ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆ: ಲಾಭ ಪಡೆಯಲು ರೈತರ ನಿರುತ್ಸಾಹ

ಬಷೀರಅಹ್ಮದ್ ನಗಾರಿ
Published 27 ಫೆಬ್ರುವರಿ 2024, 6:23 IST
Last Updated 27 ಫೆಬ್ರುವರಿ 2024, 6:23 IST
ಅಕ್ಷರ ಗಾತ್ರ

ಕಲಬುರಗಿ: ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಗೂ ಕಲಬುರಗಿ–ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌(ಕೆವೈಡಿಸಿಸಿ ಬ್ಯಾಂಕ್‌) ವ್ಯಾಪ್ತಿಯ ರೈತರು ಉತ್ಸಾಹ ತೋರುತ್ತಿಲ್ಲ.

ಕೃಷಿ ಹಾಗೂ ಕೃಷಿ ಸಂಬಂಧಿತ ಮಧ್ಯಮಾವಧಿ ಸುಸ್ತಿ ಸಾಲಗಳ ಅಸಲು ಪಾವತಿಸಿದರೆ, ಆ ಸಾಲಗಳ ಮೇಲಿನ ಬಡ್ಡಿ ಮನ್ನಾ ಮಾಡುವುದಾಗಿ ರಾಜ್ಯ ಸರ್ಕಾರ 2024ರ ಜ.20ರಂದು ಆದೇಶ ಹೊರಡಿಸಿತ್ತು. ಈ ಯೋಜನೆಯಡಿ ಕೆವೈಡಿಸಿಸಿ ಬ್ಯಾಂಕ್‌ನ 10 ಶಾಖೆಗಳ 767 ರೈತರು ಫಲಾನುಭವಿಗಳಾಗಿದ್ದು, ಒಟ್ಟು ₹ 38.29 ಕೋಟಿಯಷ್ಟು ಸುಸ್ತಿ ಸಾಲ ಮರು ಪಾವತಿಸುವ ಗುರಿ ಹೊಂದಲಾಗಿತ್ತು.

ಆದರೆ, ಫೆ.26ರ ಅಂತ್ಯದ ತನಕ ಕೇವಲ 206 ರೈತರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದಿದ್ದಾರೆ. ಬ್ಯಾಂಕ್‌ಗೆ ಅಸಲಿನ ರೂಪದಲ್ಲಿ ಒಟ್ಟು ₹ 7.86 ಕೋಟಿ ಪಾವತಿಸಿದ್ದಾರೆ. ಇನ್ನುಳಿದ 561 ರೈತರು ಈ ಯೋಜನೆಯ ಲಾಭ ಪಡೆಯಲು ಉತ್ಸಾಹವೇ ತೋರಿಲ್ಲ.

ಈ ಯೋಜನೆಯ ಲಾಭ ಪಡೆಯಲು ಫೆ.29ರ ಒಳಗೆ ಸಾಲದ ಅಸಲು ಮೊತ್ತವನ್ನು ರೈತರು ಪಾವತಿಸಬೇಕಿದ್ದು, ಅದಕ್ಕೆ ಮಂಗಳವಾರ ಹೊರತು ಪಡಿಸಿ ಕೇವಲ ಎರಡು ದಿನಗಳಷ್ಟೇ ಉಳಿದಿವೆ.

ಜೇವರ್ಗಿ, ನೆಹರೂ ಗಂಜ್‌ ಶಾಖೆ ಮುಂದೆ:

ಈ ಯೋಜನೆಯಡಿ ಈ ತನಕ ಒಟ್ಟು ಫಲಾನುಭವಿ ರೈತರ ಪೈಕಿ ಶೇ 20.92ರಷ್ಟು ಮಂದಿ ಬ್ಯಾಂಕ್‌ಗೆ ಅಸಲು ಪಾವತಿಸಿದ್ದಾರೆ. ಇನ್ನುಳಿದ, ಶೇ 79.08ರಷ್ಟು ಫಲಾನುಭವಿ ರೈತರು ಯೋಜನೆ ಸದ್ಬಳಕೆಗೆ ಆಸಕ್ತಿ ತೋರಿಲ್ಲ.

ಈ ಯೋಜನೆಯಡಿ ಸಾಲಪಾವತಿಸಲು ಕೆವೈಡಿಸಿಸಿ ಬ್ಯಾಂಕ್‌ನ ಜೇವರ್ಗಿ ಶಾಖೆ ವ್ಯಾಪ್ತಿಯ ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಒಟ್ಟು 170 ಸಾಲಗಾರ ರೈತರ ಪೈಕಿ, 46 ರೈತರು ಅಸಲು ಪಾವತಿಸಿದ್ದಾರೆ.

ಇನ್ನು, ಮೊತ್ತದ ಲೆಕ್ಕಾಚಾರದಲ್ಲಿ ಬ್ಯಾಂಕ್‌ ನೆಹರೂ ಗಂಜ್‌ ಶಾಖೆಯಲ್ಲಿ ಅತಿ ಹೆಚ್ಚು ಅಂದರೆ ₹ 1.22 ಕೋಟಿ ಈ ಯೋಜನೆಯಡಿ ಜಮೆಯಾಗಿದೆ.

‘ಈ ಯೋಜನೆಯ ಕುರಿತು ಬ್ಯಾಂಕ್‌ನ ಹತ್ತೂ ಶಾಖೆಗಳಲ್ಲಿ  ಶಾಖಾ ವ್ಯವಸ್ಥಾಪಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ, ಜ.24ರಿಂದ ಸುಸ್ತಿ ಸಾಲಗಾರರಿಗೆ ಅಸಲು ಪಾವತಿಸಲು ಮನವೊಲಿಸುವ ಕಾರ್ಯವನ್ನೂ ಮಾಡಲಾಗಿದೆ’ ಎಂದು ಕೆ–ವೈಡಿಸಿಸಿ ಬ್ಯಾಂಕ್‌ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸಾಲ ಪಾವತಿ ಗಡುವು ವಿಸ್ತರಣೆಯ ಪ್ರಸ್ತಾಪವಿಲ್ಲ. ಹೀಗಾಗಿ ರೈತರು ಕಷ್ಟವಾದರೂ ಸರಿ ಸಾಲ ತುಂಬಬೇಕು. ಇದರಿಂದ ಬ್ಯಾಂಕ್‌ಗಿಂತ ರೈತರಿಗೆ ಹೆಚ್ಚಿನ ಲಾಭವಿದೆ ಎಂಬುದನ್ನು ಅರಿಯಬೇಕು
ಸೋಮಶೇಖರ ಗೋನಾಯಕ ಅಧ್ಯಕ್ಷ ಕೆವೈಡಿಸಿಸಿ ಬ್ಯಾಂಕ್‌
ಸದ್ಯ ರೈತರ ಬಳಿ ದುಡ್ಡಿಲ್ಲ. ಹೀಗಾಗಿ ಬಡ್ಡಿ ಮನ್ನಾಯೋಜನೆಯಡಿ ಅಸಲು ಪಾವತಿಗೆ ಸರ್ಕಾರ ಕನಿಷ್ಠ ಮೂರು ತಿಂಗಳು ಕಾಲಾವಕಾಶ ವಿಸ್ತರಿಸಬೇಕು
ಬಸವರಾಜ ಬೂದಿಹಾಳ ಅಧ್ಯಕ್ಷ ಕಲಬುರಗಿ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT