ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಭಾರೀ ಮಳೆ– ಕಾಳಗಿಯಲ್ಲಿ ಉಕ್ಕೇರಿದ ರೌದ್ರಾವತಿ ನದಿ, ದೇಗುಲಕ್ಕೆ ನೀರು

Last Updated 5 ಜೂನ್ 2021, 6:37 IST
ಅಕ್ಷರ ಗಾತ್ರ

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯ ಬಹುಪಾಲು ಕಡೆಗಳಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಮಳೆ ಶನಿವಾರ ನಸುಕಿನವರೆಗೂ ಧಾರಾಕಾರವಾಗಿ ಸುರಿದಿದೆ. ನದಿ, ಹಳ್ಳಿ, ಕೊಳ್ಳಗಳಲ್ಲಿ ನೀರು ಉಕ್ಕೇರಿದೆ. ಕಾಳಗಿ ತಾಲ್ಲೂಕಿನ ಕೋಡ್ಲಾದಲ್ಲಿ ಅತಿ ಹೆಚ್ಚು ಅಂದರೆ; 79.8 ಮಿ.ಮೀ ಮಳೆಯಾಗಿದೆ.

ನಗರದ ಹಳೆ ಜೇವರ್ಗಿ ರಸ್ತೆ, ಗಂಗಾನಗರ, ಬ್ರಹ್ಮಪುರ, ಓಂ ನಗರದ ತಗ್ಗು ಪ್ರದೇಶದ ಕೆಲ ಮನೆಗಳ ಅಂಗಳಕ್ಕೆ ನೀರು ನುಗ್ಗಿದೆ. ಹೊಸ ಜೇವರ್ಗಿ ರಸ್ತೆ, ವೆಂಕಟೇಶ್ವರ ಕಾಲೊನಿ ಮುಂತಾದೆಡೆ ವಿದ್ಯುತ್‌ ತಂತಿಗಳು ತುಂಡಾಗಿ, ರಾತ್ರಿ ವಿದ್ಯುತ್‌ ವ್ಯತ್ಯಯ ಅನುಭವಿಸಬೇಕಾಯಿತು.

ಲಾಳಗೇರಿ ಕ್ರಾಸ್‌, ಜಗತ್‌ ವೃತ್ತ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ಬಸ್‌ ನಿಲ್ದಾಣ ಆವರಣ, ಹೈಕೋರ್ಟ್‌ ಮಾರ್ಗಗಳಲ್ಲಿ ಶನಿವಾರ ಬೆಳಿಗ್ಗೆಯೂ ರಸ್ತೆ ತುಂಬಾನೀರು ಸಂಗ್ರಹಗೊಂಡಿತು.

‌ಉಕ್ಕಿದ ರೌದ್ರಾವತಿ– ದೇವಸ್ಥಾನಕ್ಕೆ ನೀರು: ಐತಿಹಾಸಿಕ ಕಾಳಗಿ ಪಟ್ಟಣ ಹಾಗೂ ಸುತ್ತಲಿನ ಹಳ್ಳಿಗಲ್ಲಿಯೂ ಧಾರಾಕಾರ ಮಳೆ ಬಿದ್ದಿದೆ. ಇದರಿಂದ ರೌದ್ರಾವತಿ ನದಿಯಲ್ಲಿ ಅಪಾರ ನೀರು ಉಕ್ಕೇರಿದ್ದು, ಸೇತುವೆ ಮಟ್ಟಕ್ಕೆ ಹರಿಯುತ್ತಿದೆ. ಕಾಳಗಿ– ಕೊಡದೂರ ಸೇತುವೆ ಮೇಲಿಂದ ಕೆಲಕಾಲ ನೀರು ಹರಿದು ಸಂಪರ್ಕ ಸ್ಥಗಿತಗೊಂಡಿತು.

ನದಿ ದಡದಲ್ಲಿರುವ ನೀಲಕಂಠ ಕಾಳೇಶ್ವರ ದೇವಸ್ಥಾನದ ಒಳಗೂ ನೀರು ನುಗ್ಗಿದೆ. ಅಕ್ಕಪಕ್ಕದ ಹೊಲಗಳಲ್ಲೂ ಅಪಾರ ನೀರು ನಿಂತು ಕೆರೆಗಳಂತೆ ಕಂಡವು.

ತಾಲ್ಲೂಕುಗಳಲ್ಲಿ ಮಳೆ ಪ್ರಮಾಣ: ಚಿಂಚೋಳಿ ತಾಲ್ಲೂಕಿನ ಕೋಡ್ಲಾದಲ್ಲಿ 79.8 ಮಿ.ಮೀ, ಚಿಮ್ಮನಚೂಡಾದಲ್ಲಿ 36 ಮಿ.ಮೀ, ನಿಡಗುಂದ 25 ಮಿ.ಮೀ, ಐನಾಪುರ 12.56 ಮಿ.ಮೀ, ಚಿಂಚೋಳಿ ಪಟ್ಟಣ 13.2 ಮಿ.ಮೀ. ಸೇಡಂನಲ್ಲಿ 11.6 ಮಿ.ಮೀ, ಅಡ್ಕಿಯಲ್ಲಿ 12.4 ಮಿ.ಮೀ, ಮುಧೋಳ 7 ಮಿ.ಮೀ. ಚಿತ್ತಾಪುರ ತಾಲ್ಲೂಕಿನ ನಾಲವಾರದಲ್ಲಿ 13.2 ಮಿ.ಮೀ ಮಳೆ ಸುರಿದಿದೆ.

ಜೇವರ್ಗಿ, ಯಡ್ರಾಮಿ ತಾಲ್ಲೂಕಿನ ವಿವಿಧೆಡೆ ಕೂಡ ಸಾಧಾರಣ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT