ಬುಧವಾರ, ಸೆಪ್ಟೆಂಬರ್ 22, 2021
21 °C

ಕಲಬುರ್ಗಿ ಜಿಲ್ಲೆಗೆ ಬಿಜೆಪಿಯಿಂದ ಅನ್ಯಾಯ: ಪ್ರಿಯಾಂಕ್‌ ಖರ್ಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಕಲಬುರ್ಗಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಿಲ್ಲ. ಡಬಲ್‌ ಎಂಜಿನ್‌ ಸರ್ಕಾರಗಳಲ್ಲಿ ಈ ಜಿಲ್ಲೆಗೆ ಅನ್ಯಾಯ ನಿರಂತರವಾಗಿ ಮುಂದುವರೆದಿದೆ’ ಎಂದು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ದೂರಿದ್ದಾರೆ.

‘ಹಿಂದೆ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಕಲ್ಯಾಣ‌ ಕರ್ನಾಟಕ ಪ್ರದೇಶಕ್ಕೆ ಅದರಲ್ಲೂ ಕಲಬುರ್ಗಿ ಜಿಲ್ಲೆಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸದೇ ಅನ್ಯಾಯವೆಸಗಿದ್ದರು. ಈಗ ಅವರ ಉತ್ತರಾಧಿಕಾರಿ ಬಸವರಾಜ ಬೊಮ್ಮಾಯಿ‌ ಅವರೂ ಸಹ ಮತ್ತೊಮ್ಮೆ ಈ ಪ್ರದೇಶವನ್ನು ಕಡೆಗಣಿಸಿ, ಅನ್ಯಾಯದ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಬಿಜೆಪಿ ಸರ್ಕಾರ ಕಲಬುರ್ಗಿ ಜಿಲ್ಲೆಗೆ ಮತ್ತೊಮ್ಮೆ ದ್ರೋಹ ಬಗೆದಿದೆ’ ಎಂದು ಅವರು ಹರಿಹಾಯ್ದಿದ್ದಾರೆ.

‘ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಂಟು ಸಚಿವರನ್ನು ಹೊಂದಿದ್ದ ಕಲಬುರ್ಗಿ ಜಿಲ್ಲೆ ಈಗ ಒಬ್ಬರೇ ಒಬ್ಬ ಸಚಿವರೂ ಇಲ್ಲದೇ ಅನಾಥವಾಗಿದೆ. ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ನಿರ್ಲಕ್ಷ್ಯ, ಬಿಜೆಪಿ ಸಂಸದ ಮತ್ತು ಶಾಸಕರ ಅಸಹಾಯಕತೆಯನ್ನೂ ತೋರಿಸುತ್ತಿದೆ’ ಎಂದು ಟೀಕಿಸಿದ್ದಾರೆ.

‘ಲೋಕಸಭೆಯ ಚುನಾವಣೆ ವೇಳೆ ಹಿರಿಯ ನಾಯಕ‌ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿದರೆ ಕಲಬುರ್ಗಿ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಳೆ ಹರಿಸುವುದಾಗಿ ಬಿಜೆಪಿ ಹೇಳಿ ಜನರಿಂದ ಮತ ಪಡೆದಿತ್ತು. ಆದರೆ, ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ ಹಲವಾರು ಯೋಜನೆಗಳು ವಾಪಸ್‌ ಹೋದರೂ ಈ ಮಹಾನ್‌ ನಾಯಕರು ದನಿ ಎತ್ತಲಿಲ್ಲ’ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರ್ಕಾರ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ನಿಗದಿತ ಅನುದಾನ ಬಿಡುಗಡೆ ಮಾಡಲಿಲ್ಲ. ನೆರೆ ಪೀಡಿತ ಜನರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ. ಕೊರೊನಾ ಸಾಂಕ್ರಾಮಿಕದಿಂದ ಜಿಲ್ಲೆಯ ಜನರು ಬೆಡ್, ಆಕ್ಸಿಜನ್, ಲಸಿಕೆ, ಅಂಬುಲೆನ್ಸ್ ಕೊರತೆಯಿಂದ ನರಳಿದರು. ಈ ಸಮಯದಲ್ಲಿ ಬಿಜೆಪಿ ಸಂಸದ ಮತ್ತು ಜಿಲ್ಲೆಯ ಬಿಜೆಪಿ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಮಾಡಲಿಲ್ಲ ಎಂದು ಅವರು ದೂರಿದ್ದಾರೆ.

‘ಈಗ ಜಿಲ್ಲೆಗೆ ಸಂಪುಟದಲ್ಲಿ ಸ್ಥಾನ ನೀಡದಿರುವಾಗಲೂ ಈ ಮಹಾನ್‌ ನಾಯಕ ಬಾಯಿ ಬಿಡುತ್ತಿಲ್ಲ. ಆ ನಾಯಕನಿಂದ ಮತ್ತೇನನ್ನು ನಿರೀಕ್ಷೆ ಮಾಡಬಹುದು’ ಎಂದು ಅವರು ಪರೋಕ್ಷವಾಗಿ ಸಂಸದ ಡಾ.ಉಮೇಶ ಜಾಧವ ಅವರ ವಿರುದ್ಧ ಹರಿಹಾಯ್ದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು