ಗುರುವಾರ , ಮೇ 26, 2022
25 °C

ಗುಲಬರ್ಗಾ ವಿ.ವಿಯಿಂದ ಬೌದ್ಧ ಸಾಹಿತ್ಯ ಸಂಪುಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕಲಬುರ್ಗಿ: ಇಲ್ಲಿಯ ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯು ಕನ್ನಡ ಬೌದ್ಧ ಸಾಹಿತ್ಯದ ಆರು ಸಂಪುಟಗಳನ್ನು ಪ್ರಕಟಿಸಲು ಮುಂದಾಗಿದೆ.

ಸಂಶೋಧನೆ, ಕಾವ್ಯ, ಕಥೆ, ನಾಟಕ, ವಿಚಾರ ಮತ್ತು ವಿಮರ್ಶೆ ವಿಷಯಗಳನ್ನು ಈ ಸಂಪುಟಗಳು ಒಳಗೊಳ್ಳಲಿವೆ.

ಇದಕ್ಕಾಗಿ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಬೆಂಗಳೂರಿನ ಸಾಹಿತಿ ಡಾ.ಮುಡ್ನಾಕೂಡು ಚಿನ್ನಸ್ವಾಮಿ, ಡಾ.ಎಚ್‌.ಟಿ. ಪೋತೆ, ಕಮಲಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ.ಅಮೃತಾ ಕಟಕೆ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಡಾ.ಶಿವಾನಂದ ಕೆಳಗಿನಮನಿ ಅವರು ವಿವಿಧ ವಿಷಯ ಸಂಪುಟಗಳ ಸಂಪಾದಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

‘ಬೌದ್ಧ ಸಾಹಿತ್ಯದ ವಿವಿಧ ಪ್ರಕಾರ ಕುರಿತಂತೆ ಈ ವರೆಗೂ ಬಂದಿರುವ ಸಾಹಿತ್ಯಕ ಸಂಪತ್ತು ವಿಪುಲವಾಗಿದೆ. ಆದರೆ, ಅವುಗಳನ್ನು ಒಂದೆಡೆ ತರುವ ಪ್ರಯತ್ನ ಇದಾಗಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪಾಲಿ ಮತ್ತು ಬೌದ್ಧ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್‌.ಟಿ. ಪೋತೆ ಹೇಳಿದರು.

‘ಪ್ರಸಕ್ತ ವರ್ಷ ಡಿಸೆಂಬರ್‌ ಅಂತ್ಯದ ವೇಳೆಗೆ ಈ ಸಂಪುಟಗಳನ್ನು ಸಿದ್ಧಪಡಿಸಿ 2019ರ ಜನವರಿಯಲ್ಲಿ ಬಿಡುಗಡೆಗೊಳಿಸಬೇಕು ಎಂಬುದು ಕುಲಪತಿ ಡಾ.ಎಸ್‌.ಆರ್‌. ನಿರಂಜನ್‌ ಅವರ ಬಯಕೆಯಾಗಿದೆ. ಇದಕ್ಕೆ ಅನುದಾನದ ಕೊರತೆ ಇಲ್ಲ. ರಾಜ್ಯ ಸರ್ಕಾರ ನಮ್ಮ ಸಂಸ್ಥೆಗೆ ಈ ಹಿಂದೆಯೇ ₹1 ಕೋಟಿ ಅನುದಾನ ನೀಡಿದ್ದು, ಅದರಲ್ಲಿ ಸ್ವಲ್ಪ ಹಣವನ್ನು ಇದಕ್ಕೆ ಬಳಸಿಕೊಳ್ಳಲಾಗುವುದು’ ಎಂದರು.

‘ಬೌದ್ಧ ಕೇಂದ್ರಗಳ ಬಗೆಗೂ ಗ್ರಂಥ’

‘ಕರ್ನಾಟಕದಲ್ಲಿರುವ ಪಾರಂಪರಿಕ ಹಾಗೂ ಆಧುನಿಕ ಬೌದ್ಧ ಕೇಂದ್ರಗಳ ಸಚಿತ್ರ ಮಾಹಿತಿ ಒಳಗೊಂಡ ಗ್ರಂಥ ಹೊರತರುವ ಇನ್ನೊಂದು ಯೋಜನೆ ರೂಪಿಸಲಾಗಿದೆ’ ಎಂದು ಡಾ.ಎಚ್‌.ಟಿ. ಪೋತೆ ಹೇಳಿದರು.

‘ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಬುದ್ಧನ ಬಗೆಗೆ ಪಾರಂಪರಿಕ ಕುರುಹುಗಳಿವೆ. ಕಲಬುರ್ಗಿಯ ಬುದ್ಧ ವಿಹಾರ, ಕೋಲಾರ ಬುದ್ಧ ವಿಹಾರ ಸೇರಿದಂತೆ ರಾಜ್ಯದಲ್ಲಿ ನಿರ್ಮಾಣಗೊಂಡಿರುವ ಬುದ್ಧ ವಿಹಾರಗಳ ಸಮಗ್ರ ಮಾಹಿತಿಯನ್ನು ಈ ಗ್ರಂಥ ಒಳಗೊಳ್ಳಲಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು