ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಹಾರ ಯಾಕೆ ಕೊಟ್ಟಿಲ್ಲ ಯಾಕೆ’ ಜಿ.ಪಂ ಅಧ್ಯಕ್ಷೆಗೆ ಸಂತ್ರಸ್ತರ ಪ್ರಶ್ನೆ

Last Updated 21 ಅಕ್ಟೋಬರ್ 2020, 16:39 IST
ಅಕ್ಷರ ಗಾತ್ರ

ಲೋಕಾಪುರ: ಪಟ್ಟಣ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಸುರಿದ ಭಾರಿಮಳೆಗೆ ಮನೆಗಳಿಗೆ ಹಾನಿಯಾಗಿದೆ. ಹೊಬಳಿ ವ್ಯಾಪ್ತಿಯಲ್ಲಿ ಸುಮಾರು 232 ಮನೆಗಳಿಗೆ ಹಾನಿಯಾಗಿದ್ದು, ಸಮೀಕ್ಷೆ ಕಾರ್ಯ ಮುಂದುವರೆದಿದೆ ಎಂದು ಉಪತಹಶೀಲ್ದಾರ್ ಮಹೇಶ ಪಾಂಡವ ತಿಳಿಸಿದ್ದಾರೆ. ಬಿಟ್ಟುಬಿಡದೆ ಸುರಿದ ಮಳೆಗೆ ಮಣ್ಣಿನ ಮನೆಗಳು ನೆನೆದು ಕುಸಿದು ಬಿದ್ದಿವೆ. ಅನೇಕ ಮನೆಗಳು ಸೋರುತ್ತಿದ್ದು, ಇದರಿಂದ ಜನರ ಆತಂಕ ಹೆಚ್ಚಾಗಿದೆ. ಹಾನಿಗೀಡಾದ ಮನೆಗಳ ಸಮೀಕ್ಷೆ ಕಾರ್ಯ ನಡೆದಿದ್ದು, ಮಳೆ, ಗಾಳಿ ರಭಸಕ್ಕೆ ಕೆಲವು ಮನೆಗಳ ತಗಡಿನ ಶೀಡುಗಳು ಕಿತ್ತುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾಲಿಂಗಪುರ: ಮಹಾಲಿಂಗಪುರ ಭಾಗದಲ್ಲಿ ಸುರಿಯುತ್ತಿರುವ ಮಳೆಯು ಹಲವು ಆವಾಂತರಗಳನ್ನು ಸೃಷ್ಟಿಸಿದೆ.

ಮಂಗಳವಾರ ಮಧ್ಯಾಹ್ನದಿಂದ ಸಂಜೆವರೆಗೆ ಸುರಿದ ಮಳೆಯು ವಿವಿಧ ಗ್ರಾಮಗಳಿಂದ ವಾರದ ಸಂತೆಗೆ ಆಗಮಿಸಿದ್ದ ಗ್ರಾಹಕರು, ರೈತರು ಮತ್ತು ವ್ಯಾಪಾರಸ್ಥರನ್ನು ಹೈರಾಣಾಗಿಸಿತು. ಮಳೆಯಿಂದಾಗಿ ಡಬಲ್ ರಸ್ತೆಯ ಇಕ್ಕೆಲಗಳಲ್ಲಿಯ ತಗ್ಗಿನಲ್ಲಿ ನೀರು ಸಂಗ್ರಹವಾಯಿತು.

ಮಳೆಯಿಂದಾಗಿ ಬಸವವೃತ್ತದಲ್ಲಿ, ಜವಳಿ ಬಜಾರದ ಡಾ. ವಸಂತ ಮಮದಾಪೂರ ಆಸ್ಪತ್ರೆಯ ಹತ್ತಿರ ಸೇರಿದಂತೆ ವಿವಿಧ ಹಲವು ತಗ್ಗು ಪ್ರದೇಶಗಳು ಜಲಾವೃತವಾಯಿತು.

ಸ್ಮಶಾನ ಜಲಾವೃತ : ಪಟ್ಟಣದ ಹಿಂದೂ ರುದ್ರಭೂಮಿಯ ಪಕ್ಕದಲ್ಲಿನ ಚರಂಡಿಯು ತುಂಬಿ, ರಸ್ತೆಯ ಮೇಲೆ ನೀರು ಹರಿದು, ಚರಂಡಿ ನೀರು ಹಿಂದೂ ಸ್ಮಶಾಸನಕ್ಕೆ ನುಗ್ಗಿದೆ. ನಿರಂತರವಾಗಿ ಮಳೆಯಾಗುತ್ತಿರುವ ಕಾರಣ ಸ್ಮಶಾನವು ಜಲಾವೃತವಾಗಿ ಶವ ಸಂಸ್ಕಾರಕ್ಕೆ ಬರುವವರಿಗೆ ಬಹಳ ತೊಂದರೆಯುಂಟಾಗಿದೆ.

ಪಟ್ಟಣದ ಬಸ್ ನಿಲ್ದಾಣದ ಮುಂದಿನ ರಸ್ತೆಯ ಪಕ್ಕದಲ್ಲಿ ಚರಂಡಿ ಇಲ್ಲದ ಕಾರಣ, ಪ್ರತಿಬಾರಿ ಮಳೆಯಾದಾಗಲೂ ರಬಕವಿ ರಸ್ತೆಯ ಜಿ.ಎಲ್. ಬಿ.ಸಿ. ಕಚೇರಿಯಿಂದ ಬಸ್ ನಿಲ್ದಾಣವರೆಗಿನ ಎಲ್ಲಾ ಚರಂಡಿ ನೀರು ಬಸ್ ನಿಲ್ದಾಣಕ್ಕೆ ನುಗ್ಗುತ್ತಿದೆ. ತೇರದಾಳ: ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆ ನೀರು ಮಂಗಳವಾರ ರಾತ್ರಿ ತೇರದಾಳ ಹಾಗೂ ಸಮೀಪದ ಸಸಾಲಟ್ಟಿ ಗ್ರಾಮದ ಮನೆಗಳಿಗೆ ನುಗ್ಗಿದೆ. ಪರಿಣಾಮ ಕುಟುಂಬದವರು ಪರದಾಡುವಂತಾಯಿತು.

ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿ ಹಾಯ್ದು ಹೋಗುವ ಚರಂಡಿಯನ್ನು ಸ್ಥಳೀಯ ಪುರಸಭೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಮಳೆ ನೀರು ಮನೆಗಳಿಗೆ ನುಗ್ಗಿದೆ ಎಂಬುದು ಸ್ಥಳೀಯರ ಆರೋಪ. ಮಂಗಳವಾರ ಸಂಜೆ ಸುರಿದ ಮಳೆಯ ನೀರು ಏಕಾಏಕಿ ಸುಮಾರು 15ಕ್ಕೂ ಅಧಿಕ ಮನೆಗಳಿಗೆ ನುಗ್ಗಿದ್ದರಿಂದ ಅಲ್ಲಿನ ನಿವಾಸಿಗಳು ಆಸರೆಗಾಗಿ ಪರದಾಡುವಂತಾಯಿತು.

ಬ್ರಹ್ಮಾನಂದ ಆಶ್ರಮ, ಹಿಡಕಲ್ ರಸ್ತೆ, ಗುಮ್ಮಟಗಲ್ಲಿ ಮೂಲಕ ಪ್ರವೇಶಿಸಿದ ಮಳೆ ನೀರು ಭಜಂತ್ರಿ ಗಲ್ಲಿಯ ದೇವಸ್ಥಾನ ಸೇರಿದಂತೆ ಅಂಬೇಡ್ಕರ್ ವೃತ್ತ ದಾಟಿ ರಭಸವಾಗಿ ಹರಿದು ಮನೆಗಳಿಗೆ ನುಗ್ಗಿದೆ.ಸಮೀಪದ ಸಸಾಲಟ್ಟಿಯಲ್ಲಿ ಮಳೆಯ ನೀರಿನಿಂದ ಹಳ್ಳ ತುಂಬಿ ಪರಿಶಿಷ್ಟರ ಕೇರಿಯ 29 ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿನ ಕಿರಿದಾದ ಸೇತುವೆ ಮೂಲಕ ನೀರು ಹರಿದು ಹೋಗುವಂತೆ ಸ್ಥಳೀಯ ಮುಖಂಡರು ರಾತ್ರಿ ಜೆಸಿಬಿ ಯಂತ್ರದ ಸಹಾಯದಿಂದ ವ್ಯವಸ್ಥೆ ಮಾಡಿದ್ದು, ವೃದ್ಧರು, ಮಹಿಳೆಯರು ಹಾಗೂ ಮಕ್ಕಳು ರಾತ್ರಿಯಿಡೀ ತೊಂದರೆ ಅನುಭವಿಸಿದ್ದಾರೆ. ಪಾತ್ರೆ, ಧಾನ್ಯ ಹಾಗೂ ಹಾಸಿಗೆ ನೀರು ಪಾಲಾಗಿವೆ. ಸ್ಥಳಕ್ಕಾಗಮಿಸಿದ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಖವಟಕೊಪ್ಪ ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT