ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಐತಿಹಾಸಿಕ ಬಾವಿಗಳಿಗೆ ಬೇಕಿದೆ ಕಾಯಕಲ್ಪದ ಉಸಿರು

ನೀರಿನ ಸೆಲೆಯಿರುವ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ನಿರ್ಮಾಣ: ಬೆರಗುಗೊಳಿಸುವ ನಿರ್ಮಾಣ ಶೈಲಿ, ಬತ್ತಿದ ಉದಾಹರಣೆ ಕಡಿಮೆ
ಭೀಮಣ್ಣ ಬಾಲಯ್ಯ
Published 25 ಡಿಸೆಂಬರ್ 2023, 7:26 IST
Last Updated 25 ಡಿಸೆಂಬರ್ 2023, 7:26 IST
ಅಕ್ಷರ ಗಾತ್ರ

ಕಲಬುರಗಿ: ಗುಲಬರ್ಗಾವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ಮಾಡಿದ್ದ ಬಹಮನಿ ಸುಲ್ತಾನರು ಜಿಲ್ಲೆಯ ಹಲವು ಕಡೆ ಐತಿಹಾಸಿಕ ಕುರುಹುಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳಲ್ಲಿ ಬಾವಿಗಳೂ ಸೇರಿವೆ. ಅವು ಈಗ ಅವಸಾನದ ಅಂಚಿಗೆ ತಲುಪಿವೆ.

ಬಹಮನಿಗಳ ಕಾಲದಲ್ಲಿ ಇಲ್ಲಿನ ಹೀರಾಪುರ, ಎಂಎಸ್‌ಕೆ ಮಿಲ್ ಪ್ರದೇಶ, ಗುಬ್ಬಿ ಕಾಲೊನಿ, ತಾರ್‌ಫೈಲ್, ಮಹಾದೇವ ನಗರ, ರಾಜಾಪುರ, ದತ್ತ ನಗರ ಸೇರಿ ಹಲವು ಕಡೆ ದೇವಸ್ಥಾನ ಹಾಗೂ ದರ್ಗಾಗಳ ಬಳಿ ಬಾವಿಗಳನ್ನು ನಿರ್ಮಿಸಲಾಗಿತ್ತು. ಸುತ್ತಮುತ್ತಲಿನವರು ಕೃಷಿಗೆ ಹಾಗೂ ಕುಡಿಯಲು ಇಲ್ಲಿಯ ನೀರನ್ನೇ ಬಳಸುತ್ತಿದ್ದರು.

ಬಾವಿಗಳನ್ನು ಕಪ್ಪು ಕಲ್ಲುಗಳಿಂದ ನಿರ್ಮಿಸಲಾಗಿದೆ. ಇಂದಿಗೂ ಗಾಳಿ–ಮಳೆಗೆ ಜಗ್ಗದೆ ನಿಂತಿರುವ ಗಟ್ಟಿಯಾದ ಗೋಡೆ ಹಾಗೂ ನಿರ್ಮಾಣ ಶೈಲಿ ಬೆರಗುಗೊಳಿಸುತ್ತದೆ. ಗಟ್ಟಿಮುಟ್ಟಾದ ಮೆಟ್ಟಿಲುಗಳು, ಅಂದವಾದ ಕಮಾನುಗಳು, ಅದರ ಮೇಲಿನ ಕೆತ್ತನೆ ಹಾಗೂ ಗೋಡೆಗಳು ಗಮನಸೆಳೆಯುತ್ತವೆ.

ನೀರಿನ ಸೆಲೆಯಿರುವ ಸ್ಥಳಗಳಲ್ಲಿ ಈ ಬಾವಿಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿರುವ ಕಾರಣ ಇವು ಬತ್ತಿದ ಉದಾಹರಣೆ ಇಲ್ಲ.

ಬಾವಿಗಳ ಕಣಜ ಹೀರಾಪುರ: ಬಹಮನಿ ಸುಲ್ತಾನರ ಕಾಲದಲ್ಲಿ ಹಲವು ಉಪನಗರಗಳನ್ನು ನಿರ್ಮಿಸಲಾಗಿತ್ತು. ಅವುಗಳಲ್ಲಿ ಹೀರಾಪುರವೂ ಒಂದು. ಇಮ್ಮಡಿ ಇಬ್ರಾಹಿಂ ಸುಲ್ತಾನ ಗುಲಬರ್ಗಾ ಕೋಟೆಯ ಪಶ್ಚಿಮ ಭಾಗದಲ್ಲಿ ಹೀರಾಪುರ ಉಪನಗರ ನಿರ್ಮಿಸಿದರು ಎನ್ನುವುದು ತಿಳಿದುಬರುತ್ತದೆ.

ಬಹಮನಿ ಸುಲ್ತಾನರ ಕಾಲದಲ್ಲಿ ಇಲ್ಲಿ ಸೈಯದ್ ಅಬೀದ್ ಷಾ ವಲಿ ದರ್ಗಾ ಹಾಗೂ ಹೀರಾಬೀಬಿ ಮಸೀದಿ ನಿರ್ಮಿಸಲಾಗಿದೆ. ಹೀರಾಬೀಬಿ ಇಲ್ಲಿ ಅನೇಕ ಕೆಲಸಗಳನ್ನು ಮಾಡಿದ್ದರು. ಆದ ಕಾರಣ ಈ ಊರಿಗೆ ಹೀರಾಪುರ ಎಂಬ ಹೆಸರು ಬಂದಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.

ಬಳಿಕ ಇಲ್ಲಿ ಹಲವರು ಬಾವಿ ಹಾಗೂ ಛತ್ರಗಳನ್ನು ನಿರ್ಮಿಸಿದರು ಎಂದು ಶಾಸನಗಳು ತಿಳಿಸುತ್ತವೆ.

ಆದ್ದರಿಂದ ಹೀರಾಪುರ ಒಂದರಲ್ಲಿಯೇ ಹಲವು ಬಾವಿಗಳು ಕಾಣಸಿಗುತ್ತವೆ. ಇಲ್ಲಿ 12 ಬಾವಿಗಳಿದ್ದವು. ಅವುಗಳಲ್ಲಿ ಕೆಲವು ಅಭಿವೃದ್ಧಿಯ ಹೊಡೆತಕ್ಕೆ ಸಿಲುಕಿ ಅಸ್ತಿತ್ವ ಕಳೆದುಕೊಂಡಿವೆ. ಕೆಲವುಗಳನ್ನು ಮುಚ್ಚಿ ಅವುಗಳ ಮೇಲೆ ಬಡಾವಣೆಗಳನ್ನು ನಿರ್ಮಿಸಲಾಗಿದೆ. ಈಗ ಶಂಕರಲಿಂಗ ಬಾವಿ, ಜ್ಯೋತಿರ್ಲಿಂಗ ಬಾವಿ, ಇಬ್ರಾಹಿಂ ಅಲಿ ಆದಿಲ್ ಶಾಹಿ ಮಸೀದಿ ಬಾವಿ, ಬರ್ಫಾ ಖಾನ್ ಬಾವಿ, ದರ್ಗಾ ಹಾಗೂ ಹೀರಾಬೀಬಿ ಬಾವಿಗಳು ಉಳಿದಿವೆ.

ರಾಜಾಪುರದ ಬಳಿಯ ಹೊಲದಲ್ಲಿರುವ ಅಗಸ್ತ್ಯತೀರ್ಥ ಬಾವಿಯಲ್ಲಿಯ ನೀರನ್ನು ಇಂದಿಗೂ ಕೃಷಿಗೆ ಬಳಸಲಾಗುತ್ತಿದೆ.

ಕಾಲಚಕ್ರ ಉರುಳಿದಂತೆ ಈ ಬಾವಿಗಳು ಉದಾಸೀನಕ್ಕೆ ಒಳಗಾದವು. ಒತ್ತುವರಿ ಇವುಗಳಿಗೆ ಉರುಳಾಗಿ ಪರಿಣಮಿಸಿದೆ. ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಅವು ತ್ಯಾಜ್ಯದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಗಿಡ–ಗಂಟಿ ಬೆಳೆದು ಅವುಗಳ ಕತ್ತು ಹಿಸುಕುತ್ತಿವೆ. ಗೋಡೆಗಳು ಶಿಥಿಲಗೊಂಡು ಕಲ್ಲುಗಳು ಬೀಳುತ್ತಿವೆ. ಹೂಳು ತುಂಬಿ ನೀರಿನ ಸೆಲೆಗೆ ಕಂಟಕವಾಗುತ್ತಿದೆ. ಕೆಲವರು ಅಲ್ಲಿಯೇ ಬಟ್ಟೆ ತೊಳೆಯುವುದರಿಂದ ನೀರು ಕಲುಷಿತಗೊಳ್ಳುತ್ತಿದೆ.

ಪಾಲಿಕೆಯಿಂದ ಪುನರುಜ್ಜೀವನಕ್ಕೆ ಪ್ರಯತ್ನ: ಮಹಾನಗರ ಪಾಲಿಕೆಯು ಬಾವಿಗಳ ಸಮೀಕ್ಷೆ ನಡೆಸಿ ಒಟ್ಟು 51 ಬಾವಿಗಳಿಗೆ ಮರುಜೀವ ನೀಡಿತ್ತು. ಮುಂದಿನ ಹಂತದಲ್ಲಿ 16 ಬಾವಿಗಳ ಪುನರುಜ್ಜೀವನ ಕಾರ್ಯ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.

2020–21 ಹಾಗೂ 2021–22ನೇ ಸಾಲಿನ 15ನೇ ಹಣಕಾಸು ಯೋಜನೆಯ ₹4 ಕೋಟಿಗೂ ಹೆಚ್ಚು ಅನುದಾನ ಬಳಸಿಕೊಂಡು ಪಾಲಿಕೆ ಬಾವಿಗಳ ಪುನರುಜ್ಜೀವನ ಮಾಡಿತ್ತು. ಪಾಲಿಕೆ ಎಂಜಿನಿಯರ್‌ಗಳು ಪಾಲಿಕೆ ವ್ಯಾಪ್ತಿಯ 55 ವಾರ್ಡ್‌ಗಳಲ್ಲಿ 59 ತೆರೆದ ಬಾವಿಗಳ ಸಮೀಕ್ಷೆ ನಡೆಸಿದ್ದರು. ಅವುಗಳ ಪುನರುಜ್ಜೀವನಕ್ಕೆ ಖಾಸಗಿಯವರಿಗೆ ಟೆಂಡರ್‌ ನೀಡಲಾಗಿತ್ತು.

ಟೆಂಡರ್‌ ಪಡೆದವರು ಬಾವಿಗಳ ಪುನರುಜ್ಜೀವನ ಮಾಡಿದ್ದರು. ಆದರೆ ಪುನರುಜ್ಜೀವನಗೊಂಡ ಬಾವಿಗಳಲ್ಲಿ ಮತ್ತೆ ಗಿಡ–ಗಂಟಿ ಬೆಳೆದು ನಿಂತಿದೆ. ಕೆಲವರು ಗ್ರಿಲ್‌ಗಳ ಮೇಲೆ ಮತ್ತೆ ತ್ಯಾಜ್ಯ ಎಸೆಯುತ್ತಿದ್ದಾರೆ. ಈಗ ಬಾವಿಗಳು ಮತ್ತೆ ಮೊದಲಿನಂತಾಗುವ ಅಪಾಯ ಎದುರಾಗಿದೆ.

‘ಮತ್ತೆ ಈಗ 16 ಬಾವಿಗಳ ಸಮೀಕ್ಷೆ ನಡೆಸಲಾಗಿದೆ. ಮುಂದಿನ ಯೋಜನೆಯ ಅನುದಾನದಲ್ಲಿ ಅವುಗಳ ಪುನರುಜ್ಜೀವನ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

ಪೂರಕ ಮಾಹಿತಿ: ಗುಂಡಪ್ಪ ಕರೆಮನೋರ

ಕಲಬುರಗಿಯ ಹೀರಾಪುರದಲ್ಲಿರುವ ಶಂಕರಲಿಂಗ ಬಾವಿ
ಕಲಬುರಗಿಯ ಹೀರಾಪುರದಲ್ಲಿರುವ ಶಂಕರಲಿಂಗ ಬಾವಿ
ಕಲಬುರಗಿಯ ಎಂಎಸ್‌ಕೆ ಮಿಲ್ ಬಳಿ ಇರುವ ಬರ್ಫಾ ಖಾನ್ ಬಾವಿಯ ದುಃಸ್ಥಿತಿ
ಕಲಬುರಗಿಯ ಎಂಎಸ್‌ಕೆ ಮಿಲ್ ಬಳಿ ಇರುವ ಬರ್ಫಾ ಖಾನ್ ಬಾವಿಯ ದುಃಸ್ಥಿತಿ
ಕಾಳಗಿಯ ಐತಿಹಾಸಿಕ ಗಡಬಿ ಬಾವಿ
ಕಾಳಗಿಯ ಐತಿಹಾಸಿಕ ಗಡಬಿ ಬಾವಿ
ಕಾಳಗಿಯ ಐತಿಹಾಸಿಕ ವಿಷ್ಣುತೀರ್ಥ ಪುಷ್ಕರಣಿ
ಕಾಳಗಿಯ ಐತಿಹಾಸಿಕ ವಿಷ್ಣುತೀರ್ಥ ಪುಷ್ಕರಣಿ
ಹೀರಾಪುರದ ಇಬ್ರಾಹಿಂ ಅಲಿ ಆದಿಲ್ ಶಾಹಿ ಬಾವಿ ಮೇಲಿರುವ ಶಾಸನ
ಹೀರಾಪುರದ ಇಬ್ರಾಹಿಂ ಅಲಿ ಆದಿಲ್ ಶಾಹಿ ಬಾವಿ ಮೇಲಿರುವ ಶಾಸನ

ಜಲಮೂಲಗಳನ್ನು ರಕ್ಷಿಸುವ ಉದ್ದೇಶದಿಂದ ಕಾಯಕಲ್ಪ ನೀಡಲಾಗುತ್ತಿದೆ. ಉಳಿದ ಬಾವಿಗಳ ಸಮೀಕ್ಷೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಪುನರುಜ್ಜೀವನದ ಕೆಲಸ ಕೈಗೆತ್ತಿಕೊಳ್ಳಲಾಗುವುದು- ಆರ್‌.ಪಿ.ಜಾಧವ ಉಪ ಆಯುಕ್ತ (ಆಡಳಿತ) ಮಹಾನಗರ ಪಾಲಿಕೆ

ಐತಿಹಾಸಿಕ ಬಾವಿಗಳ ರಕ್ಷಣೆ ಅಗತ್ಯ. ಆದರೆ ಪುನರುಜ್ಜೀವನದ ಬಳಿಕ ಅವುಗಳಲ್ಲಿಯ ಗಿಡ–ಗಂಟಿಗಳನ್ನು ಪಾಲಿಕೆಯವರು ನಿಯಮಿತವಾಗಿ ತೆರವು ಮಾಡಬೇಕು- ಅಲ್ಲಮಪ್ರಭು ನಿಂಬರ್ಗಾ ಹೀರಾಪುರ ನಿವಾಸಿ

‘ಬರ್ಫಾ ಖಾನ್‌’ಗಿಲ್ಲ ಕಾಯಕಲ್ಪ ಇಲ್ಲಿಯ ಎಂಎಸ್‌ಕೆ ಮಿಲ್ ಹಿಂಭಾಗದ ಜಿಡಿಎ ಬಡಾವಣೆಯಲ್ಲಿ ಬಹಮನಿ ಸುಲ್ತಾನರು ನಿರ್ಮಿಸಿದ ‘ಬರ್ಫಾ ಖಾನ್‌’ ಬಾವಿ ಇದೆ. ಇದನ್ನು ಅರೇಬಿಯನ್ ಶೈಲಿಯಲ್ಲಿ ನಿರ್ಮಿಸಲಾಗಿದೆ. ಬೇಸಿಗೆಯಲ್ಲಿ ಇಲ್ಲಿ ಐಸ್ ಗಡ್ಡೆಗಳನ್ನು ತಯಾರಿಸಲಾಗುತ್ತಿತ್ತು. ಆದ್ದರಿಂದ ಇದಕ್ಕೆ ಬರ್ಫಾ ಖಾನ್‌ ಎಂದು ಹೆಸರು ಬಂದಿದೆ. ಈ ಬಾವಿಯ ಕೆಲ ಭಾಗ ಶಿಥಿಲಗೊಂಡಿದೆ. ತನ್ನ ಒಡಲಲ್ಲಿ ತ್ಯಾಜ್ಯ ತುಂಬಿಕೊಂಡು ನಿಂತಿದೆ. ನೀರು ಕಲುಷಿತಗೊಂಡು ದುರ್ನಾತ ಬೀರುತ್ತಿದೆ. ಇದು ಎಂಎಸ್‌ಕೆ ಮಿಲ್‌ ಜಾಗದಲ್ಲಿರುವುದರಿಂದ ಪಾಲಿಕೆಗೆ ಕಾಯಕಲ್ಪ ನೀಡಲು ಸಾಧ್ಯವಾಗುತ್ತಿಲ್ಲ. ಈ ಬಾವಿಯನ್ನು ಸ್ವಚ್ಛಗೊಳಿಸಿ ಗ್ರಿಲ್ ಅಳವಡಿಸಲು ಜವಳಿ ಇಲಾಖೆ ಅನುಮತಿ ನೀಡುತ್ತಿಲ್ಲ. ಆದ್ದರಿಂದ ಈ ಬಾವಿ ಕಾಯಕಲ್ಪದಿಂದ ವಂಚಿತವಾಗಿದೆ. 2019ರಲ್ಲಿ ಪ್ರಾದೇಶಿಕ ಆಯುಕ್ತರಾಗಿದ್ದ ಸುಬೋಧ್ ಯಾದವ್ ಅವರು ಕಲಬುರಗಿಯಲ್ಲಿನ ಕಲ್ಯಾಣಿಗಳ ಬಗ್ಗೆ ಆಸಕ್ತಿ ವಹಿಸಿ ಅವುಗಳನ್ನು ಪುನರುಜ್ಜೀವನಗೊಳಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದ್ದರು. ನೀರಾವರಿ ಬಗ್ಗೆ ಅಪಾರ ತಿಳಿವಳಿಕೆ ಹೊಂದಿದ್ದ ಅವರು ಬೋಸಗಾ ಕೆರೆ ಸುತ್ತಲೂ ಉದ್ಯಾನ ನಿರ್ಮಿಸುವ ಹಾಗೂ ಅಲ್ಲಿಂದ ಅಪ್ಪನ ಕೆರೆಗೆ ನೀರು ಹರಿಸುವ ಬಗ್ಗೆ ಚಿಂತನೆ ನಡೆಸಿದ್ದರು. ಅವರ ಪ್ರಯತ್ನದ ಫಲವಾಗಿ ಪಾಲಿಗೆ ಕಲಬುರಗಿ ನಗರದಲ್ಲಿನ ಐತಿಹಾಸಿಕ ಬಾವಿಗಳ ಸಮೀಕ್ಷೆ ನಡೆಸಿತ್ತು.

‘ಕಲ್ಯಾಣಿಗಳಿಲ್ಲ ಪುನರುಜ್ಜೀವನ ಭಾಗ್ಯ’ ಕಾಳಗಿ: ಪಟ್ಟಣ ಐತಿಹಾಸಿಕ ಕ್ಷೇತ್ರವಾಗಿದೆ. ಇಲ್ಲಿ ಹಲವು ಕಲ್ಯಾಣಿಗಳು ಕಾಣ ಸಿಗುತ್ತವೆ. ಅವುಗಳಲ್ಲಿ ಬಿರು ಬೇಸಿಗೆಯಲ್ಲೂ ನೀರು ಬತ್ತಿದ ಉದಾಹರಣೆ ಇಲ್ಲ. ಆದರೆ ಪುನರುಜ್ಜೀವನದ ಕಾರ್ಯ ಮಾತ್ರ ಇಲ್ಲಿವರೆಗೂ ಯಾವ ಆಡಳಿತವೂ ಮಾಡಿಲ್ಲ. ಹೀಗಾಗಿ ಗಡಗಿ ಬಾವಿ (ಶ್ರೀರಾಮ ತೀರ್ಥ ಪುಷ್ಕರಣಿ) ಸುತ್ತಲಿನ ಗೋಡೆ ಕಳಚಿ ಒಳ ಬೀಳುತ್ತಿದೆ. ಕಲ್ಲು ಮಣ್ಣಿನ ಹೂಳು ತುಂಬಿಕೊಳ್ಳುತ್ತಿದೆ. ಜೇಕು ಏಳತೊಡಗಿ ಝರಿಗಳು ಮುಚ್ಚಿಕೊಳ್ಳುತ್ತಿವೆ. ವಿಷ್ಣುತೀರ್ಥದ ಕಲ್ಯಾಣಿಯೊಳಗೆ ಭವ್ಯ ಶಿಲ್ಪಕಲಾ ವೈಭವದ ಮಂದಿರವಿದೆ. ಸುತ್ತಲು ನೀರು ಆವರಿಸಿದೆ. ನೀರಿನ ಪ್ರಮಾಣ ದಿನೇ ದಿನೇ ಕಡಿಮೆಯಾಗುತ್ತಿದೆ. ಊರ ನಡುವಿನ ಸರಸ್ವತಿ ಕಲ್ಯಾಣಿಯೊಳಗೆ ಸಿಕ್ಕ ಸಿಕ್ಕವರು ತ್ಯಾಜ್ಯ ಎಸೆದು ತಿಪ್ಪೆಗುಂಡಿಯಂತೆ ಮಾಡಿದ್ದಾರೆ. ಗೋಟೂರ ಅಗಸಿ ಬಳಿಯ ಸಂಜೀವಿನಿ ಕಲ್ಯಾಣಿ ಮುಚ್ಚಿ ಹಾಕಿ ಇದೇ ಜಾಗದಲ್ಲಿ ಅಂಗನವಾಡಿ ಕಟ್ಟಡವನ್ನು ಕಟ್ಟಲಾಗಿದೆ. ಮೋಘಾ ಗ್ರಾಮದ ಹೊರವಲಯದ ರಾಮಲಿಂಗೇಶ್ವರ ಕಲ್ಯಾಣಿ ಸುತ್ತಲಿನ ಕಲ್ಲಿನ ಗೋಡೆ ದಿನೇ ದಿನೇ ಬೀಳುತ್ತಿದೆ. ಇದರಿಂದ ನೀರು ಕಲುಷಿತಗೊಳ್ಳುತ್ತಿದೆ. ಒಟ್ಟಾರೆ ಕಾಳಗಿ ತಾಲ್ಲೂಕಿನಲ್ಲಿ ಅದೆಷ್ಟೊ ಕಲ್ಯಾಣಿಗಳಿವೆ. ಆದರೆ ಸರ್ಕಾರದಿಂದ ಅವು ನಿರ್ಲಕ್ಷ್ಯಕ್ಕೊಳಗಾಗಿ ಅನಾಥವಾಗುತ್ತಿವೆ.

ಕಥೆ ಹೇಳುವ ಶಾಸನಗಳು ಹೀರಾಪುರದಲ್ಲಿ 12 ಶಿಲಾ ಶಾಸನಗಳಿವೆ. ಬಹುತೇಕ ಶಾಸನಗಳು ಪರ್ಷಿಯನ್ ಭಾಷೆಯಲ್ಲಿವೆ. ಇಲ್ಲಿನ ಶಂಕರಲಿಂಗ ಬಾವಿಯ ಗೋಡೆ ಮೇಲೆ ಪರ್ಷಿಯನ್‌ ಭಾಷೆಯಲ್ಲಿರುವ ಶಾಸನ ಕಾಣಬಹುದು. 1656ರಲ್ಲಿ ಇದನ್ನು ಕೆತ್ತಿರುವುದು ತಿಳಿದು ಬರುತ್ತದೆ. ವೈಶ್ಯ ಸಮುದಾಯಕ್ಕೆ ಸೇರಿದವರೊಬ್ಬರು ದೇವಾಲಯಗಳನ್ನು ನಿರ್ಮಿಸಿದರು. ಭಕ್ತರ ಬಾಯಾರಿಕೆ ನೀಗಿಸಲು ಬಾವಿ ನಿರ್ಮಿಸಿದ್ದರು ಎಂದು ಶಾಸನ ತಿಳಿಸುತ್ತದೆ. ಇಲ್ಲಿ ಗೌತಪ್ಪ ಬಾವಿಗೆ ಸೇರಿದ ಶಾಸನವೊಂದಿದೆ. ಇದು 1728ರಿಂದ 1733ರ ಅವಧಿಯಲ್ಲಿ ರಚನೆಯಾದ ಕುರಿತು ತಿಳಿದುಬರುತ್ತದೆ. ಗೌತಮ ಎನ್ನುವ ವ್ಯಕ್ತಿ ಈ ಬಾವಿ ನಿರ್ಮಿಸಿದ ಕುರಿತು ಮಾಹಿತಿ ಇದೆ. ಇನ್ನೊಂದು ಶಾಸನ ರಂಗೋಜಿ ಎನ್ನುವ ವ್ಯಕ್ತಿ ಬಾವಿ ಹಾಗೂ ಛತ್ರಗಳನ್ನು ನಿರ್ಮಿಸಿದರು ಎಂದು ತಿಳಿಸುತ್ತದೆ. ಬಹುತೇಕ ಶಾಸನಗಳು ಬಾವಿಗಳ ಕಥೆಗಳನ್ನು ಹೇಳುತ್ತವೆ ಅವೂ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಆಗಬೇಕಾದ ಕೆಲಸಗಳು ಒತ್ತುವರಿ ತೆರವಿಗೆ ಕ್ರಮ ಬಾವಿಗಳ ಸುತ್ತ ಬೆಳೆದ ಗಿಡ–ಗಂಟಿ ತೆರವು ಬಾವಿಗಳ ಶಿಥಿಲಗೊಂಡ ಭಾಗಗಳ ಮರು ನಿರ್ಮಾಣ ಬಾವಿಯಲ್ಲಿಯ ಹೂಳು ತೆಗೆಯುವುದು ತ್ಯಾಜ್ಯ ಎಸೆಯುವುದನ್ನು ತಡೆದು ಗ್ರಿಲ್ ಅಳವಡಿಸುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT