ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ‌ ಮೇಯರ್–ಉಪಮೇಯರ್ ಚುನಾವಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

Last Updated 21 ಮಾರ್ಚ್ 2023, 8:41 IST
ಅಕ್ಷರ ಗಾತ್ರ

ಕಲಬುರಗಿ: ‌‘ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಬಹುಮತಕ್ಕಿಂತ ಕಡಿಮೆ ಸೀಟುಗಳನ್ನು ಪಡೆದಿರುವ ಬಿಜೆಪಿ ಬೇರೆ ಜಿಲ್ಲೆಗಳಿಗೆ ಸೇರಿದ ವಿಧಾನಪರಿಷತ್ ಸದಸ್ಯರ ಹೆಸರುಗಳನ್ನು ಪಾಲಿಕೆ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸುವ ಮೂಲಕ ವಾಮಮಾರ್ಗದಿಂದ ಅಧಿಕಾರ ಪಡೆಯಲು ಹವಣಿಸುತ್ತಿದೆ. ಆದ್ದರಿಂದ ಚುನಾವಣೆಗೆ ತಡೆ ನೀಡಬೇಕು’ ಎಂದು ಪಾಲಿಕೆಯ ಕಾಂಗ್ರೆಸ್ ಸದಸ್ಯೆ ವರ್ಷಾ ಜಾನೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ನ ಕಲಬುರಗಿ ಪೀಠವು ವಜಾ ಮಾಡಿದೆ.

ಮಂಗಳವಾರ ಅರ್ಜಿಯನ್ನು ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ನ್ಯಾಯಪೀಠವು, ‘ಈಗಾಗಲೇ ಚುನಾವಣೆ ಘೋಷಣೆಯಾಗಿರುವುದರಿಂದ ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟು ಅರ್ಜಿಯನ್ನು ವಜಾ ಮಾಡಿತು.

ಇದರಿಂದಾಗಿ ಇದೇ 23ರಂದು ನಿಗದಿಯಾಗಿರುವ ಮೇಯರ್–ಉಪಮೇಯರ್ ಚುನಾವಣೆ ನಡೆಯಲು ಎದುರಾಗಿದ್ದ ಅಡ್ಡಿ ನಿವಾರಣೆಯಾದಂತಾಗಿದೆ.

ವಾರದ ಹಿಂದೆಯೇ ಪಾಲಿಕೆಯ ಮೇಯರ್–ಉಪಮೇಯರ್ ಆಯ್ಕೆಗೆ ಚುನಾವಣೆ ಘೋಷಿಸಿದ್ದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ಸದಸ್ಯರಿಗೆ ಈ ಕುರಿತು ನೋಟಿಸ್ ನೀಡಿದ್ದರು.

55 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ 27 ಸ್ಥಾನಗಳನ್ನು ಪಡೆಯುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿ 23 ಸ್ಥಾನಗಳು, ಜೆಡಿಎಸ್ 4 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿಯಿಂದ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಶಂಭುಲಿಂಗ ಬಳಬಟ್ಟಿ ಗೆಲುವು ಸಾಧಿಸಿದ್ದರು. ಆ ಬಳಿಕ ಮರಳಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಬಿಜೆಪಿಯಿಂದ ಗೆದ್ದಿದ್ದ ಪ್ರಿಯಾಂಕಾ ಭೋಯಿ ಅವರ ಸದಸ್ಯತ್ವವನ್ನು ನ್ಯಾಯಾಲಯ ರದ್ದು ಮಾಡಿದೆ.

ಬಿಜೆಪಿಯ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರ ಮತಗಳನ್ನು ಲೆಕ್ಕ ಹಾಕಿದರೆ 35 ಮತಗಳಾಗುತ್ತವೆ. ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮತ ಹಾಗೂ ಶಾಸಕರು, ವಿಧಾನಪರಿಷತ್ ಸದಸ್ಯರ ಮತಗಳನ್ನು ಕೂಡಿಸಿದರೆ 31 ಮತಗಳಾಗುತ್ತವೆ.

ಸರಳ ಬಹುಮತಕ್ಕೆ 36 ಮತಗಳ ಅವಶ್ಯಕತೆಯಿದ್ದು, ಬಿಜೆಪಿ ಅಧಿಕಾರದ ಗದ್ದುಗೆಗೆ ಸಮೀಪದಲ್ಲಿದೆ. ಒಂದೊಮ್ಮೆ ಜೆಡಿಎಸ್‌ ಕಾಂಗ್ರೆಸ್ ಬೆಂಬಲಿಸಿದರೂ ಒಟ್ಟು ಮತಗಳು 35 ಆಗುತ್ತವೆ. ಜೆಡಿಎಸ್‌ ಯಾರನ್ನು ಬೆಂಬಲಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಂಡಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT