ಗುರುವಾರ , ಜೂನ್ 17, 2021
21 °C

ಸಚಿವ ಉಮೇಶ ಕತ್ತಿ ರಾಜೀನಾಮೆಗೆ ಒತ್ತಾಯ: ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ಪಡಿತರದಲ್ಲಿ ಅಕ್ಕಿ ಕಡಿತವನ್ನು ಪ್ರಶ್ನಿಸಿದ ರೈತನಿಗೆ ಸಾಯಿ ಎಂದಿರುವ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ಕೂಡಲೇ ರಾಜಿನಾಮೆ ನೀಡಬೇಕು ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆಗ್ರಹಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ. ನೀಲಾ, ‘ಪಡಿತರ ಅಂಗಡಿಗಳಲ್ಲಿ ನೀಡುವ ಎರಡು ಕೆ.ಜಿ ಅಕ್ಕಿ, ಮೂರು ಕೆ.ಜಿ ಜೋಳದಿಂದ ಬದುಕಲಾದೀತೆ? ಉಳಿದ ದಿನ ಉಪವಾಸದಿಂದ ಸಾಯಬೇಕೆ ಎಂದು ಪ್ರಶ್ನಿಸಿದ ಗದಗ ಜಿಲ್ಲೆಯ ರೈತ ಸಂಘದ ಕಾರ್ಯಕರ್ತನನ್ನು ಸಾಯಿ ಎನ್ನುವ ಮೂಲಕ ಆಹಾರ ಸಚಿವರು ಉದ್ಧಟತನದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಕೂಡಾ ಮನೆಯಲ್ಲಿ ಟಿ.ವಿ. ಇದ್ದವರಿಗೆ ಬಿ.ಪಿ.ಎಲ್. ರೇಷನ್ ಕಾರ್ಡ್ ಹಿಂಪಡೆಯುವ ಮಾತುಗಳನ್ನಾಡಿ ನಂತರ ಜನತೆಯ ಕ್ಷಮೆ ಕೇಳಿದ್ದರು.
ಜನಪ್ರತಿನಿಧಿಗಳಾದ ಇವರು ಪಾಳೆಗಾರರಂತೆ ವರ್ತಿಸುತ್ತಿದ್ದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವರು ಸಚಿವರಾಗಿ ಮುಂದುವರೆಯಲು ಅನರ್ಹರು’ ಎಂದು ಟೀಕಿಸಿದ್ದಾರೆ.

‘ರಾಜ್ಯದ ಜನರು ಬರ, ನೆರೆ, ಕೋವಿಡ್ ಪರಿಣಾಮಗಳಿಂದಾಗಿ ಸಂಕಷ್ಟದಲ್ಲಿದ್ದು ಪಡಿತರ ವ್ಯವಸ್ಥೆಯ ಮೂಲಕ ನೀಡುವ ದಿನಸಿಯನ್ನು ಅವಲಂಬಿಸಿದ್ದಾರೆ. ಬಿಪಿಎಲ್ ಕಾರ್ಡ್ ಮೂಲಕ ನೀಡುವ ಎರಡು ಕೆ.ಜಿ ಅಕ್ಕಿ, ಮೂರು ಕೆ.ಜಿ ಜೋಳ, ರಾಗಿಯಿಂದ ಒಬ್ಬರ ಹೊಟ್ಟೆಯಾದರೂ ತುಂಬಲು ಸಾಧ್ಯವಾ ಎಂದು ಸಚಿವರು ವಿಚಾರ ಮಾಡಬೇಕು. ಸ್ವತಃ ಅವರು ಬಿಪಿಎಲ್ ಕಾರ್ಡ್ ಮೂಲಕ ನೀಡುವ ದಿನಸಿಯನ್ನು ಒಂದು ತಿಂಗಳ ಕಾಲ ತಿಂದು ತೋರಿಸಬೇಕು’ ಎಂದು ಸವಾಲು ಹಾಕಿದ್ದಾರೆ.

ಅನ್ನ ಭಾಗ್ಯ ಯೋಜನೆಯ ಪಡಿತರದ ಅಕ್ರಮ ಮಾರಾಟ ತಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಕೇಂದ್ರ ಬಿ‌ಜೆಪಿ ಸರ್ಕಾರ ಜಾರಿಗೆ ತರುತ್ತಿರುವ ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆಗೆ ಪೂರಕವಾಗಿ ಪಡಿತರ ವ್ಯವಸ್ಥೆಯನ್ನು ಕಳಚಿ ಹಾಕಿ ಖಾಸಗಿ ಕಾರ್ಪೊರೇಟ್ ವ್ಯಾಪಾರಕ್ಕೆ ಸಾರ್ವಜನಿಕ ಪಡಿತರದ ಪಲಾನುಭವಿಗಳನ್ನು ಬಲಿ ಕೊಡಲು ರಾಜ್ಯ ಬಿಜೆಪಿ ಸರ್ಕಾರ ಎಲ್ಲ ತಯಾರಿ ನಡೆಸಿದೆ.

ಸಚಿವ ಉಮೇಶ ಕತ್ತಿ ಮತ್ತೆ ಮತ್ತೆ ಜನತೆಯ ಕ್ಷಮೆ ಕೇಳಲು ಅನರ್ಹರಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ನೀಲಾ ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು