ಮಂಗಳವಾರ, ಸೆಪ್ಟೆಂಬರ್ 28, 2021
21 °C
ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸುವ ಕುರಿತು ಸೋಮವಾರ ಸಂಜೆಯವರೆಗೂ ಸರಣಿ ಸಭೆ ನಡೆಸಿದ ಕುಲಪತಿ

ಕಲಬುರ್ಗಿ: ಸಿದ್ಧತೆ ಇಲ್ಲದೆಯೇ 5ರಿಂದ ಪರೀಕ್ಷೆಗೆ ಮುಂದಾದ ಗುವಿವಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪರೀಕ್ಷಾ ಕೇಂದ್ರಗಳು ಎಷ್ಟಿರಬೇಕು ಎಂಬ ಸ್ಪಷ್ಟತೆ ಇಲ್ಲ, ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರ ಯಾವಾಗ ಸಿಗಲಿವೆ ಎಂಬ ಖಚಿತತೆ ಇಲ್ಲ. ಕೋವಿಡ್ ಲಸಿಕೆ ಪಡೆಯದವರಿಗೆ ಪರೀಕ್ಷೆ ಬರೆಯಲು ಅವಕಾಶ ಇದೆಯೇ ಎಂಬ ಮಾಹಿತಿಯೂ ಇಲ್ಲ. ಇಂತಹ ಗೊಂದಲಗಳ ಮಧ್ಯೆಯೇ ಗುಲಬರ್ಗಾ ವಿಶ್ವವಿದ್ಯಾಲಯ ಇದೇ 5ರಿಂದ ಪದವಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿದೆ!

ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಗುವಿವಿ ಸೂಕ್ತ ಸಿದ್ಧತೆ ಮಾಡಿಕೊಳ್ಳದಿರುವುದೇ ಇದಕ್ಕೆ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.

ಕುಲಪತಿ ಪ್ರೊ. ದಯಾನಂದ ಅಗಸರ ಸೋಮವಾರ ವಿಶ್ವವಿದ್ಯಾಲಯದ ಪರೀಕ್ಷಾ ಸಿಬ್ಬಂದಿ, ವಿವಿಧ ನಿಕಾಯಗಳ ಡೀನ್‌ರೊಂದಿಗೆ ಸರಣಿ ಸಭೆ ನಡೆಸಿದರು. ಅಷ್ಟಾಗಿಯೂ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಬೇಕೇ ಅಥವಾ ಈಗ ಇರುವಷ್ಟೇ ಇರಬೇಕೇ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಧ್ಯವಾಗಲಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿವಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇತ್ತೀಚೆಗೆ ಪತ್ರಿಕಾಗೋಷ್ಠಿ ನಡೆಸಿದ್ದ ಕುಲಪತಿ ‍‍ಪ್ರೊ. ಅಗಸರ ಅವರು ಆಗಸ್ಟ್‌ 2ರಂದು ಪರೀಕ್ಷೆ ಆರಂಭಿಸುವುದಾಗಿ ಘೋಷಿಸಿದ್ದರು. ಆದರೆ, ಸಿದ್ಧತೆ ಪೂರ್ಣಗೊಳ್ಳದೇ ಇರುವುದರಿಂದ ಆ. 5ರಿಂದ ನಡೆಸಲು ತೀರ್ಮಾನಿಸಲಾಗಿದೆ. ಪರೀಕ್ಷಾ ಪ್ರವೇಶ ಪತ್ರಗಳು ಸೋಮವಾರ ಸಂಜೆಯವರೆಗೂ ವಿದ್ಯಾರ್ಥಿಗಳಿಗೆ ಲಭ್ಯವಾಗಿಲ್ಲ ಎಂದು ಪದವಿ ಕಾಲೇಜೊಂದರ ಪ್ರಾಚಾರ್ಯರು ಮಾಹಿತಿ ನೀಡಿದರು. ಮಂಗಳವಾರ ಬೆಳಿಗ್ಗೆಯಿಂದ ವಿ.ವಿ. ವೆಬ್‌ಸೈಟ್‌ನಿಂದ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡುವುದಾಗಿ ವಿ.ವಿ. ಪರೀಕ್ಷಾ ವಿಭಾಗದವರು ತಿಳಿಸಿದ್ದಾರೆ ಎಂದು ಅವರು ಹೇಳಿದರು.

ಪರೀಕ್ಷೆಗೆ ವಿರೋಧ: ಕೋವಿಡ್‌ ಮಹಾಮಾರಿಯಿಂದ ಜಿಲ್ಲೆಯ ಜನತೆ ಕಂಗೆಟ್ಟಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವ ತೀರ್ಮಾನವನ್ನು ಮರುಪರಿಶೀಲಿಸಬೇಕು. ಪರೀಕ್ಷೆ ನಡೆಸುವುದೇ ಆದರೆ, ಎಲ್ಲ ವಿದ್ಯಾರ್ಥಿಗಳಿಗೂ ಎರಡು ಡೋಸ್ ಲಸಿಕೆ ನೀಡಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪಠ್ಯಕ್ರಮವನ್ನು ಆಫ್‌ಲೈನ್‌ ಮೂಲಕ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಓ) ನೇತೃತ್ವದಲ್ಲಿ ವಿ.ವಿ.ಯ ಆಡಳಿತ ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸಿದ್ದರು.

ಅಲ್ಲದೇ, ಒಂದೇ ತಿಂಗಳ ಅವಧಿಯಲ್ಲಿ ಐದು ಹಾಗೂ ಆರನೇ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದು ಎಂದೂ ಆಗ್ರಹಿಸಿದ್ದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂದಿಸಿದ ವಿಶ್ವವಿದ್ಯಾಲಯವು ಸದ್ಯಕ್ಕೆ 1, 3 ಹಾಗೂ 5ನೇ ಸೆಮಿಸ್ಟರ್ ಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ಜೊತೆಗೆ ಈ ವಿದ್ಯಾರ್ಥಿಗಳಿಗೆ 2 ಹಾಗೂ 4ನೇ ಸೆಮಿಸ್ಟರ್‌ ಪರೀಕ್ಷೆ ಬರೆಯುವ ಅಗತ್ಯವಿಲ್ಲವೆಂದೂ ತಿಳಿಸಿದೆ. ಆದರೆ, 5ನೇ ಸೆಮಿಸ್ಟರ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ 6ನೇ ಸೆಮಿಸ್ಟರ್ ಪರೀಕ್ಷೆಯಿಂದ ವಿನಾಯಿತಿ ನೀಡಬೇಕು ಎಂಬ ಆಗ್ರಹವನ್ನು ವಿ.ವಿ. ಒಪ್ಪಿಲ್ಲ. ಹೀಗಾಗಿ, ಈ ಪರೀಕ್ಷೆ ಮುಗಿದ ಬಳಿಕ ಅಂತಿಮ ವರ್ಷದ ವಿದ್ಯಾರ್ಥಿಗಳು 6ನೇ ಸೆಮಿಸ್ಟರ್ ಪರೀಕ್ಷೆ ಬರೆಯುವುದು ಅನಿವಾರ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸರಿಯಾಗಿ ನಡೆಯದ ಆಫ್‌ಲೈನ್ ತರಗತಿಗಳು
ಜುಲೈ ಕೊನೆಯ ವಾರದಲ್ಲಿ ಆಫ್‌ಲೈನ್ ತರಗತಿಗಳನ್ನು ನಡೆಸಲು ವಿಶ್ವವಿದ್ಯಾಲಯ ಅನುಮತಿ ನೀಡಿದ್ದರೂ ತಾಲ್ಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲಿರುವ ಸರ್ಕಾರಿ ಪದವಿ ಕಾಲೇಜುಗಳಲ್ಲಿ ತರಗತಿ ಸರಿಯಾಗಿ ನಡೆದಿಲ್ಲ. ಶೇ 50ಕ್ಕಿಂತ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು. ಕೊನೆ ಹಂತದವರೆಗೆ ಆನ್‌ಲೈನ್ ಮೂಲಕ ಪರೀಕ್ಷಾ ಶುಲ್ಕವನ್ನು ವಿದ್ಯಾರ್ಥಿಗಳು ಪಾವತಿಸಿರಲಿಲ್ಲ. ಇದರಿಂದ ಚಿಂತೆಗೊಳಗಾದ ಕಾಲೇಜು ಆಡಳಿತ ಮಂಡಳಿ ಹಾಗೂ ಗುಲಬರ್ಗಾ ವಿ.ವಿ. ಪರೀಕ್ಷಾಂಗದವರು ಪರೀಕ್ಷಾ ಶುಲ್ಕ ಪಾವತಿ ದಿನಾಂಕವನ್ನು ಮತ್ತೆ ವಿಸ್ತರಿಸಿದ್ದರು.

‘ನಾವು ನಿರೀಕ್ಷೆ ಮಾಡಿದಷ್ಟು ವಿದ್ಯಾರ್ಥಿಗಳೂ ಆಫ್‌ಲೈನ್ ತರಗತಿಗಳಿಗೆ ಬರಲಿಲ್ಲ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜೊಂದರ ಪ್ರಾಧ್ಯಾಪಕರೊಬ್ಬರು ಒಪ್ಪಿಕೊಳ್ಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು