ಶನಿವಾರ, ಜುಲೈ 2, 2022
22 °C

ಕಲಬುರಗಿ: ಹಳೇ ಮತದಾರರ ಪಟ್ಟಿಯಂತೆ ಪಾಲಿಕೆ ಚುನಾವಣೆ ನಡೆಸಲು ಹೈಕೋರ್ಟ್ ತಡೆಯಾಜ್ಞೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆಯನ್ನು ಹಳೆಯ ಮತದಾರರ ಪಟ್ಟಿಯಂತೆ ನಡೆಸಬೇಕು ಎಂಬ ತೀರ್ಪಿಗೆ ವಿಭಾಗೀಯ ಪೀಠವು ತಡೆಯಾಜ್ಞೆ ‌ನೀಡಿದೆ. 

ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಜಿಲ್ಲೆಯವರಲ್ಲದ ಬಿಜೆಪಿ ವಿಧಾನ ಪರಿಷತ್ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ‌ಮಾಡಿದ್ದನ್ನು ಪ್ರಶ್ನಿಸಿ  ಪಾಲಿಕೆಯ ಕಾಂಗ್ರೆಸ್ ಸದಸ್ಯರು ಹೈಕೋರ್ಟ್ ಕಲಬುರಗಿ ‌ಪೀಠದ ಮೆಟ್ಟಿಲೇರಿದ್ದರು‌.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾ.ಇ.ಎಸ್. ಇಂದಿರೇಶ್ ನೇತೃತ್ವದ ನ್ಯಾಯಪೀಠವು ಚುನಾವಣೆಯನ್ನು ಪರಿಷತ್ ಸದಸ್ಯರನ್ನು ಹೊರತುಪಡಿಸಿ ತಯಾರಿಸಿದ್ದ ಹಳೆಯ ಮತದಾರರ ಪಟ್ಟಿಯಂತೆ ನಡೆಸಬೇಕು ಹಾಗೂ ಹಳೆಯ ಮೀಸಲಾತಿಯನ್ನೇ ಮೇಯರ್, ಉಪಮೇಯರ್ ಆಯ್ಕೆಗೆ ಅನುಸರಿಸಬೇಕು. ಒಂದು ತಿಂಗಳೊಳಗಾಗಿ ಚುನಾವಣೆ ‌ನಡೆಸಬೇಕು ಎಂದು ಫೆಬ್ರುವರಿ 4ರಂದು ಅದೇಶ ಹೊರಡಿಸಿತ್ತು. 

ಇದನ್ನು ಪ್ರಶ್ನಿಸಿ ವಿಧಾನಪರಿಷತ್ ಸದಸ್ಯರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. 

ಗುರುವಾರ ಪ್ರಕರಣದ ವಿಚಾರಣೆ ‌ನಡೆಸಿದ ನ್ಯಾಯಮೂರ್ತಿಗಳಾದ ಎಸ್.ಆರ್. ಕೃಷ್ಣಕುಮಾರ್, ಕೆ.ಎಸ್. ಹೇಮಲೇಖಾ ಅವರಿದ್ದ ನ್ಯಾಯಪೀಠವು ತೀರ್ಪಿಗೆ ತಡೆಯಾಜ್ಞೆ ‌ನೀಡಿ ವಿಚಾರಣೆಯನ್ನು ಮಾರ್ಚ್ 14ಕ್ಕೆ ಮುಂದೂಡಿತು. 

ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಪರಿಷತ್ ಸದಸ್ಯರ ಪರವಾಗಿ ವಕೀಲ ಗೌರಿಶಂಕರ ಖಾಶೆಂಪೂರ ವಾದ ಮಂಡಿಸಿದರು.

ವಿಧಾನ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ರಘುನಾಥ್ ರಾವ್ ಮಲ್ಕಾಪುರೆ, ಭಾರತಿ ಶೆಟ್ಟಿ, ಡಾ. ತಳವಾರ ಸಾಬಣ್ಣ, ಲೆಹರ್ ಸಿಂಗ್, ಪ್ರತಾಪ‌ ಸಿಂಹ ನಾಯಕ, ತುಳಸಿ ಮುನಿರಾಜುಗೌಡ ಅವರು ಕಲಬುರಗಿ ದಕ್ಷಿಣ ಕ್ಷೇತ್ರದ ವ್ಯಾಪ್ತಿಯಲ್ಲಿ ತಾವು ವಾಸವಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು‌ ಎಂದು ಮನವಿ ಸಲ್ಲಿಸಿದ್ದರು. ಅವರು ವಾಸವಿರುವ ಬಗ್ಗೆ ದಾಖಲೆ ಪರಿಶೀಲಿಸಿದ್ದ ಚುನಾವಣಾಧಿಕಾರಿ ಡಾ. ತಳವಾರ ಸಾಬಣ್ಣ ಹಾಗೂ ಪ್ರತಾಪ ಸಿಂಹ ನಾಯಕ್ ಅವರ ಅರ್ಜಿಗಳನ್ನು ತಿರಸ್ಕಿರಿ, ಉಳಿದ ಐವರ ಹೆಸರುಗಳ ಸೇರ್ಪಡೆಗೆ ಅನುಮೋದನೆ ನೀಡಿದ್ದರು.

ಹೀಗಾಗಿ ಪಾಲಿಕೆ ಚುನಾವಣೆಯ ಮತದಾರರ ಸಂಖ್ಯೆ 63ರಿಂದ 68ಕ್ಕೆ ಏರಿಕೆಯಾಗಿತ್ತು.‌ ಇದರಿಂದಾಗಿ ಬಿಜೆಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರಕ್ಕೆ ಬರುವ ಸಾಧ್ಯತೆ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು