ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಹಣ್ಣುಗಳ ದರದಲ್ಲಿ ಭಾರಿ ಇಳಿಕೆ

ಈ ವಾರವೂ ಕೊಂಚ ದರ ಇಳಿಸಿಕೊಂಡ ಟೊಮೆಟೊ, ಈರುಳ್ಳಿ, ನುಗ್ಗೆಕಾಯಿ
Last Updated 29 ನವೆಂಬರ್ 2020, 2:23 IST
ಅಕ್ಷರ ಗಾತ್ರ

ಕಲಬುರ್ಗಿ: ಹಬ್ಬದ ದಿನಗಳಲ್ಲಿ ಭಾರೀ ಏರಿಕೆ ಕಂಡಿದ್ದ ಹಣ್ಣುಗಳ ದರ ಈ ವಾರ ಇಳಿಕೆ ಕಂಡಿದೆ. ಕಳೆದ ವಾರ ₹180 ಇದ್ದ ಸೇಬು ಕೆ.ಜಿ ದರ ಈ ವಾರ ₹40 ಕಡಿಮೆ ಆಗಿದೆ. ₹300 ಇದ್ದ ದಾಳಿಂಬೆ ₹120 ಕಡಿಮೆ ಆಗಿದೆ. ₹180 ಇದ್ದ ಮೂಸಂಬಿ ದರ ₹60 ಕಡಿಮೆ ಆಗಿದೆ. ಪೇರು, ಸೀತಾಫಲ, ಸಪೋಟ ಹಣ್ಣುಗಳ ದರವೂ ₹20 ಕಡಿಮೆ ಆಗಿದೆ. ಪೈನಾಪಲ್ ಒಂದು ಹಣ್ಣಿಗೆ ₹80 ಇದೆ.‌

ಎರಡು–ಮೂರು ವಾರಗಳಿಂದ ₹80ರಿಂದ ₹100ರ ಅಸುಪಾಸಿನಲ್ಲೇ ಇದ್ದ ತರಕಾರಿಗಳ ದರದಲ್ಲಿ ಈ ವಾರವೂ ಕೊಂಚ ಇಳಿಕೆ ಕಂಡಿದೆ.

ಟೊಮೆಟೊ, ಈರುಳ್ಳಿ, ನುಗ್ಗೆಕಾಯಿ, ಸವತೆಕಾಯಿ ತರಕಾರಿಗಳ ದರ ಕೆ.ಜಿಗೆ ₹10ರಿಂದ ₹20 ಕಡಿಮೆ ಆಗಿದೆ. ಹಬ್ಬದ ದಿನಗಳಲ್ಲಿ ಇವುಗಳ ದರದಲ್ಲಿ ಭಾರಿ ಏರಿಕೆಯಾಗಿದ್ದರಿಂದ ಕಂಗಾಲಾಗಿದ್ದ ಗ್ರಾಹಕರು ಇದೀಗ ಕೊಂಚ ನಿರಾಳ ಆಗಿದ್ದಾರೆ.

ನುಗ್ಗೆಕಾಯಿ, ಬೆಂಡೆಕಾಯಿ ತರಕಾರಿಗಳು ಈ ವಾರ ₹20 ದರ ಏರಿಸಿಕೊಂಡು ಕ್ರಮವಾಗಿ ಕೆ.ಜಿಗೆ ₹120, ₹60 ರಂತೆ ಮಾರಾಟ ಆಗುತ್ತಿವೆ.

ಬೆಳ್ಳುಳ್ಳಿ ಕೆ.ಜಿಗೆ ₹160 ಇದೆ. ₹20ಕ್ಕೆ ಒಂದು ಕುಂಬಳಕಾಯಿ ಮಾರಾಟ ಆಗುತ್ತಿವೆ. ಹುಣಸೆಹಣ್ಣು ಕೆ.ಜಿ ದರ ₹200 ಇದೆ. ನಿಂಬೆಹಣ್ಣುಗಳ ಬೆಲೆ ಭಾರಿ ಇಳಿಕೆ ಕಂಡಿದೆ. ₹10ಕ್ಕೆ 3ರಿಂದ 4 ಮಾರಲಾಗುತ್ತಿದ್ದ ನಿಂಬೆಹಣ್ಣುಗಳನ್ನು ಇದೀಗ 10–12 ಮಾರಲಾಗುತ್ತಿದೆ.

₹60ಕ್ಕೆ 100 ಅಂಬಾಳಿ ಎಲೆಗಳು ಮಾರಾಟ ಆಗುತ್ತಿವೆ. ಶುಂಠಿ ಕೆ.ಜಿ ದರ ₹80 ಇದೆ. ಬೆಳ್ಳುಳ್ಳಿ ಕೆ.ಜಿ ದರ 160 ಇದೆ.

ಹೂವುಗಳ ದರ:

ಕಳೆದ ವಾರ ಒಂದು ಮೊಳಕ್ಕೆ ₹10 ಇದ್ದ ಮಲ್ಲಿಗೆ ಹೂವಿನ ದರ ಈ ವಾರ ₹20 ಆಗಿದೆ. ಸಂಪಿಗೆ ಹಾಗೂ ಗುಲಾಬಿ ಹೂವುಗಳು 50 ಗ್ರಾಂಗೆ ₹20 ರಂತೆ ಮಾರಾಟ ಆಗುತ್ತಿವೆ. ಚಂಡು ಹೂವು ಈ ವಾರ ₹20 ದರ ಏರಿಸಿಕೊಂಡಿದ್ದು, ಕೆ.ಜಿ ದರ ₹80 ಇದೆ. ಸೇವಂತಿಗೆ ಹೂವಿನ ದರ ಕೆ.ಜಿಗೆ ₹380 ಇದೆ.

ಮಾರುಕಟ್ಟೆಯಲ್ಲಿ ಕಾಲಿಡಲಾಗದ ಸ್ಥಿತಿ:

ಶುಕ್ರವಾರ ರಾತ್ರಿ ಸುರಿದ ತುಂತುರು ಮಳೆಗೆ ನಗರದ ಸೂಪರ್ ಮಾರುಕಟ್ಟೆಯಲ್ಲಿ ಕೆಸರುಮಯ ವಾತಾವರಣ ಸೃಷ್ಟಿಯಾಗಿದೆ. ಎಲ್ಲೆಂದರಲ್ಲಿ ಕೆಸರು ತುಂಬಿಕೊಂಡಿದ್ದು ಗ್ರಾಹಕರು ತರಕಾರಿ, ಹೂವು, ಹಣ್ಣು ಖರೀದಿಗೆ ಪರದಾಡುವಂತಾಗಿದೆ. ನಿಲ್ಲಲು ಎಲ್ಲಿಯೂ ಸರಿಯಾದ ಜಾಗ ಇರಲಿಲ್ಲ. ಜನದಟ್ಟಣೆ ಹಾಗೂ ಚಪ್ಪಲಿಗಂಟಿದ ಕೆಸರಿನ ನಡುವೆಯೇ ಗ್ರಾಹಕರು ತರಕಾರಿ ಖರೀದಿಸುತ್ತಿದ್ದರು.

ಸೊಪ್ಪುಗಳ ದರ ₹5:

ಕಳೆದ ವಾರ ಸೊಪ್ಪುಗಳ ದರದಲ್ಲಿ ವ್ಯತ್ಯಾಸ ಇತ್ತು. ಕೆಲವು ಸೊಪ್ಪುಗಳ ದರ ದುಬಾರಿ ಆಗಿದ್ದರೆ, ಇನ್ನೂ ಕೆಲವು ಸೊಪ್ಪುಗಳ ದರ ಕಡಿಮೆ ಇತ್ತು. ಆದರೆ, ಈ ವಾರ ಮಾರುಕಟ್ಟೆಯಲ್ಲಿ ಬಹುತೇಕ ಎಲ್ಲಾ ಸೊಪ್ಪುಗಳ ದರವೂ ಸಮವಾಗಿದೆ. ಕೊತ್ತಂಬರಿ, ಪಾಲಕ್, ಪುಂಡಿಪಲ್ಯ, ಸಬ್ಬಸಗಿ, ಹುಣಸಿನಕಾಯಿ ಪಲ್ಯ, ಪುದೀನಾ, ರಾಜಗಿರಿ ಸೊಪ್ಪುಗಳ ದರ ಸಿವುಡಿಗೆ ₹5 ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT