ಭಾನುವಾರ, ಫೆಬ್ರವರಿ 28, 2021
21 °C
ಭಾರತದಲ್ಲಿ ಶೇ 17ರಷ್ಟು ಜನರಿಗೆ ಕಿಡ್ನಿ ಸಮಸ್ಯೆ: ಸಚಿವ ಉಮೇಶ ಕತ್ತಿ

ಕಲಬುರ್ಗಿ: ಉಚಿತ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಜಾಗತಿಕವಾಗಿ ಕಿಡ್ನಿ ಸಮಸ್ಯೆಯಿಂದ ಡಯಾಲಿಸಿಸ್‌ಗೆ ಒಳಗಾಗುವವರ ಸಂಖ್ಯೆ ಜಾಗತಿಕವಾಗಿ 46 ಕೋಟಿ ಇದ್ದು, ಏಷ್ಯಾದಲ್ಲಿ 8.8 ಕೋಟಿ ಇದ್ದಾರೆ. ಜಾಗತಿಕ ಅಂಕಿ ಸಂಖ್ಯೆಯ ಪೈಕಿ ಶೇ 17ರಷ್ಟು ಜನರು ಭಾರತದಲ್ಲೇ ಇದ್ದಾರೆ ಎಂದು  ಸಚಿವ ಉಮೇಶ ಕತ್ತಿ ತಿಳಿಸಿದರು.

ಮಾಜಿ ಶಾಸಕ ದಿ.ಚಂದ್ರಶೇಖರ ಪಾಟೀಲ ರೇವೂರ ಅವರ 64ನೇ ಜನ್ಮದಿನದ ನಿಮಿತ್ತ ಅವರ ಹೆಸರಿನ ಪ್ರತಿಷ್ಠಾನದಿಂದ ಮಂಗಳವಾರ ಇಲ್ಲಿನ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಆರಂಭಿಸಿರುವ ಉಚಿತ ಡಯಾಲಿಸಿಸ್‌ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಡಯಾಲಿಸಿಸ್‌ಗೆ ಒಳಗಾಗುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ತಕ್ಕಂತೆ ಪ್ರತಿಷ್ಠಾನವು ಬಡ ರೋಗಿಗಳಿಗೆ ನೆರವಾಗಲು ಡಯಾಲಿಸಿಸ್‌ ಕೇಂದ್ರವನ್ನು ಆರಂಭಿಸಿರುವುದು ಶ್ಲಾಘನೀಯ. ಆದರೆ, ನಷ್ಟ ಮಾಡಿಕೊಂಡು ನಡೆಸುವ ಬದಲು ಕನಿಷ್ಠ ಶುಲ್ಕವನ್ನು ಪಡೆದರೆ ಕೇಂದ್ರವು ನಿರಂತರವಾಗಿ ನಡೆಯುತ್ತದೆ. ಡಯಾಲಿಸಿಸ್‌ ಕೇಂದ್ರಕ್ಕೆ ಅಗತ್ಯ ನೆರವನ್ನು ನೀಡುವುದಾಗಿ ಸಚಿವ ಕತ್ತಿ ಭರವಸೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಸುಲಫಲಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ‘ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವ ಸಂಖ್ಯೆ ಹೆಚ್ಚಾಗಿದ್ದು, ಡಯಾಲಿಸಿಸ್‌ ಅಗತ್ಯವೂ ಹೆಚ್ಚಿನ ರೋಗಿಗಳಲ್ಲಿ ಕಂಡು ಬರುತ್ತಿದೆ. ದಿ. ಚಂದ್ರಶೇಖರ ಪಾಟೀಲ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಅವರ ಮಕ್ಕಳು ಸಾಗುತ್ತಿರುವುದು ಶ್ಲಾಘನೀಯ. ಪ್ರತಿಷ್ಠಾನಕ್ಕೆ ಮಠದ ವತಿಯಿಂದ ₹ 10 ಸಾವಿರ ಆರಂಭಿಕ ನೆರವು ನೀಡಿದ್ದೇನೆ. ವರ್ಷದೊಳಗಾಗಿ ₹ 1 ಲಕ್ಷ ದೇಣಿಕೆ ಕೊಡುತ್ತೇನೆ’ ಎಂದರು.

ಬಿಜೆಪಿ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಮಾತನಾಡಿ, ‘ಕಲಬುರ್ಗಿ ಜಿಲ್ಲೆಗೆ ಒಬ್ಬ ಸಚಿವರ ಪ್ರಾತಿನಿಧ್ಯ ಅಗತ್ಯವಿದ್ದು, ಇಂದು ಎಂದೋ ಆಗಬೇಕಾಗಿದ್ದ ಕೆಲಸ. ಈಗಲಾದರೂ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ದತ್ತಾತ್ರೇಯ ಪಾಟೀಲ ರೇವೂರ ಅವರನ್ನು ಸಚಿವರನ್ನಾಗಿ ಮಾಡಬೇಕು. ಜಿಲ್ಲಾ ಉಸ್ತುವಾರಿಯನ್ನು ಅವರಿಗೆ ಕೊಡಬೇಕು. ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ನನ್ನ ಹಾಗೂ ಸುನೀಲ ವಲ್ಯಾಪುರೆ ಅವರಂತಹ ಹಿರಿಯರ ಆಶೀರ್ವಾದ ಇದ್ದೇ ಇರುತ್ತದೆ’ ಎಂದರು.

ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ, ಶಾಸಕ ಬಸವರಾಜ ಮತ್ತಿಮಡು, ದ್ವಿದಳ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗರೆಡ್ಡಿ ಬಾಸರೆಡ್ಡಿ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ದಿ.ಚಂದ್ರಶೇಖರ ಪಾಟೀಲ ಅವರ ಪುತ್ರ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಇನ್ನೋರ್ವ ಪುತ್ರ ಡಾ. ಅಲೋಕ್ ಪಾಟೀಲ, ಪುತ್ರಿ ಡಾ. ದಿವ್ಯಾ ಪಾಟೀಲ, ಪ್ರತಿಷ್ಠಾನದ ಅಧ್ಯಕ್ಷ ಅಪ್ಪು ಕಣಕಿ ವೇದಿಕೆಯಲ್ಲಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು