ಸೋಮವಾರ, ಆಗಸ್ಟ್ 2, 2021
27 °C
ಅಖಿಲ ಭಾರತ ವೀರಶೈವ ಮಹಾಸಭೆಯ ಮುಖಂಡರ ಸಭೆಯಲ್ಲಿ ನಿರ್ಧಾರ

ಹಾಸ್ಟೆಲ್‌ಗಾಗಿ ಶೀಘ್ರ ದೇಣಿಗೆ ಸಂಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‌ನಗರದಲ್ಲಿ ವಿದ್ಯಾರ್ಥಿನಿಯರಿಗಾಗಿ ನಿರ್ಮಿಸಲು ಉದ್ದೇಶಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ಹಾಸ್ಟೆಲ್‌ಗಾಗಿ ಮುಂದಿನ 15 ದಿನಗಳಲ್ಲಿ ಹಾಲಿ ಮತ್ತು ಮಾಜಿ ಶಾಸಕರಿಂದ ದೇಣಿಗೆ ಸಂಗ್ರಹಿಸಲು ಶನಿವಾರ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.

ಹಾಸ್ಟೆಲ್‌ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲು ಕರೆದ ಸಭೆಯಲ್ಲಿ ಜಿಲ್ಲೆಯ ಹಾಲಿ ಮತ್ತು ಮಾಜಿ ಶಾಸಕರು, ಸಮಾಜದ ಮುಖಂಡರು ಮತ್ತು ಮಹಾಸಭೆಯ ಪದಾಧಿಕಾರಿಗಳು ಪಾಲ್ಗೊಂಡರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹಾಸ್ಟೆಲ್‌ ಸಮಿತಿ ಮುಖ್ಯಸ್ಥರೂ ಆದ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ‘ಮಹಾಸಭಾದ ಕಲಬುರ್ಗಿ ಜಿಲ್ಲಾ ಘಟಕದಿಂದ ಹಾಸ್ಟೆಲ್‌ಗಾಗಿ ಟೆಂಡರ್ ಕರೆಯಲಾಗಿತ್ತು. ಕಟ್ಟಡದ ಅಂದಾಜು ವೆಚ್ಚ ₹ 4.5 ಕೋಟಿ. ಅದಕ್ಕಾಗಿ ನಮ್ಮ ಬಳಿ ₹ 1.5 ಕೋಟಿ ಇರಬೇಕು. ಅದಕ್ಕಾಗಿ ತಲಾ ₹ 5 ಲಕ್ಷ ದೇಣಿಗೆ ಸಂಗ್ರಹಿಸಲು ಉದ್ದೇಶಿಸಲಾಗಿತ್ತು. ಆದಷ್ಟು ಬೇಗ ಹಾಲಿ ಮತ್ತು ಮಾಜಿ ಶಾಸಕರಿಂದ ಸಂಗ್ರಹಿಸಬೇಕು’ ಎಂದರು.‌

ಸಭೆಯಲ್ಲಿದ್ದ ಎಲ್ಲ ಮುಖಂಡರೂ ಇದಕ್ಕೆ ಸಹಮತ ವ್ಯಕ್ತಪಡಿಸಿದರು. ಮಹಾಸಭೆಯ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ ಅವರು, ಶಾಸಕ ದರ್ಶನಾಪುರ ಅವರು ₹ 5 ಲಕ್ಷ ದೇಣಿಗೆ ಕೊಟ್ಟ ರಸೀದಿ ಪ್ರದರ್ಶಿಸಿದರು.

ಟೆಂಡರ್‌: ಹಾಸ್ಟೆಲ್‌ನ ಟೆಂಡರ್‌ನಲ್ಲಿ 6 ಜನ ಭಾಗವಹಿಸಿದ್ದರು. ಅದರಲ್ಲಿ ಕಡಿಮೆ ಬಿಡ್ ಮಾಡಿದ (₹ 3.51 ಕೋಟಿ) ಒಬ್ಬರನ್ನು ಆಯ್ಕೆ ಮಾಡಲಾಯಿತು. ಇದರ ಬಗ್ಗೆ ಅಂತಿಮ ನಿರ್ಣಯವನ್ನು ಮಹಾಸಭೆಯ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅವರ ಗಮನಕ್ಕೆ ತಂದು ಕೈಗೊಳ್ಳಲು ತೀರ್ಮಾನಿಸಲಾಯಿತು. ಕಟ್ಟಡಕ್ಕೆ ಶಾಮನೂರು ಶಿವಶಂಕರಪ್ಪ ಅವರಿಂದ ₹ 50 ಲಕ್ಷ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಘಟಕದಿಂದ ಧನ ಸಹಾಯಕ್ಕಾಗಿ ಮನವಿ ಮಾಡಲಾಯಿತು.

‌ಶಾಸಕರಾದ ದತ್ತಾತ್ರೇಯ ಸಿ. ಪಾಟೀಲ ರೇವೂರ, ಚಂದ್ರಶೇಖರ ಪಾಟೀಲ ಹುಮನಾಬಾದ್, ಮಾಜಿ ಶಾಸಕರಾದ ಬಿ.ಆರ್. ಪಾಟೀಲ, ಅಲ್ಲಮಪ್ರಭು ಪಾಟೀಲ, ದೊಡ್ಡಪ್ಪಗೌಡ ಪಾಟೀಲ, ಅಮರನಾಥ ಪಾಟೀಲ, ಹಿರಿಯರಾದ ಬಸವರಾಜ ಭೀಮಳ್ಳಿ, ಅಮರನಾಥ ಪಾಟೀಲ, ಬಸವರಾಜ ದೇಶಮುಖ, ಶಿವರಾಜ ಪಾಟೀಲ ರದ್ದೇವಾಡಗಿ, ಕಲ್ಯಾಣರಾವ ಪಾಟೀಲ, ಅರುಣಕುಮಾರ ಪಾಟೀಲ, ನೀಲಕಂಠ ಮೂಲಗೆ, ಡಾ.ಶರಣ ಪಾಟೀಲ ಹಾಗೂ ಗುತ್ತಿಗೆದಾರರು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು