ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಲಸಿಕೆ; ಇನ್ನಷ್ಟು ಜಾಗೃತಿ ಅಗತ್ಯ

ಡಾ.ಮಾಲಕರಡ್ಡಿ ಹೋಮಿಯೋಪಥಿಕ್ ಕಾಲೇಜಿನ ಪದವಿ ಪ್ರದಾನ ಸಮಾರಂಭ ಪ್ರೊ.ಚಂದ್ರಕಾಂತ ಯಾತನೂರ ಸಲಹೆ
Last Updated 24 ಜನವರಿ 2021, 5:00 IST
ಅಕ್ಷರ ಗಾತ್ರ

ಕಲಬುರ್ಗಿ: ‘ಕೋವಿಡ್ ನಿಯಂತ್ರಣಕ್ಕಾಗಿ ದೇಶಿ ಲಸಿಕೆ ಸಂಶೋಧನೆ ಮಾಡಲಾಗಿದೆ. ಆದರೂ ಜನರಲ್ಲಿ ಇದರ ಬಗೆಗಿನ ಸಂಶಯ ಸಂಪೂರ್ಣ ದೂರಾಗಿಲ್ಲ. ವೈದ್ಯರಾದವರು ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಲಸಿಕೆಗಳ ಮಹತ್ವವನ್ನು ಅರ್ಥ ಮಾಡಿಸಬೇಕು. ಆಗಲೇ ದೇಶಿ ಔಷಧಿ ಕೂಡ ಹೆಚ್ಚು ಪರಿಣಾಮಕಾರಿ ಎಂಬುದು ಅವರಿಗೆ ಅರ್ಥವಾಗುತ್ತದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಕಾಂತ ಯಾತನೂರ ಸಲಹೆ ನೀಡಿದರು.

ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಆವರಣದಲ್ಲಿರುವ ಎಚ್‍ಕೆಇ ಸ್ಯಾಕ್ ಸಭಾಂಗಣದಲ್ಲಿ ಶನಿವಾರ ನಡೆದ ಎಚ್‍ಕೆಇ ಸಂಸ್ಥೆಯ ಡಾ.ಮಾಲಕರಡ್ಡಿ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೊರೊನಾ ವೈರಾಣು ಉಪಟಳದ ಹೊತ್ತಿನಲ್ಲಿ ವೈದ್ಯರ ಮೇಲಿನ ಜವಾಬ್ದಾರಿ ಇನ್ನಷ್ಟು ಹೆಚ್ಚಿದೆ. ಕೋವಿಡ್ ಸೋಂಕಿನ ಹಾವಳಿಯಿಂದ ವಿಶ್ವವೇ ತಲ್ಲಣಿಸಿತ್ತು. ಈಗ ದೇಶಿ ನಿರ್ಮಿತ ಲಸಿಕೆ ಬಂದರೂ ಪಡೆಯುವವರು ಕಡಿಮೆಯಾಗಿದ್ದಾರೆ. ಅಪನಂಬಿಕೆ ಹೋಗಲಾಡಿಸಲು ಜಾಗೃತಿ ಮೂಡಿಸುವ ಕೆಲಸವನ್ನು ವೈದ್ಯರು ಕಾಳಜಿಯಿಂದ ಮಾಡಬೇಕು’ ಎಂದರು.

‘ಹೋಮಿಯೊಪಥಿ ಪದ್ಧತಿಯ ಉಪಚಾರ ಕೂಡ ಈಗ ಹೆಚ್ಚು ಪರಿಣಾಮಕಾರಿ ಆಗುತ್ತಿದೆ. ಹಳ್ಳಿಯ ಜನರಿಗೆ ಉತ್ತಮ ಸೇವೆ ನೀಡಲು ಮುಂದಾಗಬೇಕು. ವೈದ್ಯ ವೃತ್ತಿ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವುದು ಮಹತ್ವದ ಸೇವೆ. ಹೀಗಾಗಿ, ಅದನ್ನು ಎಂದಿಗೂ ವ್ಯಾಪಾರೀಕರಣ ಮಾಡಬಾರದು. ಸೇವಾ ಮನೋಭಾವದಿಂದ ರೋಗಿಗಳಿಗೆ ಚಿಕಿತ್ಸೆ ನೀಡಬೇಕು’ ಎಂದು ಅವರು ಯುವ ವೈದ್ಯರಿಗೆ ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದ ಜಿಮ್ಸ್ ನಿರ್ದೇಶಕಿ ಡಾ.ಕವಿತಾ ಪಾಟೀಲ, ‘ವೈದ್ಯರ ಮೇಲೆ ಜನರು ಅಪಾರ ನಂಬಿಕೆ ಇಟ್ಟಿರುತ್ತಾರೆ. ಹೀಗಾಗಿ ಅವರ ನಿರೀಕ್ಷೆಯಂತೆ ಸೇವೆಯನ್ನು ನೀಡುವ ಮೂಲಕ ಮಾದರಿ ವೈದ್ಯರಾಗಿ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಎ. ರುದ್ರವಾಡಿ, ‘ಮಲಕರಡ್ಡಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜಿನ ವತಿಯಿಂದ ಕೊರೊನಾ ನಿಯಂತ್ರಣಕ್ಕೆ ಸಕ್ರಿಯ ಪಾತ್ರ ವಹಿಸಿದ್ದೇವೆ. ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಜಿಲ್ಲೆಯ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರಿಗೆ ನಮ್ಮ ಆಸ್ಪತ್ರೆಯ ರೋಗ ನಿರೋಧಕ ಶಕ್ತಿ ವೃದ್ಧಿಸುವ ಮಾತ್ರೆಗಳನ್ನು ಉಚಿತವಾಗಿ ನೀಡಿದ್ದೇವೆ. ಇದು ಹೆಮ್ಮೆ ಪಡುವ ಸಂಗತಿ’ ಎಂದರು.

ಕಾಲೇಜಿನ ಪ್ರಾಚಾರ್ಯರಾದ ಡಾ.ಪಿ.ಸಂಪತ್‍ರಾವ್, ಉಪ ಪ್ರಾಚಾರ್ಯರಾದ ಡಾ.ವಿಜಯಲಕ್ಷ್ಮಿ, ಉಪವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಪಾಟೀಲ ವೇದಿಕೆ ಮೇಲಿದ್ದರು.

ಹೊಮೀಯೋಪಥಿಕ್ ಪದವಿ ಪೂರ್ಣಗೊಳಿಸಿದ 70 ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ 15 ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಬೋಧಿಸಿ, ಪದವಿ ಪ್ರದಾನ ಮಾಡಲಾಯಿತು. ಇದಕ್ಕೂ ಮುನ್ನ ಘಟಿಕೋತ್ಸವ ಮೆರವಣಿಗೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT