಂಚೋಳಿ: ಜಿಲ್ಲೆಯಲ್ಲಿ ಅತಿಹೆಚ್ಚು ಪ್ರವಾಹ ಪೀಡಿತ ತಾಲ್ಲೂಕು ಚಿಂಚೋಳಿಯಾಗಿದ್ದು ಕಳೆದ 16 ವರ್ಷಗಳ ಅವಧಿಯಲ್ಲಿ 7ರಿಂದ 8 ಬಾರಿ ಪ್ರವಾಹಕ್ಕೆ ತುತ್ತಾಗಿದೆ. ಮಳೆಗಾಲದಲ್ಲಿ ಮುಲ್ಲಾಮಾರಿ ನದಿ ಉಕ್ಕೇರಿದರೆ ನದಿ ತೀರದ ಜನರು ಆತಂಕಕ್ಕೆ ಒಳಗಾಗುತ್ತಾರೆ. ಗಾರಂಪಳ್ಳಿಯ ಸೇತುವೆ ಮುಳುಗಡೆಯಿಂದ ಶವ ಸಂಸ್ಕಾರಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಸೇತುವೆ ಎತ್ತರ ಹೆಚ್ಚಿಸುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ನಾಗರಾಳ ಜಲಾಶಯದ ನೀರು ಮುಲ್ಲಾಮಾರಿ ನದಿಗೆ ಬಿಟ್ಟರೆ ಚಿಮ್ಮನಚೋಡ ಗಾರಂಪಳ್ಳಿ ತಜಲಾಪುರ ಗರಕಪಳ್ಳಿ ಭಕ್ತಂಪಳ್ಳಿ ಸೇರಿ ಹಲವು ಗ್ರಾಮಗಳು ಸಂಪರ್ಕ ಕಡಿದುಕೊಳ್ಳುತ್ತವೆ. ಗರಕಪಳ್ಳಿ- ಭಕ್ತಂಪಳ್ಳಿ ನಡುವಿನ ಸೇತುವೆ ಮುಳುಗಿ ಸಂಪರ್ಕ ಇಲ್ಲದಂತಾಗುತ್ತದೆ. ಮುಲ್ಲಾಮಾರಿ ನದಿ ಪಾತ್ರದಲ್ಲಿನ ಸೇತುವೆಗಳ ಎತ್ತರ ಹೆಚ್ಚಳ ಅಗತ್ಯವಿದೆ.

ಸಿಗದ ವಿಮೆ ಪರಿಹಾರ

ಮುಲ್ಲಾಮಾರಿ ನದಿ ನೀರು ನುಗ್ಗಿ ಬೆಳೆಗಳು ನಾಶವಾದವು. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ‌ ಅಡಿಯಲ್ಲಿ ವಿಮೆ ನೋಂದಾಯಿಸಿದರೂ ಪರಿಹಾರ ಸಿಗುತ್ತಿಲ್ಲ ಎಂದು ರೈತ ಗುರುರಾಜ ಪತ್ತಾರ ದೂರಿದರು. ‘ಬೆಳೆ ಹಾಳಾದ ಜಮೀನಿಗೆ ವಿಮೆ ಮಾರ್ಗಸೂಚಿಯಂತೆ ಪರಿಹಾರ ನೀಡಬೇಕು. ಆದರೆ ವಿಮಾ ಕಂಪನಿಯು ಸ್ಥಳೀಯ ಆಪತ್ತು ಎಂದು ಹೇಳಿ ಎಕರೆಗೆ ₹2ಸಾವಿರ ಮಾತ್ರ ಪರಿಹಾರ ಕೊಟ್ಟಿದ್ದಾರೆ’ ಎಂದರು. ‘ಒಂದಕ್ಕಿಂತ ಹೆಚ್ಚು ಗ್ರಾಮಗಳಲ್ಲಿ ಜಮೀನು ಹೊಂದಿದ ರೈತರಿಗೆ ಅತಿವೃಷ್ಟಿ ಮತ್ತು ಪ್ರವಾಹದಿಂದ ಹಾನಿಯಾದ ಬೆಳೆಗೆ ಸರಿಯಾದ ಪರಿಹಾರ ಸಿಗುತ್ತಿಲ್ಲ. ಎರಡು ಕಡೆ ಪರಿಹಾರ ಸಿಗುವುದಿಲ್ಲ ಎಂದು ಅಧಿಕಾರಿಗಳು ಕೈತೊಳೆದುಕೊಳ್ಳುತ್ತಾರೆ’ ಎಂದು ರೈತರ ಬೇಸರ ವ್ಯಕ್ತಪಡಿಸಿದರು. ಬೇಕು ತಡೆಗೋಡೆ: ಪ್ರವಾಹ ಪೀಡಿತ ಚಿಂಚೋಳಿ ಕನಕಪುರ ಚಂದಾಪುರ ನೀಮಾ ಹೊಸಳ್ಳಿ ದೇಗಲಮಡಿ ಕಲ್ಲೂರು ರೋಡ್ ಗಾರಂಪಳ್ಳಿಗೆ ಪ್ರವಾಹ ನಿಯಂತ್ರಣ ಗೋಡೆ ನಿರ್ಮಿಸಿಬೇಕು ಎಂಬುದು ಸ್ಥಳೀಯರ ಒತ್ತಾಯ.

ಬೆಣ್ಣೆತೊರಾ ನೆರೆಗೆ ಜನ-ಜಾನುವಾರು ತತ್ತರ

ಕಾಳಗಿ: ಮಹಾರಾಷ್ಟ್ರದಲ್ಲಿ ಮಳೆ ಬಂದಾಗಲೆಲ್ಲ ಅಲ್ಲಿಯ ನೀರು ತಾಲ್ಲೂಕಿನ ಬೆಣ್ಣೆತೊರಾ ಜಲಾಶಯಕ್ಕೆ ಹರಿದು ಬರುತ್ತದೆ. ನೀರು ಹೊರ ಬಿಟ್ಟಾಗ ಹೇರೂರ(ಕೆ) ಜೀವನಮಾರಡಗಿ ಸಾವತಖೇಡ ಶೆಳ್ಳಗಿ ಹೆಬ್ಬಾಳ ಕಣಸೂರ ಗೋಟೂರ ಮಲಘಾಣ ಡೊಣ್ಣೂರ ಕಲಗುರ್ತಿ ಅರಜಂಬಗಾ ತೆಂಗಳಿ ಸಾಲಹಳ್ಳಿ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗುತ್ತದೆ. ಹೆಬ್ಬಾಳ ಕಣಸೂರ ಕಲಗುರ್ತಿ ಡೊಣ್ಣೂರ ಮಲಘಾಣ ಮತ್ತು ತೆಂಗಳಿ ಗ್ರಾಮಗಳ ಮನೆಗಳಿಗೆ ನುಗ್ಗಿ ಜನಜೀವನವನ್ನು ಈ ಹಿಂದೆ ಅಸ್ತವ್ಯಸ್ತ ಗೊಳಿಸಿದೆ. ಹಳೆಹೆಬ್ಬಾಳ ಮತ್ತು ಡೊಣ್ಣೂರ-ಕಲಗುರ್ತಿ ನಡುವೆ ಸೇತುವೆ ನಿರ್ಮಿಸಿದ್ದರೂ ತೊಂದರೆ ತಪ್ಪಿಲ್ಲ ಎನ್ನುತ್ತಾರೆ ಸ್ಥಳೀಯರು. ಕಣಸೂರ ಗ್ರಾಮವನ್ನು ಅಶೋಕನಗರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ಉಳಿದುಕೊಂಡಿದೆ. ಮಾಡಬೂಳ-ಕಾಳಗಿ ಚಿತ್ತಾಪುರ-ಕಾಳಗಿ ಮಲಘಾಣ-ಕಾಳಗಿ ರಸ್ತೆಯು ನೆರೆಯಿಂದ ಸ್ಥಗಿತಗೊಂಡು ವಾಹನ ಸವಾರರು ಪ್ರಯಾಣಿಕರು ಹೈರಾಣಾಗುತ್ತಾರೆ.

ನೆರೆಗೆ ತುತ್ತಾಗುವ ಜಿಲ್ಲೆಯ ಗ್ರಾಮಗಳು

ತಾಲ್ಲೂಕು;ತುಂಬ ಅಪಾಯಕಾರಿ;ಮಧ್ಯಮ ಅಪಾಯಕಾರಿ;ಒಟ್ಟು

ಅಫಜಲಪುರ;17;16;33

ಆಳಂದ;3;17;20

ಚಿಂಚೋಳಿ;13;11;24

ಚಿತ್ತಾಪುರ;8;31;39

ಕಲಬುರಗಿ ತಾ;9;18;27

ಜೇವರ್ಗಿ;12;17;29

ಸೇಡಂ;5;11;16

ಕಾಳಗಿ;14;11;25

ಕಮಲಾಪುರ;5;12;17

ಯಡ್ರಾಮಿ;0;1;1

ಶಹಾಬಾದ್;3;4;7

ಒಟ್ಟು; 89;149;238

ಪೂರಕ ಮಾಹಿತಿ: ಜಗನ್ನಾಥ ಡಿ. ಶೇರಿಕಾರ, ಗುಂಡಪ್ಪ ಕರೆಮನೋರ

ಚಿಂಚೋಳಿ ತಾಲ್ಲೂಕಿನ ದೇಗಲಮಡಿ‌ ಗ್ರಾಮದ ತೋಟದಲ್ಲಿ ಮಳೆ ಪ್ರವಾಹಕ್ಕೆ ಬಾಳೆ ಗಿಡಗಳು ನೆಲಕ್ಕುರುಳಿದವು
ಚಿಂಚೋಳಿ ತಾಲ್ಲೂಕಿನ ದೇಗಲಮಡಿ‌ ಗ್ರಾಮದ ತೋಟದಲ್ಲಿ ಮಳೆ ಪ್ರವಾಹಕ್ಕೆ ಬಾಳೆ ಗಿಡಗಳು ನೆಲಕ್ಕುರುಳಿದವು
ಜೇವರ್ಗಿ ತಾಲ್ಲೂಕಿನ ಕೊನ ಹಿಪ್ಪರಗಾ ಗ್ರಾಮದಲ್ಲಿನ ಭೀಮಾ ನದಿ ಪ್ರವಾಹ(ಸಂಗ್ರಹ ಚಿತ್ರ)
ಜೇವರ್ಗಿ ತಾಲ್ಲೂಕಿನ ಕೊನ ಹಿಪ್ಪರಗಾ ಗ್ರಾಮದಲ್ಲಿನ ಭೀಮಾ ನದಿ ಪ್ರವಾಹ(ಸಂಗ್ರಹ ಚಿತ್ರ)
ಭೀಮಾ ನದಿ ಪ್ರವಾಹದಿಂದ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಜಲಾವೃತ ಆಗಿದ್ದು (ಸಂಗ್ರಹ ಚಿತ್ರ)
ಭೀಮಾ ನದಿ ಪ್ರವಾಹದಿಂದ ಜೇವರ್ಗಿ ತಾಲ್ಲೂಕಿನ ಹರವಾಳ ಗ್ರಾಮದ ಜಲಾವೃತ ಆಗಿದ್ದು (ಸಂಗ್ರಹ ಚಿತ್ರ)
ಭೀಮಾ ನದಿಯ ಪ್ರವಾಹದಿಂದ ಜೇವರ್ಗಿ ತಾಲ್ಲೂಕಿನ ಕೊಬಾಳ ಗ್ರಾಮ ಜಲಾವೃತಗೊಂಡಿದ್ದು(ಸಂಗ್ರಹ ಚಿತ್ರ)
ಭೀಮಾ ನದಿಯ ಪ್ರವಾಹದಿಂದ ಜೇವರ್ಗಿ ತಾಲ್ಲೂಕಿನ ಕೊಬಾಳ ಗ್ರಾಮ ಜಲಾವೃತಗೊಂಡಿದ್ದು(ಸಂಗ್ರಹ ಚಿತ್ರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT