ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗುರುತಿಸಿ ಪ್ರಶಸ್ತಿ ನೀಡಿದ್ದು ಖುಷಿಯಾಗಿದೆ’

ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಕರಬಸಯ್ಯ ಯಲಮಾಮಡಿ ಆಯ್ಕೆ
Last Updated 18 ಆಗಸ್ಟ್ 2022, 16:22 IST
ಅಕ್ಷರ ಗಾತ್ರ

ನಂಬಿಗುಳ್ಳ ನಾಯಿ ಸಾಕ್ರಿ ಬಡದ್ಹಾಕ್ ಬ್ಯಾಡ್ರಿ
ಹಡಕಸಿ ಬರದಾತ್ ಹಟಗಾರ ನಾಯಿ
ಶಟಗೊಂಡ ಹೋಗ್ತಾದ್ ಸಿಂಪಿಗೇರ್ ನಾಯಿ
ಕಚಿಬಿಚಿ ಮಾಡ್ತಾದ್ ಕುಂಬಾರ ನಾಯಿ
ಕಾಲ್‌ಕಸಿದು ನೋಡ್ತದ್ ಕಂಬಾರ ನಾಯಿ

ಎಂಬ ಕಡಕೋಳ ಮಡಿವಾಳಪ್ಪನವರ ತತ್ವಪದ ಮತ್ತು
ಕಲಿ ಹತ್ತಿತೋ ಕಾಲ್ಮಣ ಕಲಿ
ಎಲ್ಲಾನು ಬಂತು ನಕಲಿ
ಆಸ್ತಿ ಆಸೆಗಾಗಿ ಮಕ್ಕಳು
ತಂದೆ ತಾಯಿಗೆ ಮೋಹ ಮಾಡೋದ ನಕಲಿ...

ಎಂಬ ಜಾನಪದ ಹಾಡುಗಳಿಂದ ಪ್ರಖ್ಯಾತಿ ಪಡೆದ ಚಿಂಚೋಳಿ ತಾಲ್ಲೂಕಿನ ಯಲಮಾಮಡಿ ಗ್ರಾಮದ 85ರ ಇಳಿವಯಸ್ಸಿನ ಗಾಯಕ ಕರಬಸಯ್ಯ ಶಂಕ್ರಯ್ಯ ಮಠಪತಿ ಅವರಿಗೆ ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಒಲಿದು ಬಂದಿದೆ.

ಜಾನಪದ ಸೊಗಡಿನ ಗಾಯಕ ಕರಬಸಯ್ಯ ಸ್ವಾಮಿ ಹಳ್ಳಿಗಾಡಿನ ದಿಟ್ಟ ಪ್ರತಿಭೆ. ಕೃಷಿಯಷ್ಟೇ ಸಂಗೀತವನ್ನು ಪ್ರೀತಿಸುವ ಗಾಯಕ ಕರಬಸಯ್ಯ ಯಲಮಾಮಡಿ ಸ್ವಾಯತ್ತ ಸಂಸ್ಥೆಯೊಂದರಿಂದ ಪಡೆಯುತ್ತಿರುವ ಮೊಟ್ಟ ಮೊದಲ ಪ್ರಶಸ್ತಿ ಇದಾಗಿದೆ.

‘ನನಗೆ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ನೀಡಿದೆ. ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ, ಇತ್ತೀಚೆಗೆ ಜಾನಪದ ವಿದ್ವಾಂಸರೊಬ್ಬರು ಕರೆ ಮಾಡಿ ನಾನು ನೀಡಿದ ಸಂಗೀತ ಕಾರ್ಯಕ್ರಮಗಳ ವಿವರ ಪಡೆದಿದ್ದರು. ಹಿರಿಯ ವಿದ್ವಾಂಸರ ಬೆಂಬಲ, ಕಲಾವಿದರ ಸಹಕಾರವೇ ಇದಕ್ಕೆ ಕಾರಣ’ ಎಂದರು.

ಹಾರ್ಮೋನಿಯಂ ನುಡಿಸುವುದರ ಜತೆಗೆ ದಮಡಿ ಬಾರಿಸುತ್ತಲೇ ಹಾಡು ಹಾಡಿ ಸಭಿಕರನ್ನು ರಂಜಿಸುವುದು ಇವರ ಹವ್ಯಾಸ. ಹಬ್ಬ ಹರಿದಿನ, ಜಾನಪದ ಉತ್ಸವಗಳು, ಜಾತ್ರೆಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಆಹ್ವಾನದ ಮೇರೆಗೆ ತೆರಳಿ ಹಾಡುಗಳನ್ನು ಹಾಡುವುದು ಅವರ ಕಾಯಕ.

ರಾಮನಗರದ ಜಾನಪದ ಲೋಕ ಸೇರಿ ರಾಜ್ಯದ ಹಲವಾರು ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಇಷ್ಟೇ ಮೊತ್ತ ಇರಬೇಕೆಂದು ಕಟ್ಟುನಿಟ್ಟಾಗಿ ಬೇಡಿಕೆ ಇಡುವ ಕಲಾವಿದರಲ್ಲ. ಹೋಗಿ ಬರುವ ಸಾರಿಗೆ ವೆಚ್ಚದ ಜತೆಗೆ ಒಂದಿಷ್ಟು ಕಾಣಿಕೆ ನೀಡಿದರೂ ಅದನ್ನು ವಿನಮ್ರವಾಗಿ ಸ್ವೀಕರಿಸಿ ಮರಳುವ ಕಲಾವಿದರಾಗಿದ್ದಾರೆ. ಸದ್ಯ ಅವರ ಸೊಸೆ ರೇಣುಕಾ ವೀರಯ್ಯಸ್ವಾಮಿ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT