ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಕಾಲೇಜಿನಲ್ಲಿ ಪ್ರವೇಶಕ್ಕೆ ಪೈಪೋಟಿ: ಶಾಸಕರ ಶಿಫಾರಸು

ಪ್ರವೇಶಾತಿಗೆ ಶಾಸಕರ ಶಿಫಾರಸು
Last Updated 26 ಸೆಪ್ಟೆಂಬರ್ 2021, 4:05 IST
ಅಕ್ಷರ ಗಾತ್ರ

ಕಲಬುರ್ಗಿ: ನಗರದ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನಲ್ಲಿ ಪ್ರವೇಶಕ್ಕೆ ನೂಕುನುಗ್ಗಲು ಕಂಡುಬಂದಿದ್ದು, ಪ್ರವೇಶ ಸಿಗದ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಶಾಸಕರಿಂದ ಶಿಫಾರಸು ತರುತ್ತಿದ್ದಾರೆ. ಇದು ಕಾಲೇಜಿನ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿದೆ.

ಎಸ್‌ಪಿ ಕಚೇರಿ ಬಳಿಯ ಬಾಲಕಿಯರ ಪಿಯು ಕಾಲೇಜಿನಲ್ಲಿ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ಪ್ರವೇಶಾತಿ ಆಗುತ್ತಿದೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಜಿಲ್ಲೆಯ ಎಲ್ಲ ವಿದ್ಯಾರ್ಥಿಗಳು ತೇರ್ಗಡೆ ಆಗಿದ್ದಾರೆ. ಅಷ್ಟೂ ಮಕ್ಕಳಿಗೆ ಕಾಲೇಜುಗಳಲ್ಲಿ ಪ್ರವೇಶ ನೀಡುವುದು ದೊಡ್ಡ ಸವಾಲಾಗಿದೆ. ಗ್ರಾಮೀಣ ಭಾಗದ ಬಹುತೇಕ ವಿದ್ಯಾರ್ಥಿಗಳು ಹತ್ತಿರದ ಸರ್ಕಾರಿ ಕಾಲೇಜುಗಳನ್ನು ಬಿಟ್ಟು, ನಗರದ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

‘ನಮ್ಮ ನಿರೀಕ್ಷೆಗೂ ಮೀರಿ ಮಕ್ಕಳು ಬರುತ್ತಿದ್ದು, ಎಲ್ಲರಿಗೂ ಪ್ರವೇಶಾತಿ ನೀಡುವುದು ಕಷ್ಟವಾಗುತ್ತಿದೆ. ತರಗತಿ ಸಾಮರ್ಥ್ಯ, ಮೂಲಸೌಕರ್ಯ, ಉಪನ್ಯಾಸಕರ ಸಂಖ್ಯೆ, ಪ್ರಯೋಗಾಲಯದಂತಹ ಇತರ ಸಂಗತಿಗಳನ್ನು ಗಮನಿಸಿದರೆ ಎಲ್ಲರನ್ನೂ ದಾಖಲಿಸಿಕೊಂಡು ಬೋಧಿಸುವುದು ದುಸ್ತರವಾಗಲಿದೆ’ ಎನ್ನುತ್ತಾರೆ ಪ್ರಾಂಶುಪಾಲ
ದೇವನಗೌಡ ಪಾಟೀಲ.

‘ಪ್ರಥಮ ಮತ್ತು ದ್ವಿತೀಯ ವರ್ಷ ಸೇರಿ ಒಟ್ಟು 2,261 ವಿದ್ಯಾರ್ಥಿಗಳು ಇದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ ಸೀಟ್‌ ಇಲ್ಲ ಎಂದರೂ ಪಾಲಿಕೆ ಸದಸ್ಯರ, ಶಾಸಕರ, ಸಂಘ–ಸಂಸ್ಥೆಗಳ ಮುಖಂಡರ ಶಿಫಾರಸು ಹೊತ್ತು ಪೋಷಕರು ಬರುತ್ತಿದ್ದಾರೆ.
ಈಗ ಇರುವ ಮಕ್ಕಳಿಗೆ ‘ಎಫ್‌’ವರೆಗೂ ಸೆಕ್ಷನ್‌ಗಳನ್ನು ಮಾಡಿ ತರಗತಿ ನಡೆಸುವುದು ಸವಾಲಿನದ್ದಾಗಿದೆ. ಒಟ್ಟು 48 ಬೋಧಕ ಸಿಬ್ಬಂದಿ ಪೈಕಿ 40 ಉಪನ್ಯಾಸಕರು ಮಾತ್ರ ಇದ್ದಾರೆ. ಪಾಠಗಳಿಗೆ ಹಿನ್ನಡೆ ಆಗದಿರಲಿ ಎಂದು ತಲಾ ನಾಲ್ಕು ಎರವಲು ಮತ್ತು ಅತಿಥಿ ಉ‍ನ್ಯಾಸಕರನ್ನು ನೇಮಿಸಿಕೊಂಡಿದ್ದೇವೆ. ನಗರದಲ್ಲಿ 8 ಪಿಯು ಕಾಲೇಜುಗಳಿವೆ. ಅವುಗಳನ್ನು ಬಿಟ್ಟು ಇಂತಹುದೇ ಕಾಲೇಜಿನಲ್ಲಿ ಪ್ರವೇಶಬೇಕು ಎಂದರೆ ನಮಗೂ
ಕಷ್ಟವಾಗುತ್ತದೆ’ ಎಂದರು.

‘ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. ಅಲ್ಲಿ ಉಪನ್ಯಾಸಕರಿಲ್ಲ, ಪ್ರಯೋಗಾಲಯವೂ ಇರಲ್ಲ. ಒಬ್ಬರೇ ಉಪನ್ಯಾಸಕರು ಎರಡು–ಮೂರು ವಿಷಯಗಳನ್ನು ಬೋಧಿಸುತ್ತಾರೆ. ವಸ್ತುಸ್ಥಿತಿ ಹೀಗಿರುವಾಗ ಮಕ್ಕಳನ್ನು ಹೇಗೆ ಅಂತಹ ಕಾಲೇಜಿಗೆ ಕಳುಹಿಸಬೇಕು’ ಎನ್ನುತ್ತಾರೆ ವಿದ್ಯಾರ್ಥಿನಿ ಪೋಷಕ ಸೂರ್ಯಕಾಂತ ಚಿಂಚನಸೂರ.

‘ಗ್ರಾಮೀಣ ಭಾಗದ ಮಕ್ಕಳನ್ನು ಸೇರ್ಪಡೆ ಮಾಡಿಕೊಳ್ಳಬೇಡಿ ಎಂದು ಅಲ್ಲಿನ ಕಾಲೇಜುಗಳ ಪ್ರಾಂಶುಪಾಲರು ನಮಗೆ ಕರೆ ಮಾಡಿ ಹೇಳುತ್ತಾರೆ. ಪ್ರವೇಶಾತಿ ನೀಡುವುದಿಲ್ಲ ಎಂದರೂ ಪೋಷಕರು ಕೇಳುವುದಿಲ್ಲ. ಮೇಲಧಿಕಾರಿಗಳು ಯಾವುದೇ ವಿದ್ಯಾರ್ಥಿ ಪ್ರವೇಶದಿಂದ ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಆದೇಶ ನೀಡುತ್ತಾರೆ. ಈಗಾಗಲೇ ಸಾಮರ್ಥ್ಯಕ್ಕೂ ಮೀರಿ ಪ್ರವೇಶಾತಿ ನೀಡಿದ್ದೇವೆ’ ಎನ್ನುತ್ತಾರೆ ಪ್ರಾಂಶುಪಾಲರು.

ಗ್ರಾಮೀಣ ಮಕ್ಕಳ ನೆಚ್ಚಿನ ಕಾಲೇಜು: ಈ ಕಾಲೇಜು ನಗರದ ಮಧ್ಯ ಭಾಗದಲ್ಲಿದ್ದು, ಬಹುತೇಕ ಸಿಟಿ ಬಸ್‌ಗಳು ಸಾರ್ವಜನಿಕ ಉದ್ಯಾನದ ಮೂಲಕ ಹಾದು ಹೋಗುತ್ತವೆ. ಜತೆಗೆ ಶೇ 80ರಷ್ಟು ಬೋಧಕ ಸಿಬ್ಬಂದಿ ಸಹ ಹೊಂದಿದೆ. ಇರುವ ಎಂಟು ಸರ್ಕಾರಿ ಪಿಯು ಕಾಲೇಜುಗಳ ಪೈಕಿ ಪೋಷಕರು ತಮ್ಮ ಮಕ್ಕಳನ್ನು ಇದೇ ಕಾಲೇಜಿಗೆ ಸೇರಿಸಲು
ಮುಂದಾಗುತ್ತಿದ್ದಾರೆ.

ನೆಲದ ಮೇಲೆ ಕುಳಿತು ಊಟ

‘ಕಾಲೇಜಿನಲ್ಲಿ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಈಗಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನೆರಡು ಘಟಕ ಒದಗಿಸುವಂತೆ ಕೋರಲಾಗಿದೆ. ಕಟ್ಟಡ ನಿರ್ಮಾಣವಾಗಿ 2 ದಶಕ ಕಳೆದಿದ್ದು, ಮೇಲ್ಛಾವಣಿ ದುರಸ್ತಿ ಮಾಡಿ ಕಟ್ಟಡಕ್ಕೆ ಬಣ್ಣ ಹಚ್ಚಬೇಕಿದೆ. ವಿದ್ಯಾರ್ಥಿಗಳು ಕುಳಿತುಕೊಳ್ಳಲು ಕಾಲೇಜು ಆವರಣದಲ್ಲಿ ಬೆಂಚ್‌ಗಳ ವ್ಯವಸ್ಥೆ ಇಲ್ಲ. ಅವರು ನಿತ್ಯ ನೆಲದ ಮೇಲೆ ಕುಳಿತು ಊಟ ಮಾಡಬೇಕಾದ ಅನಿವಾರ್ಯತೆ ಇದೆ. ಮಳೆ ಬಂದು ನೀರು ನಿಂತರೆ ನಿಂತುಕೊಂಡು ಊಟ ಮಾಡಬೇಕಾಗುತ್ತದೆ. ಜತೆಗೆ ಕ್ರೀಡಾಂಗಣವೂ ಇಲ್ಲ. ಬೋಧಕೇತರ ಸಿಬಂದಿ ನೇಮಿಸುವಂತೆ ಸಂಬಂಧಿಸಿದವರನ್ನು ಕೋರಿದ್ದೇವೆ’ ಎನ್ನುತ್ತಾರೆ ಪ್ರಾಂಶುಪಾಲ ದೇವನಗೌಡ ಪಾಟೀಲ.‌

*ಕಾಲೇಜಿಗೆ ಅಗತ್ಯವಾದಷ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಮೂಲಸೌಕರ್ಯಗಳನ್ನು ಕಲ್ಪಿಸಿಕೊಟ್ಟರೇ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶಾತಿ ನೀಡಬಹುದು

-ದೇವನಗೌಡ ಪಾಟೀಲ, ಪ್ರಾಂಶುಪಾಲ

*ಗ್ರಾಮೀಣ ಭಾಗದ ಕಾಲೇಜುಗಳು ಉಪನ್ಯಾಸಕರಿಗಿಂತ ಸೌಕರ್ಯಗಳ ಕೊರತೆಯಿಂದಲೇ ತುಂಬಿವೆ. ಅಂತಹ ಕಾಲೇಜಿಗೆ ಸೇರಿಸಿದರೆ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವುದಿಲ್ಲ

-ಸೂರ್ಯಕಾಂತ ಚಿಂಚನಸೂರ, ವಿದ್ಯಾರ್ಥಿನಿ ಪೋಷಕ

*ಕೋವಿಡ್ ನಿಯಮ ಪಾಲಿಸಿ ತರಗತಿಗೆ ಹಾಜರಾಗುತ್ತಿದ್ದೇವೆ. ಸದ್ಯ ಯಾವುದೇ ಉಪನ್ಯಾಸಕರ ಕೊರತೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ, ಕ್ರೀಡಾಂಗಣದ ವ್ಯವಸ್ಥೆ ಕಲ್ಪಿಸಿದರೆ ಉತ್ತಮ

-ಅಂಬಿಕಾ, ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ

ಕಾಲೇಜಿನ ವಿದ್ಯಾರ್ಥಿನಿಯರ ಸಂಖ್ಯೆ (ಸೆ.25ರ ತನಕ)
ವರ್ಷ;ಪ್ರಥಮ;ದ್ವಿತೀಯ;ಒಟ್ಟು
ಕಲಾ;734;368;1,102
ವಿಜ್ಞಾನ;328;284;612
ವಾಣಿಜ್ಯ;330;217;547
ಒಟ್ಟು;1,392:869;2,261

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT