ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಕಲಬುರ್ಗಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆ; ಬೆಳೆ ಹಾನಿ, ರಸ್ತೆಗಳು ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು.

ಗುಡುಗು, ಮಿಂಚು ಸಹಿತ ಸುರಿದ ಧಾರಾಕಾರ ಮಳೆಗೆ ಹಲವೆಡೆ ಬೆಳೆ ಹಾನಿ ಸಂಭವಿಸಿದೆ.  ರಸ್ತೆಗಳು ಜಲಾವೃತವಾಗಿದ್ದು, ಸಂಪರ್ಕ ಕಡಿತವಾಗಿದೆ.

ಕಾಳಗಿಯಲ್ಲಿರುವ ಐತಿಹಾಸಿಕ ನೀಲಕಂಠ ಕಾಳೇಶ್ವರ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕಾಳಗಿ-ಚಿತ್ತಾಪುರ ಸಂಪರ್ಕ ಕಲ್ಪಿಸುವ ಕಾಳಗಿ, ತೆಂಗಿಳಿ ಸೇತುವೆಗಳು ಮುಳುಗಡೆಯಾಗಿವೆ.

ಕಾಳಗಿ-ಕಲಬುರ್ಗಿ ನಡುವಿನ ಕಣಸೂರ ಸೇತುವೆ ಮುಳುಗಡೆಯಾಗಿದ್ದು, ಒಟ್ಟಾರೆ ಕಾಳಗಿಯಿಂದ ಚಿತ್ತಾಪುರ, ಕಲಬುರ್ಗಿ ಸಂಚರಿಸುವ ಮಾರ್ಗ ಬಂದ್ ಆಗಿದೆ.

ಮಳೆಯಿಂದಾಗಿ ಆಳಂದ ತಾಲ್ಲೂಕಿನ ವಿವಿಧ ಗ್ರಾಮದಲ್ಲಿನ ಹಳ್ಳಕೊಳ್ಳಗಳು ತುಂಬಿ ಹರಿದವು. ಮಳೆ ನೀರು ರೈತರ ಹೊಲಗದ್ದೆಗೆ ನುಗ್ಗಿ ಹಾನಿ ಮಾಡದಲ್ಲದೆ ಕೆಲವಡೆ ಬೆಳೆದು ನಿಂತ ಬೆಳೆಗಳೂ ಕೊಚ್ಚಿಕೊಂಡು ಹೋಗಿವೆ.

ಮುಖ್ಯವಾಗಿ ಅಮರ್ಜಾ ನದಿಯ ಹಿನ್ನೀರು ಪ್ರದೇಶದ ಖಜೂರಿ ವಲಯದಲ್ಲಿ ಅಧಿಕ ಮಳೆಯಾಗಿದೆ. ಹೀಗಾಗಿ ಸಾಲೇಗಾಂವ ಕೆರೆ ಸಂಪೂರ್ಣ ಭರ್ತಿಯಾಗಿದ್ದು, ನೀರು ಹೊರ ಬೀಡಲಾಗುತ್ತಿದೆ.

ಈ ಕೆರೆಯಿಂದ ಹೆಚ್ಚುವರಿ ನೀರು ಗ್ರಾಮದ ಮುಖ್ಯಬೀದಿವರೆಗೆ ನುಗ್ಗಿದೆ. ಸಾಲೇಗಾಂವ ಕೆರೆ ಸುತ್ತಲಿನ 10ಕ್ಕೂ ಹೆಚ್ಚು ರೈತರ ಬಾವಿಗಳು ಜಲಾವೃತವಾಗಿವೆ. ತೊಗರಿ, ಸೋಯಾಬಿನ್ ಬೆಳೆ ಹಾನಿಯಾಗಿದೆ.

ಮಟಕಿ ಗ್ರಾಮದಲ್ಲಿ ಅಧಿಕ ಹಾನಿಯಾಗಿದೆ. ರೈತ ಸೈಬಣ್ಣಾ ಬಿರಾದಾರ, ಪ್ರಶಾಂತ ಬಿರಾದಾರ ರೈತರು ಹೊಲದಲ್ಲಿ ರಾಶಿಗಾಗಿ ಸಂಗ್ರಹಿಸಿಟ್ಟಿದ 3 ಎಕರೆ ಉದ್ದು ಬೆಳೆ, 8 ತಾಡಪತ್ರೆ ಸಮೇತ ಕೊಚ್ಚಿಕೊಂಡು ಹೋಗಿದೆ.

ಕಬ್ಬು ಬೆಳೆಯು ಸಹ ಸಂಪೂರ್ಣ ನೀರಲ್ಲಿ ಮುಳಗಿದೆ. ಹೆಬಳಿ, ತೀರ್ಥ ಹಳ್ಳಗಳು ತುಂಬಿ ಹರಿಯುತ್ತಿರುವ ಪರಿಣಾಮ ಸಂಪರ್ಕ ಸ್ಥಗಿತವಾಗಿದೆ.

ಭಾರಿ ಮಳೆಗೆ ಹೆಬಳಿ, ಜೀರಹಳ್ಳಿ, ಶಕಾಪುರ, ಪಡಸಾವಳಿ ಹಳ್ಳಗಳಿಗೆ ಹೆಚ್ಚಿನ ನೀರು ಬಂದ ಪರಿಣಾಮ ಅಮರ್ಜಾ ಆಣೆಕಟ್ಟೆಗೂ ನೀರು ಬರುತ್ತಿದೆ. ಕಳೆದ ಮೂರು ದಿನಗಳ ಹಿಂದೆಯಷ್ಟೆ ಮುನ್ನೆಚ್ಚರಿಕೆ ಕ್ರಮವಾಗಿ 100 ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿತ್ತು.

ಚಿತ್ತಾಪುರ ತಾಲ್ಲೂಕಿನ ದಂಡೋತಿ ಹತ್ತಿರ ಕಾಗಿಣಾ ನದಿಗೆ ನಿರ್ಮಿಸಿರುವ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಈ ಸೇತುವೆ ಮಾರ್ಗದಿಂದ ಚಿತ್ತಾಪುರ ಪಟ್ಟಣವು ತಾಲ್ಲೂಕಿನ ವಿವಿಧ ಗ್ರಾಮಗಳು ಮತ್ತು ಕಲಬುರ್ಗಿ, ಕಾಳಗಿ, ಸೇಡಂ ನಗರಗಳಿಂದ ಸಾರಿಗೆ ಸಂಪರ್ಕ್ ಕಡಿದುಕೊಂಡಿದೆ.

ಕಲಬುರ್ಗಿ ಜಿಲ್ಲೆಯ ಸೇಡಂ, ಚಿಂಚೋಳಿ, ಕಾಳಗಿ, ಕಮಲಾಪುರ ತಾಲ್ಲೂಕು ವ್ಯಾಪ್ತಿಯಲ್ಲಿ ಹಾಗೂ ಚಿತ್ತಾಪುರ ತಾಲ್ಲೂಕಿನಾದ್ಯಂತ ಶನಿವಾರ ರಾತ್ರಿ ಧಾರಾಕಾರ ಮಳೆ ಸುರಿದು ಕಾಗಿಣಾ ನದಿಗೆ ಭಾರಿ ಪ್ರವಾಹ ಬಂದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಕಾಳಗಿ ತಾಲ್ಲೂಕಿನ ಬೆಣ್ಣೆತೊರಾ ಜಲಾಶಯದಿಂದ ನೀರು ಬಿಟ್ಟಿದ್ದರಿಂದ ಬೆಣ್ಣೆತೊರಾ ನದಿ ಉಕ್ಕಿ ಹರಿಯುತ್ತಿದೆ. ಕಾಳಗಿ ಪಟ್ಟಣ ಪಕ್ಕದಿಂದ ಹರಿಯುವ ರೌದ್ರಾವತಿ ನದಿ ಪ್ರವಾಹದಿಂದ ತುಂಬಿ ಬೆಣ್ಣೆತೊರಾ ನದಿಗೆ ಸೇರಿ ಬೆಣ್ಣೆತೊರಾ ನದಿ ಬೋರ್ಗರೆಯುತ್ತಾ ಕಾಗಿಣಾ ನದಿಗೆ ಸೇರುವುದರಿಂದ ಚಿತ್ತಾಪುರ ತಾಲ್ಲೂಕಿನ ದಂಡೋತಿ ಸೇತುವೆ ಸೇರಿದಂತೆ ಮುಡಬೂಳ ಬಾಂದಾರ ಸೇತುವೆ ಮುಳುಗಡೆಯಾಗಿದೆ.

ಕದ್ದರಗಿ ಗ್ರಾಮದ ಹತ್ತಿರ ಕಾಗಿಣಾ ನದಿಗೆ ಕಟ್ಟಿರುವ ಬಾಂದಾರ ಸೇತುವೆ ಪ್ರವಾಹದಲ್ಲಿ ಮುಳುಗಿ ಈ ಮಾರ್ಗದಿಂದ ತಾಲ್ಲೂಕಿನ ವಿವಿಧ ಗ್ರಾಮಗಳು ಶಹಾಬಾದ್ ತಾಲ್ಲೂಕಿನಿಂದ ಸಂಪರ್ಕ್ ಕಡಿದುಕೊಂಡಿವೆ.

ಕಾಗಿಣಾ ನದಿಯಲ್ಲಿ ಕ್ಷಣಕ್ಷಣಕ್ಕೂ ಪ್ರವಾಹ ತೀವ್ರಗತಿಯಿಂದ ಏರುತ್ತಿದೆ. ಚಿತ್ತಾಪುರದಿಂದ ಶಹಾಬಾದ್ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಮಾರ್ಗದಲ್ಲಿ ಶಂಕರವಾಡಿ ಗ್ರಾಮದ ಸಮೀಪ ಕಾಗಿಣಾ ನದಿಗೆ ಕಟ್ಟಿರುವ ಸೇತುವೆಯೂ ಮುಳುಗಡೆಯ ಭೀತಿ ಆವರಿಸಿದೆ. ಈ ಮಾರ್ಗದ ಸಾರಿಗೆ ಸಂಚಾರ ಬಂದ್ ಆದರೆ ಚಿತ್ತಾಪುರ ಪಟ್ಟಣವು ಕಲಬುರ್ಗಿ ಜಿಲ್ಲೆಯಿಂದ ಸಂಪರ್ಕ ಬಂದ್ ಆಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.