ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ನೌಕರರಿಗೆ ವಿಮೆ, ಭದ್ರತೆ ಒದಗಿಸಲು ಹೆಚ್ಚಾದ ಕೂಗು

ಗ್ರಾ.ಪಂ ನೌಕರರನ್ನು ವಾರಿಯರ್ಸ್‌ ಎಂದು ಪರಿಗಣಿಸದ ಸರ್ಕಾರ
Last Updated 27 ಜುಲೈ 2020, 4:53 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಕಟ್ಟಿಹಾಕುವ ಕಾರ್ಯದಲ್ಲಿ ತೊಡಗಿರುವ ಗ್ರಾಮ ಪಂಚಾಯಿತಿ ಮಟ್ಟದ ಸಿಬ್ಬಂದಿಯನ್ನು ಸರ್ಕಾರ ಇನ್ನೂ ಕೊರೊನಾ ಸೇನಾನಿ ಎಂದು ಪರಿಗಣಿಸಿಲ್ಲ. ಒಂದೆಡೆ ಸಂಬಳಕ್ಕಾಗಿ ಪರಿತಪಿಸುತ್ತಿರುವ ಈ ನೌಕರರು, ಮತ್ತೊಂದೆಡೆ ಭದ್ರತೆಗೂ ಪರದಾಡಬೇಕಿದೆ.‌

ಪಂಚಾಯಿತಿ ಮಟ್ಟದಲ್ಲಿ ಕ್ವಾರಂಟೈನ್‌ ಕೇಂದ್ರಗಳ ಸ್ವಚ್ಛತೆ, ಊಟ ರವಾನೆ, ನೀರು ಸರಬರಾಜು ಸೇರಿದಂತೆ ಎಲ್ಲ ಕೆಲಸ ಈ ಸಿಬ್ಬಂದಿಯೇ ಮಾಡಬೇಕು. ಯಾರಿಗಾದರೂ ಪಾಸಿಟಿವ್‌ ಬಂದರೆ ಮನೆ, ಬೀದಿಯ ಸ್ಯಾನಿಟೈಸೇಷನ್‌, ಬ್ಲೀಚಿಂಗ್‌ ‍ಪೌಡರ್‌ನಿಂದ ಸ್ವಚ್ಛತೆ ಮಾಡುವುದು ಇವರೇ. ಅಷ್ಟೇ ಅಲ್ಲ, ಹಳ್ಳಿಯಲ್ಲಿ ಡೆಂಗಿ, ಚಿಕೂನ್‌ ಗುನ್ಯಾ, ಮಲೇರಿಯಾ ಸೇರಿದಂತೆ ಯಾವುದೇ ಸೋಂಕು ವ್ಯಾಪಿಸಿದರೂ ಮೊದಲು ಹೋರಾಟಕ್ಕೆ ನಿಲ್ಲುವುದು ಈ ಕೆಲಸಗಾರರೇ.

ಕೋವಿಡ್‌ ಉಪಟಳದ ಸಂದರ್ಭದಲ್ಲೂ ಬಿಲ್‌ ಸಂಗ್ರಹ, ತೆರಿಗೆ ಸಂಗ್ರಹ, ನೀರು ಸರಬರಾಜು, ವಿದ್ಯುತ್‌ ಸಮಸ್ಯೆ ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಮನೆಮನೆಗೆ ಭೇಟಿ ನೀಡುವುದು ಅನಿವಾರ್ಯ. ನದಿ ತೀರದ ಗ್ರಾಮಗಳಲ್ಲಿ ಜನ ಹಾಗೂ ಜಾನುವಾರು ನದಿ ದಡಕ್ಕೆ ಹೋಗದಂತೆ ಕಾಯುವುದೂ ಇವರೇ. ಇಷ್ಟೆಲ್ಲ ಜವಾಬ್ದಾರಿ ನಿರ್ವಹಿಸಿದರೂ ನಮ್ಮನ್ನೇಕೆ ವಾರಿಯರ್ಸ್‌ ಎಂದು ಪರಿಗಣಿಸಿಲ್ಲ ಎಂಬ ಪ್ರಶ್ನೆ ಕಾರ್ಮಿಕರನ್ನು ಕಾಡುತ್ತಿದೆ.

ನಾಲ್ಕು ತಿಂಗಳ ಸಂಬಳ ಇಲ್ಲ: ‘ರಾಜ್ಯ ಸರ್ಕಾರ ಪ್ರತಿ ವರ್ಷ 8 ತಿಂಗಳ ಸಂಬಳ ನೀಡಿ, ಉಳಿದ 4 ತಿಂಗಳು ಪುಕ್ಕಟೆ ದುಡಿಸಿಕೊಳ್ಳುತ್ತದೆ. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ, 14ನೇ ಹಣಕಾಸು ಯೋಜನೆಯಡಿ ನಮಗೆ ಇನ್ನೂ 2 ತಿಂಗಳ ಸಂಬಳ ನೀಡಬೇಕು. ಇದಕ್ಕಾಗಿ ಹಣ ಮೀಸಲಿಡಬೇಕು ಎಂಬ ನಿರ್ಣಯ ಆಗಿತ್ತು. ಆದರೆ, ಸರ್ಕಾರ ಬದಲಾದ ಕಾರಣ ಅದು ಜಾರಿಗೆ ಬರಲಿಲ್ಲ. ಈಗ 15ನೇ ಹಣಕಾಸು ಯೋಜನೆಯಡಿ ಪಂಚಾಯಿತಿ ಕೆಲಸಗಾರರ ಸಂಬಳಕ್ಕೆ ಬಜೆಟ್‌ನಲ್ಲಿ ಅನುದಾನ ಮೀಸಲಿಡುತ್ತೇವೆ ಎಂದು ಸರ್ಕಾರ ಹೇಳಿದೆ. ಎರಡು ಬಜೆಟ್‌ ಮುಗಿದರೂ ಸ್ಪಂದಿಸಿಲ್ಲ’ ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ನೋವು ತೋಡಿಕೊಳ್ಳುತ್ತಾರೆ.

‘2018ರಲ್ಲಿ ಪಂಚಾಯಿತಿ ನೌಕರರ ಸಂಬಳಕ್ಕೆ ವಾರ್ಷಿಕ ₹ 980 ಕೋಟಿ ಅನುದಾನ ಬೇಕು ಎಂದು ಲೆಕ್ಕ ನೀಡಲಾಗಿತ್ತು. ಆದರೆ, ರಾಜ್ಯ ಸರ್ಕಾರ ₹ 518 ಕೋಟಿ ಮಾತ್ರ ನೀಡಿತು. ಇನ್ನೂ ₹ 382 ಕೊಟಿ ಮರೆತೇ ಹೋಯಿತು. ಇದರಿಂದ ವರ್ಷ ಪೂರ್ತಿ ಸಂಬಳ ಸಿಗುತ್ತಿಲ್ಲ’ ಎಂದು ಅವರು ಹೇಳುತ್ತಾರೆ.

ಪಂಚಾಯಿತಿಯಲ್ಲಿ ಬಿಲ್‌ ಕಲೆಕ್ಟರ್‌, ಕಂಪ್ಯೂಟರ್‌ ಆಪರೇಟರ್‌, ನೀರನ ಪಂಪ್‌ ಆಪರೇಟರ್, ಪಂಚಾಯಿತಿ ಜವಾನ, ಸ್ವಚ್ಛತಾ ಸಿಬ್ಬಂದಿ, ಕಸ ಗುಡಿಸುವವರು ಇದ್ದಾರೆ. ಇವರಾರನ್ನೂ ಈವರೆಗೆ ನೌಕರರು ಎಂದು ಪರಿಗಣಿಸಿಲ್ಲ. ಕಾರ್ಮಿಕರಾಗಿಯೇ ಕನಿಷ್ಠ ಸಂಬಳಕ್ಕೆ ಹೋರಾಡುವುದು ಅನಿವಾರ್ಯವಾಗಿದೆ.

15 ವರ್ಷಗಳಿಂದ ಬಡ್ತಿಯೂ ಇಲ್ಲ: ಬಿಲ್‌ ಕಲೆಕ್ಟರ್‌‌ನಿಂದ ಪಂಚಾಯಿತಿ ಗ್ರೇಡ್‌–2 ಕಾರ್ಯದರ್ಶಿ ಹಾಗೂ ಲೆಕ್ಕಸಹಾಯಕ ಹುದ್ದೆಗೆ ಬಡ್ತಿ ನೀಡಬೇಕು ಎಂಬ ನಿಯಮ ಇದ್ದರೂ ಜಾರಿ ಮಾಡಿಲ್ಲ. ನಾವು ಸತ್ತರೆ ಅನುಕಂಪದ ಆಧಾರದ ಮೇಲೆ ಕುಟುಂಬದವರಿಗೆ ಕೆಲಸ ಕೊಡುತ್ತಾರೆ ಎಂಬುದನ್ನು ಬಿಟ್ಟರೆ ಬೇರೇನೂ ಭದ್ರತೆ ಇಲ್ಲ ಎನ್ನುವುದು ಅವರ ಅಳಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT