ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾಲಿಸ್ಟೀನ್ ಮೇಲೆ ಇಸ್ರೇಲ್ ದಾಳಿ ಖಂಡಿಸಿ ಪ್ರತಿಭಟನೆ

ತಕ್ಷಣ ಯುದ್ಧ ವಿರಾಮ ಘೋಷಿಸುವಂತೆ ಸಂಘಟನೆಗಳ ಮನವಿ
Published 14 ಡಿಸೆಂಬರ್ 2023, 15:56 IST
Last Updated 14 ಡಿಸೆಂಬರ್ 2023, 15:56 IST
ಅಕ್ಷರ ಗಾತ್ರ

ಕಲಬುರಗಿ: ಅಮೆರಿಕದ ಕುಮ್ಮಕ್ಕಿನಿಂದ ಪ್ಯಾಲಿಸ್ಟೀನ್ ಮೇಲೆ ನಡೆಸುತ್ತಿರುವ ದಾಳಿ ಹಾಗೂ ಜನಾಂಗೀಯ ಹತ್ಯಾಕಾಂಡವನ್ನು ಇಸ್ರೇಲ್ ತಕ್ಷಣ ನಿಲ್ಲಿಸಿ ಯುದ್ಧ ವಿರಾಮ ಘೋಷಿಸಬೇಕು ಎಂದು ಒತ್ತಾಯಿಸಿ ಸಿಟಿಜನ್ ಫೋರಂ ಫಾರ್ ಪೀಸ್ ಅಂಡ್ ಜಸ್ಟಿಸ್ ಸಂಘಟನೆಯ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದವರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರು ನಗರದಲ್ಲಿ ಗುರುವಾರ ಪ್ರತಿಭಟಿಸಿದರು.

ಸಂಘಟಕರು ಮೊದಲು ಗಂಜ್‌ನ ನಗರೇಶ್ವರ ಶಾಲೆಯಿಂದ ಜಗತ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಬೇಕಿತ್ತು. ಆದರೆ, ಪೊಲೀಸರು ಮೆರವಣಿಗೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಮಾನಿನಿಂದ ಕಚೇರಿ ಒಳಗಡೆ ಮೆರವಣಿಗೆ ಮೂಲಕ ತೆರಳಿ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆಯ ಮುಖಂಡರಾದ ಎಂ.ಬಿ. ಸಜ್ಜನ್, ಶರಣಬಸಪ್ಪ ಮಮಶೆಟ್ಟಿ, ‘ಗಾಜಾ‍ಪಟ್ಟಿಯಲ್ಲಿ ಅಕ್ಟೋಬರ್ 7ರಂದು ಇಸ್ರೇಲ್ ಸೇನೆಯು ನಡೆಸಿದ ದಾಳಿಯಿಂದಾಗಿ ಸುಮಾರು 19 ಪ್ಯಾಲಿಸ್ಟೀನಿಯರು ಸ್ಥಳಾಂತರಗೊಂಡಿದ್ದಾರೆ. 18,600 ಪ್ಯಾಲಿಸ್ಟೀನಿಯರನ್ನು ಇಸ್ರೇಲ್ ಸೇನೆಯು ಕೊಂದು ಹಾಕಿದೆ. 8,300 ಮಕ್ಕಳು ಹಾಗೂ 73 ಪತ್ರಕರ್ತರನ್ನು ಕೊಲ್ಲಲಾಗಿದೆ. ಗಾಜಾದ ಶೇ 90ರಷ್ಟು ಆಸ್ಪತ್ರೆಗಳನ್ನು ಮುಚ್ಚಿಸಲಾಗಿದೆ’ ಎಂದು ಟೀಕಿಸಿದರು.

ಅಲ್ಲಿನ ಶಾಲೆಗಳ ಮೇಲೆ ಇಸ್ರೇಲ್ ಸೇನೆಯು ಬಾಂಬ್ ದಾಳಿ ನಡೆಸಿ ಅನಾಗರಿಕತೆಯ ಗೆರೆಯನ್ನು ದಾಟಿದೆ. ವಿದ್ಯುತ್, ನೀರು ಹಾಗೂ ಔಷಧಗಳ ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಆಸ್ಪತ್ರೆಗಳು ಸ್ಮಶಾನಗಳಾಗಿ ಪರಿವರ್ತನೆಗೊಂಡಿವೆ. ಇತ್ತೀಚಿನ ಮಾನವ ಇತಿಹಾಸದಲ್ಲಿ ಮನುಕುಲಕ್ಕೆ ಇಂತಹ ಕುತ್ತು ಬಂದಿರಲಿಲ್ಲ. ಹಮಾಸ್ ಬಂಡುಕೋರರನ್ನು ಕೊಲ್ಲುವ ನೆಪದಲ್ಲಿ ಗಾಜಾದಲ್ಲಿ ನರಮೇಧ ನಡೆಸಲಾಗುತ್ತಿದೆ. ಅಮೆರಿಕ ಹಾಗೂ ಇಸ್ರೇಲ್ ದೇಶಗಳು ಈ ಭೂಮಿಯ ಮೇಲೆ ಪ್ಯಾಲಿಸ್ಟೀನಿಯರನ್ನು ಜನಾಂಗೀಯ ನಿರ್ನಾಮ ಮಾಡಲು ಮುಂದಾಗಿವೆ. ಇದನ್ನು ನಿಲ್ಲಿಸಲು ವಿಶ್ವಸಂಸ್ಥೆಯಲ್ಲಿ ಕದನ ವಿರಾಮದ ನಿರ್ಣಯ ಪ್ರಸ್ತಾವ ತಂದರೂ ಅಮೆರಿಕ ತನ್ನ ವಿಟೊ ಅಧಿಕಾರ ಪ್ರಯೋಗಿಸಿ ಪ್ರಸ್ತಾವವನ್ನು ತಿರಸ್ಕರಿಸಿದೆ. ತಾನು ಮಾನವ ಹಕ್ಕುಗಳ ಚಾಂಪಿಯನ್ ಎಂದು ಅಮೆರಿಕ ಹೇಳಿಕೊಳ್ಳುತ್ತಿದೆ. ಮತ್ತೊಂದೆಡೆ ಪ್ಯಾಲಿಸ್ಟೀನಿನಲ್ಲಿ ನರಮೇಧ ಬೆಂಬಲಿಸಿ ಇಸ್ರೇಲಿಗೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿರುವುದು ಅದರ ಇಬ್ಬಗೆಯ ನೀತಿಗೆ ಕನ್ನಡಿ ಹಿಡಿದಂತಾಗಿದೆ’ ಎಂದು ಟೀಕಿಸಿದರು.

ಭಾರತ ಸರ್ಕಾರವು ವಿಶ್ವಸಂಸ್ಥೆಯಲ್ಲಿ ಪ್ಯಾಲಿಸ್ಟೀನ್ ವಿರೋಧಿ ಧೋರಣೆ ತಳೆದಿರುವುದು ಸರಿಯಾದ ಕ್ರಮವಲ್ಲ. ಈಗಲಾದರೂ ಯುದ್ಧ ವಿರಾಮ ಘೋಷಿಸುವಂತೆ ಇಸ್ರೇಲ್‌ಗೆ ಭಾರತ ಸರ್ಕಾರ ಒತ್ತಾಯಿಸಬೇಕು ಎಂದು ಮನವಿ ಮಾಡಿದರು.

ಜಾವೀದ್ ಹುಸೇನ್, ಮೌಲಾನಾ ರಜಾಕ್, ಮೌಲಾನಾ ಅಬ್ದುಲ್ ವಾಹೆದ, ಹಾಫಿಸ್ ಶರೀಫ್ ಸಾಬ್, ರಿಜ್ವಾನ್ ಸಿದ್ದಿಕಿ, ಮೌಲಾನಾ ನಿಸಾರ್ ಖಾಸ್ಮಿ, ನಾಗಯ್ಯಾ ಸ್ವಾಮಿ, ಮೆಹಬೂಬ್ ಮಹಾರಾಜ, ದಿಲೀಪ್ ನಾಗೂರೆ, ಶೆಹಿನಾಜ್ ಅಖ್ತರ್, ಆಯಿಶಾ ಶಿಖಾರಿ, ಆರಕಿ ಟೆಕ್ ಅಸಾದ್, ಪ್ರೊ.ಯೂನುಸ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT