ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ: ಪಿಡಿಒಗಳ ವಿರುದ್ಧ ತನಿಖೆಗೆ ಸೂಚನೆ

Last Updated 25 ಜುಲೈ 2021, 3:56 IST
ಅಕ್ಷರ ಗಾತ್ರ

ವಾಡಿ: 14ನೇ ಹಣಕಾಸು ಅನುದಾನ ದುರುಪಯೋಗ ಸೇರಿದಂತೆ ವಿವಿಧ ಯೋಜನೆಗಳ ಸಂಬಂಧ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿರುವ ತಾಲ್ಲೂಕಿನ ಮೂವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಅಗತ್ಯ ಕ್ರಮ ತೆಗದುಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಡಳಿತ-2 ನಿರ್ದೇಶಕರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಅವರಿಗೆ ಸೂಚಿಸಿದ್ದಾರೆ.

ಕಮರವಾಡಿ ಪಿಡಿಒ ಶೇಖಪ್ಪ ಶಂಕು, ದಿಗ್ಗಾಂವ ಪಿಡಿಒ ವೇದಾಂತ ತುಪ್ಪದ ಹಾಗೂ ಯಾಗಾಪೂರ ಪಿಡಿಒ ಪಾರ್ವತಿ ಪೂಜಾರಿ ಅವರ ವಿರುದ್ಧ ಭ್ರಷ್ಟಾಚಾರದ ಆಪಾದನೆ ಕೇಳಿ ಬಂದಿದೆ. ಇವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು.

ಕಾಳಗಿ ತಾಲ್ಲೂಕಿನ ಹೆಬ್ಬಾಳ ಗ್ರಾ.ಪಂ ಗ್ರೇಡ್-2 ಕಾರ್ಯದರ್ಶಿ ಆಗಿರುವ ವೇದಾಂತ ತುಪ್ಪದ ಅವರು, ದಿಗ್ಗಾಂವ ಪಿಡಿಒ ಆಗಿದ್ದ ವೇಳೆ ₹ 69 ಲಕ್ಷ ಅನುದಾನ ದುರ್ಬಳಕೆಯ ಆರೋಪವಿದೆ. ಇದರಿಂದ ಏಪ್ರಿಲ್ 17ರಂದು ಅಮಾನತುಗೊಂಡಿದ್ದರು. ಆರೋಪದ ಮಧ್ಯೆಯೂ ಮತ್ತೆ ಮೇ 4ರಂದು ಸೇವೆಗೆ ನಿಯುಕ್ತಿಗೊಂಡಿದ್ದರು.

ಪ್ರಸ್ತುತ ಆಳಂದ ತಾಲ್ಲೂಕಿನ ಸುಂಟನೂರು ಗ್ರಾ.ಪಂ ಪಿಡಿಒ ಆಗಿರುವ ಪಾರ್ವತಿ ಪೂಜಾರಿ ಅವರು, ಯಾಗಾಪೂರ ಗ್ರಾ.ಪಂ. ಪಿಡಿಒ ಆಗಿದ್ದಾಗ ₹ 53 ಲಕ್ಷ ಅನುದಾನ ದುರ್ಬಳಕೆ ಮಾಡಿಕೊಂಡಿದ್ದರು ಎಂಬ ಆರೋಪವಿದೆ. ತನಿಖೆ ಪ್ರಗತಿಯಲ್ಲಿ ಇರುವಾಗಲೇ ಸುಂಟನೂರು ಗ್ರಾ.ಪಂ.ಗೆ ನಿಯೋಜನೆಗೊಂಡಿದ್ದಾರೆ. ₹ 7 ಲಕ್ಷ ದುರುಪಯೋಗ ಪಡಿಸಿಕೊಂಡ ಕಮರವಾಡಿ ಪಿಡಿಒ ಶೇಖಪ್ಪ ಶಂಕು ಅವರ ಮೇಲಿನ ಆರೋಪಗಳ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT