ಭಾನುವಾರ, ಏಪ್ರಿಲ್ 11, 2021
33 °C
ಎರಡು ದಿನಗಳ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ, ಇಂದು ಸಾಂಸ್ಕೃತಿಕ ಸ್ಪರ್ಧೆಗಳ ರಂಗು

ಆಟವಾಡಿ ನಲಿದ ರಾಜ್ಯ ಸರ್ಕಾರಿ ನೌಕರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪ್ರತಿ ದಿನವೂ ಕಚೇರಿ, ಕೆಲಸ, ಫೈಲುಗಳ ಮಧ್ಯೆಯೇ ಕಾಲ ಕಳೆಯುತ್ತಿದ್ದ ರಾಜ್ಯ ಸರ್ಕಾರಿ ನೌಕರರು ಶುಕ್ರವಾರ ಮನಸ್ಸು ಓಡಾಡಿದರು. ತಮಗೆ ಇಷ್ಟವಾದ ಕ್ರೀಡೆಯಲ್ಲಿ ಪಾಲ್ಗೊಂಡು ಕಸರತ್ತು ಪ್ರದರ್ಶನ ಮಾಡಿದರು. ಇಲ್ಲಿ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಸರ್ಕಾರಿ ನೌಕರದ್ದೇ ಕಾರುಬಾರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ಸರ್ಕಾರಿ ನೌಕರರ ಎರಡು ದಿನಗಳ ಕ್ರೀಡಾಕೂಟ ಗಮನ ಸೆಳೆಯಿತು. ದಿನವೂ ನೌಕರಿ, ಚಾಕರಿ ಮಧ್ಯೆ ಕಳೆಯುತ್ತಿದ್ದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳೆಲ್ಲ ಇಡೀ ದಿನ ಆಟವಾಡಿ ಉಲ್ಲಸಿತರಾದರು. ಮತ್ತೆ ಹಲವು ನೌಕರರು ಹಾಗೂ ಅವರ ಕುಟುಂಬದವರು ಮೈದಾನದ ಸುತ್ತ ಸೇರಿ ಆಟಗಳನ್ನು ನೋಡಿ ನಲಿದರು.

ತಮ್ಮ ಸ್ನೇಹಿತರು, ಸಹೋದ್ಯೋಗಗಳು, ಕುಟುಂಬದ ಸದಸ್ಯರು ಜಿದ್ದಿಗೆ ಬಿದ್ದು ಆಟವಾಡುವಾಗ ಸಿಳ್ಳೆ, ಚಪ್ಪಾಳೆ ತಟ್ಟಿ ಹುರಿದುಂಬಿಸಿದರು. ಕಿರಿಯ ಅಧಿಕಾರಿಗಳು ಬಹುಮಾನ ಗೆದ್ದುಕೊಂಡಾಗ ಸ್ಥಳದಲ್ಲೇ ಇದ್ದ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಬೆನ್ನುತಟ್ಟಿ ಪ್ರೋತ್ಸಾಹಿಸಿದರು.

ಇದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಲಾಜಿ, ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಶ್‌ ಸಾಸಿ, ಮಹಾನಗರ ಪಾಲಿಕೆಯ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಅವರು ಒಬ್ಬರಾದ ಮೇಲೆ ಒಬ್ಬರು ಗುಂಡು ಎಸೆಯುವ ಮೂಲಕ ಕ್ರೀಡಾಪಟುಗಳಲ್ಲಿ ಹುಮ್ಮಸ್ಸು ತುಂಬಿದರು.

ಫುಟ್‍ಬಾಲ್, ವಾಲಿಬಾಲ್, ಬಾಸ್ಕೆಟ್‍ಬಾಲ್, ಬ್ಯಾಡ್ಮಿಂಟನ್, ಕಬಡ್ಡಿ, ಹಾಕಿ, ಕೇರಂ, ಕ್ರಿಕೆಟ್, ಟೇಬಲ್ ಟೆನಿಸ್, ಲಾನ್ ಟೆನಿಸ್, ಥ್ರೋಬಾಲ್, ಟೆನಿಕ್ವಾಟ್, ಭಾರ ಎತ್ತುವುದು, ಪವರ್ ಲಿಫ್ಟಿಂಗ್, ದೇಹದಾರ್ಢ್ಯ, ಚೆಸ್ ಮತ್ತು ಕುಸ್ತಿ ಸ್ಪರ್ಧೆಗಳು ಮೊದಲ ದಿನ ಜರುಗಿದವು.

ಉದ್ಘಾಟನೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಅವರು ಕೇಸರಿ, ಬಿಳಿ, ಹಸಿರು ಬಣ್ಣದ ಬಲೂನುಗಳನ್ನು ಹಾರಿಬಿಡುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಶೋಭಾ ಸಿರಸಗಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ್ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರರಾವ್‌ ನಾಯಕ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ವೇದಿಕೆ ಮೇಲಿದ್ದರು.

ಕಲಬುರ್ಗಿ ದಕ್ಷಿಣ ಕ್ಷೇತ್ರಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಜಿಲ್ಲಾ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಅಬ್ದುಲ್ ಅಜೀಂ, ರಾಜ್ಯ ಪರಿಷತ್ ಸದಸ್ಯ ಹಣಮಂತರಾಯ ಗೊಳಸಾರ, ಖಜಾಂಚಿ ಸತೀಷ ಕೆ. ಸಜ್ಜನ್, ಅಣ್ಣಾರಾವ್‌ ಹಾಬಾಳಕರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗಯ್ಯ ಮಠಪತಿ, ಕ್ರೀಡಾ ಕಾರ್ಯದರ್ಶಿ ಮೊಹಮ್ಮದ ಜಮೀಲ್, ಪ್ರಚಾರ ಸಮಿತಿ ಕಾರ್ಯದರ್ಶಿ ರವಿ ಮಿರಸ್ಕರ್, ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ಶಿವಶಂಕರಯ್ಯ ಮಠಪತಿ, ರಾಜು ಗುಣಾರಿ, ಬಸವರಾಜ ಬಳೂಂಡಗಿ, ದೇವಿಂದ್ರಪ್ಪ ಹೋಳ್ಕರ್, ಡಿ.ಬಿ.ಪಾಟೀಲ, ಸಿದ್ಧರಾಮ ಪಾಟೀಲ, ಈರಣ್ಣಾ ಕೆಂಭಾವಿ, ಶರಣಗೌಡ ಪಾಟೀಲ, ಬಲವಂತರಾಯ ಪಾಟೀಲ ಪಾಲ್ಗೊಂಡರು.

ಸಂಗೀತ ಮತ್ತು ನೃತ್ಯ ಸ್ಫರ್ಧೆ: ಶನಿವಾರ (ಫೆ. 20) ಇಡೀ ದಿನ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳು ಜರುಗಲಿವೆ. ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ, ಲಘು ಶಾಸ್ತ್ರೀಯ ಸಂಗೀತ, ಕರ್ನಾಟಕ ಶಾಸ್ತ್ರೀಯ ಸಂಗೀತ, ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ, ಜಾನಪದ ಗೀತೆ (ವೈಯಕ್ತಿಕ ಮತ್ತು ತಂಡ), ಕಥಕ್, ಮಣಿಪುರಿ, ಓಡಿಸ್ಸಿ, ಕುಚುಪುಡಿ, ಕಥಕ್ಕಳಿ, ಭರತನಾಟ್ಯ, ಸ್ಪ್ರಿಂಗ್ ವಾದ್ಯ, ವಿಂಡ್ ವಾದ್ಯ, ಕರಕುಶಲ ವಸ್ತು ಪ್ರದರ್ಶನ ಹಾಗೂ ಕಿರುನಾಟಕ ಸ್ಪರ್ಧೆಗಳು ನಡೆಯಲಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು