ಶನಿವಾರ, ಫೆಬ್ರವರಿ 29, 2020
19 °C
200 ಊಟದ ಕೌಂಟರ್‌ ತೆರೆದಿದ್ದರೂ ಪ್ರತಿನಿಧಿಗಳಿಗೆ ಮೀಸಲಿದ್ದ 22 ಕೌಂಟರ್‌ಗಳಿಗೇ ನುಗ್ಗಿದ ಜನ

ಮಧ್ಯಾಹ್ನ ನೂಕುನುಗ್ಗಲು, ರಾತ್ರಿ ಸರಳ

ತೀರ್ಥಕುಮಾರ ಬೆಳಕೋಟಾ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆದ 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮೊದಲ 22 ಊಟದ ಕೌಂಟರ್‌ಗಳಲ್ಲಿ ಮಾತ್ರ ಜನ ಮುಗಿಬಿದ್ದಿದ್ದು, ನೂಕುನುಗ್ಗುಲು ಉಂಟಾಯಿತು. ಇದಕ್ಕೆ ವಿರುದ್ಧವಾಗಿ ಇನ್ನೊಂದೆಡೆ ಇದ್ದ ಊಟದ ಕೌಂಟರ್‌ಗಳು ಜನರೇ ಇಲ್ಲದೇ ಬಿಕೊ ಎನ್ನುತ್ತಿದ್ದವು.

ಒಟ್ಟು 150 ಊಟದ ಕೌಂಟರ್‌ಗಳಿದ್ದು, ಇದರಲ್ಲಿ ಮೂರು ಭಾಗ ಮಾಡಲಾಗಿದೆ. ಮೊದಲನೆಯ 22 ಕೌಂಟರ್‌ಗಳಲ್ಲಿ ಜನಪ್ರತಿನಿಧಿಗಳು ಹಾಗೂ ಪ್ರತಿನಿಧಿ ಶುಲ್ಕ ಸಂದಾಯ ಮಾಡಿದವರಿಗೆ ಮೀಸಲಿಡಲಾಗಿತ್ತು. ನಂತರ 23 ರಿಂದ 50ರವರೆಗೆ ಸುಮಾರು 28 ಕೌಂಟರ್‌ಗಳನ್ನು ಮಹಿಳೆಯರಿಗಾಗಿ ಮೀಸಲಿಡಲಾಗಿದೆ. ನಂತರ 50 ರಿಂದ 150ರವರೆಗಿನ 100 ಕೌಂಟರ್‌ಗಳನ್ನು ಸಾರ್ವಜನಿಕರ ಊಟಕ್ಕಾಗಿ ವ್ಯವಸ್ಥೆ
ಮಾಡಲಾಗಿದೆ.

ಪ್ರತಿನಿಧಿ ಶುಲ್ಕ ಭರಿಸಿದವರಿಗಾಗಿ ಮೀಸಲಿಡಲಾಗಿದ್ದ ಕೌಂಟರ್‌ನ ವಿಭಾಗ ಮೊದಲಿಗಿರುವುದರಿಂದ ಎಲ್ಲರೂ ಈ ಕೌಂಟರ್‌ಗಳಲ್ಲಿಯೇ ಉದ್ದುದ್ದ ಸರತಿ ಉಂಟಾಯಿತು. ನಂತರದಲ್ಲಿರುವ ಮಹಿಳೆಯರ ಕೌಂಟರ್‌ ಹಾಗೂ ಕೊನೆಯ 100 ಕೌಂಟರ್‌ಗಳಿರುವ ಮಾಹಿತಿ ಇಲ್ಲದೇ ಕೌಂಟರಗಳಲ್ಲಿ ಬಿಕೊ ಎನ್ನುತ್ತಿದ್ದವು.

ಮೊದಲ ಕೌಂಟರ್‌ನಲ್ಲಿ ಹೆಚ್ಚು ಜನಸಂದಣಿ ಉಂಟಾಗಿ ಬೇರೆ ಜಿಲ್ಲೆಗಳಿಂದ ಬಂದ ಪ್ರತಿನಿಧಿಗಳು ಊಟ ಮಾಡಲು ಹರಸಾಹಸ ಪಡಬೇಕಾಯಿತು. ಆಯೋಜಕರು ಸ್ವಯಂ ಸೇವಕರು ಸೂಕ್ತ ಮಾರ್ಗದರ್ಶನ ಮಾಡದ ಕಾರಣ ಹಲವರು ಬೇಸರಗೊಂಡರು. ಇನ್ನೊಂದೆಡೆ ಮೈಕ್‌ನಲ್ಲಿ ಆಯೋಜಕರು ನೀಡುತ್ತಿದ್ದ ಮಾಹಿತಿಯನ್ನು ಜನ ಕೇಳಿಸಿಕೊಳ್ಳಲೇ ಇಲ್ಲ.

ಮಧ್ಯಾಹ್ನ 12.30 ರಿಂದ 2.30 ರವರೆಗೆ ಊಟದ ಸಮಯ ನಿಗದಿ ಪಡಿಸಿದ್ದರೂ ಸಂಜೆಯವರಗೆ ಉಟ ಬಡಿಸಿದ ಸ್ವಯಂ ಸೇವಕರು, ಕನ್ನಡಾಭಿಮಾನಿಗಳ ಹಸಿವು ತಣಿಸಿದರು.

ಶಾಲಾ ಮಕ್ಕಳ ದಂಡು: ಶಾಲೆಗಳಿಗೆ ರಜೆ ಘೋಷಿಸಿರುವುದರಿಂದ ಬಹುತೇಕ ಶಾಲಾ ಮಕ್ಕಳು ಸಮ್ಮಳನ್ನಕ್ಕೆ ಆಗಮಿಸಿದ್ದರು. ಹೀಗಾಗಿ ಮತ್ತಷ್ಟು ಜನಸಂದಣಿ
ಉಂಟಾಯಿತು.

ಊಟದ ಕೌಂಟರ್‌ ಗೇಟ್‌ಗಳ ಎದುರಿಗೆ ಕೈತೊಳೆಯಲು ಕುಡಿಯುವ ನೀರಿನ ವೆವಸ್ಥೆ ಮಾಡಿದ್ದರಿಂದ ಕೆಸರಾಗಿ ಜನರಿಗೆ ಒಳಗೆ ಹೋಗಲು ತೊಂದರೆ ಯುಂಟಾಯಿತು.

‘ಮಧ್ಯಾಹ್ನದ ಸುಮಾರು 2 ಗಂಟೆ ಹೊತ್ತಿಗೆ ಊಟಕ್ಕೆ ಬಂದಿದ್ದೆ. ಅಷ್ಟೊತ್ತಿಗೆ ಅನ್ನ ಮುಗಿದುಹೋಗಿತ್ತು‘ ಎಂದು ಹೈದರಾಬಾದ್‌ನಿಂದ ಬಂದ ಸಾಹಿತ್ಯಾಸಕ್ತರೊಬ್ಬರು ಹೇಳಿದರು. ಆದರೆ, ಬಂದವರಿಗೆಲ್ಲ ಊಟದ ವ್ಯವಸ್ಥೆ ಮಾಡಿದ್ದೇವೆ. ಯಾರಿಗೂ ಊಟ ಇಲ್ಲದಂತೆ ಆಗಿಲ್ಲ ಎಂದು ವ್ಯವಸ್ಥಾಪಕರು ಪ್ರತಿಕ್ರಿಯಿಸಿದರು.

ಸಂಜೆ ಎಲ್ಲವೂ ಸುಸೂತ್ರ: ಮಧ್ಯಾಹ್ನದ ಊಟದ ವೇಳೆ ಆದ ಗೊಂದಲ ರಾತ್ರಿ ವೇಳೆಗೆ ಬಗೆಹರಿಯಿತು. ಮುಂಚಿತವಾಗಿಯೇ ಆಯೋಜಕರು ಮೈಕ್‌ನಲ್ಲಿ ಮಾಹಿತಿ ನೀಡಿದರು. ಎಲ್ಲ ಕೌಂಟರ್‌ಗಳಲ್ಲೂ ಒಂದೇ ರೀತಿಯ ಊಟವಿದೆ, ಬಿಡಿಬಿಡಿಯಾಗಿ ತೆರಳಬೇಕು ಎಂದು ಹೇಳಿದರು. ಇದರಿಂದ ನೂಕುನುಗ್ಗಲು ಉಂಟಾಗಲಿಲ್ಲ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು