ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಸಂಘಗಳ ನಿಯಂತ್ರಿಸಲು ಅಧಿಕಾರಶಾಹಿ ಹುನ್ನಾರ: ವಿರೂಪಾಕ್ಷಪ್ಪ ಆಕ್ರೋಶ

ಆದೇಶದ ವಿರುದ್ಧ ಹೈಕೋರ್ಟ್‍ನಲ್ಲಿ ದಾವೆ ಶೀಘ್ರ: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ
Published 25 ಮಾರ್ಚ್ 2024, 15:24 IST
Last Updated 25 ಮಾರ್ಚ್ 2024, 15:24 IST
ಅಕ್ಷರ ಗಾತ್ರ

ಸಿಂಧನೂರು: ‘ಸೌಹಾರ್ದ ಸಹಕಾರಿ ಕಾಯ್ದೆಯಡಿಯಲ್ಲಿ ಸ್ಥಾಪನೆಯಾದ ಪತ್ತಿನ ಸೌಹಾರ್ದ ಸಹಕಾರಿ ಸಂಘಗಳ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರಿಗಳು ಹಲವಾರು ವರ್ಷಗಳಿಂದ ಪ್ರಯತ್ನಿಸುತ್ತಿದ್ದರು. ಇದೀಗ ಸರ್ಕಾರ ಹೊಸ ಆದೇಶ ಹೊರಡಿಸಿ, ಅವರ ಉದ್ದೇಶ ಈಡೇರಿಸಿದೆ’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಟೀಕಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಪ್ರಕಾರದ ಠೇವಣಿ ಮೇಲೆ ವಿವಿಧ ಅವಧಿಗೆ ನಿಗದಿ ಪಡಿಸುವ ಬಡ್ಡಿ ದರ ಅಥವಾ ಅದರ ಮೇಲೆ ಶೇ 2ರಷ್ಟು ಬಡ್ಡಿಯನ್ನು ಮಾತ್ರ ನಿಗದಿಪಡಿಸಬೇಕು. ಹೆಚ್ಚುವರಿ ಸಂಪನ್ಮೂಲವನ್ನು ಕಡ್ಡಾಯವಾಗಿ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್‍ಗಳಲ್ಲಿ ಹೂಡಿಕೆ ಮಾಡಬೇಕು. ವಿತರಿಸುವ ಸಾಲಗಳಿಗೆ ಶೇ12ರಷ್ಟು ಬಡ್ಡಿ ಮೀರುವಂತಿಲ್ಲ ಎಂಬುದು ಸೇರಿದಂತೆ ಸೌಹಾರ್ದ ಸಂಘಗಳಿಗೆ ಹೊಸ ಆದೇಶದಲ್ಲಿ ಹಲವು ನಿರ್ದೇಶನ ನೀಡಲಾಗಿದೆ. ಇದು ಅವೈಜ್ಞಾನಿಕವಾಗಿದ್ದು, ಏ.1ರಿಂದ ಜಾರಿಗೆ ಬಂದರೆ ಸಹಕಾರಿ ಸಂಸ್ಥೆಗಳನ್ನು ನಡೆಸುವುದು ಕಷ್ಟಸಾಧ್ಯವಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೃಷಿಯೇತರ ಮತ್ತು ವಿವಿಧೋದ್ದೇಶ ಸಹಕಾರಿ ಸಂಘಗಳಿಗೆ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಆದೇಶ ಸಹಕಾರಿ ಸಂಘಗಳ ಬೆಳವಣಿಗೆಗೆ ಮಾರಕವಾಗಿದೆ. ಸಂಘಗಳು ಸ್ವಾಯತ್ತ ಸಂಸ್ಥೆಗಳಾಗಿದ್ದು, ಸ್ಪರ್ಧಾತ್ಮಕ ಯುಗದಲ್ಲಿ ಆಯಾ ಜಿಲ್ಲೆಯಲ್ಲಿ ಆರ್ಥಿಕ ವ್ಯವಹಾರ ವಹಿವಾಟಿನಲ್ಲಿ ಪ್ರಮುಖ ಪಾತ್ರ ವಹಿಸಿವೆ. ಹೀಗಾಗಿ ಸರ್ಕಾರದ ಈ ಆದೇಶದ ವಿರುದ್ಧ ಹೈಕೋರ್ಟ್‍ನಲ್ಲಿ ಶೀಘ್ರ ದಾವೆ ಹೂಡಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಸಿಂಧು ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷ ಬಿ.ರಾಜಶೇಖರ ಮಾತನಾಡಿ, ‘ಸೌಹಾರ್ದ ಸಹಕಾರಿ ಕಾಯ್ದೆ ಜಾರಿಯಾದ ನಂತರ ರಾಜ್ಯದಲ್ಲಿ 600ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಕೋಟಿ ವಹಿವಾಟು ನಡೆಸುತ್ತಿದ್ದು, ಸುಮಾರು 60 ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಿವೆ. ಕೋಟ್ಯಂತರ ಜನರಿಗೆ ಸಾಲ ಸೌಲಭ್ಯ ಒದಗಿಸಿವೆ. ಸರ್ಕಾರದಿಂದ ಸಾಧ್ಯವಾಗದ ಹಣಕಾಸು ನೆರವನ್ನು ಸಹಕಾರಿ ಸಂಸ್ಥೆಗಳು ಮಾಡುತ್ತಿವೆ. ಆದರೆ, ಕೆಲ ಸಂಸ್ಥೆಗಳು ಹಾಳಾಗಿವೆ ಎಂದು ಎಲ್ಲ ಸಂಸ್ಥೆಗಳ ಮೇಲೆ ನಿಯಂತ್ರಣ ಹೇರುವುದು ಸಮಂಜಸವಲ್ಲ. ಕೂಡಲೇ ರಾಜ್ಯ ಸರ್ಕಾರ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ’ ಎಂದು ಎಚ್ಚರಿಸಿದರು.

ಒಕ್ಕೂಟದ ನಿರ್ದೇಶಕರಾದ ನಲ್ಲ ವೆಂಕಟೇಶ್ವರರಾವ್, ಎಚ್.ವೆಂಕಟೇಶ ಇದ್ದರು.

‘ಜಿಲ್ಲಾ ಒಕ್ಕೂಟದ ಸಭೆ ಮಾರ್ಚ್‌ 27ಕ್ಕೆ’

‘ಸಹಕಾರಿ ಸಂಸ್ಥೆಗಳ ಉಳಿವಿಗಾಗಿ ರಾಜ್ಯದಾದ್ಯಂತ ಸರ್ಕಾರದ ಆದೇಶದ ವಿರುದ್ಧ ಸೌಹಾರ್ದ ಸಹಕಾರಿ ಸಂಘಗಳು ಹೋರಾಟ ನಡೆಸಲು ನಿರ್ಧರಿಸಿವೆ. ಅದರ ಭಾಗವಾಗಿ ಮಾರ್ಚ್ 27ರಂದು ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆಗಳ ರಾಯಚೂರು ಜಿಲ್ಲಾ ಒಕ್ಕೂಟದ ಸಭೆ ಕರೆಯಲಾಗಿದ್ದು ಅಲ್ಲಿ ಚರ್ಚಿಸಿ ತೀರ್ಮಾನಿಸಲಾಗುವುದು’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT