ಶುಕ್ರವಾರ, ಸೆಪ್ಟೆಂಬರ್ 17, 2021
31 °C
ಗಂಟಲು ಮಾದರಿ ತಪಾಸಣೆಗೆ ಕೊಟ್ಟ ವಿಷಯ ಮುಚ್ಚಿಟ್ಟು ಆಸ್ಪತ್ರೆಗೆ ದಾಖಲಾದ ಹೃದ್ರೋಗಿಯಿಂದ ಯಡವಟ್ಟು

ಸೋಂಕಿತನಿಗೆ ಶಸ್ತ್ರಚಿಕಿತ್ಸೆ: ಜಯದೇವ ವೈದ್ಯರು, ಸಿಬ್ಬಂದಿ ಕ್ವಾರಂಟೈನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ಇಲ್ಲಿನ ಜಯದೇವ ಆಸ್ಪತ್ರೆಯಲ್ಲಿ ಹೃದ್ರೋಗ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿಗೆ ಕೋವಿಡ್‌ ಇರುವುದು ದೃಢಪಟ್ಟ ಕಾರಣ, ವೈದ್ಯರು– ಸಿಬ್ಬಂದಿ ಸೇರಿ 32 ಮಂದಿ ಹೋಂ ಕ್ವಾರಂಟೈನ್‌ ಆಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಕೆಮ್ಮು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸೇಡಂ ತಾಲ್ಲೂಕಿನ ವ್ಯಕ್ತಿಯೊಬ್ಬ ಮೊದಲು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಅಲ್ಲಿನ ವೈದ್ಯರ ಸಲಹೆಯಂತೆ ಕೋವಿಡ್‌ ತಪಾಸಣೆಗಾಗಿ ಬಸವೇಶ್ವರ ಆಸ್ಪತ್ರೆಯಲ್ಲಿ ಭಾನುವಾರ (ಜುಲೈ 5) ಗಂಟಲು ಮಾದರಿ ನೀಡಿದ್ದ. ಆದರೆ, ಅದೇ ದಿನ ಸಂಜೆ, ವರದಿ ಬರುವ ಮುನ್ನವೇ ಜಯದೇವ ಆಸ್ಪತ್ರೆಗೆ ಹೋಗಿ ದಾಖಲಾದ. ಗಂಟಲು ಮಾದರಿ ನೀಡಿದ ವಿಷಯ ಮುಚ್ಚಿಟ್ಟು, ಒಳರೋಗಿಯಾಗಿ ದಾಖಲಾದ.‌

ಸಾಮಾನ್ಯ ಹೃದ್ರೋಗಿಗಳಂತೆಯೇ ವೈದ್ಯರು ಈತನಿಗೂ ತಪಾಸಣೆ ಮಾಡಿದರು. ತುರ್ತು ಅವಶ್ಯಕತೆ ಇದ್ದ ಕಾರಣ, ಸೋಮವಾರ (ಜುಲೈ 6) ಆ್ಯಂಜಿಯೋಗ್ರಾಮ್ ಮತ್ತು ಎಂಜಿಯೊಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡಿದರು. ಆದರೆ, ಮಂಗಳವಾರ ಈತನ ಗಂಟಲು ಮಾದರಿ ತಪಾಸಣೆಯ ವರದಿ ಬಂದಿದ್ದು ಕೊರೊನಾ ಪಾಸಿಟಿವ್ ಇರುವುದು ಗೊತ್ತಾಗಿದೆ.

ವಿಷಯ ತಿಳಿದು ವೈದ್ಯರು, ನರ್ಸ್‌ ಹಾಗೂ ಸಿಬ್ಬಂದಿಯಲ್ಲಿ ತೀವ್ರ ಆತಂಕ ಮನೆ ಮಾಡಿತು. ರೋಗಿ ಮಾಡಿದ ಯಡವಟ್ಟಿನಿಂದಾಗಿ ಆಸ್ಪತ್ರೆಯ ತಜ್ಞರೂ ಕ್ವಾರಂಟೈನ್‌ ಆಗಬೇಕಾದ ಅನಿವಾರ್ಯ ಬಂತು. ಮಾತ್ರವಲ್ಲ, ಈ ವ್ಯಕ್ತಿ ದಾಖಲಾಗಿದ್ದ ಬೆಡ್‌, ಕುಳಿತುಕೊಂಡಿದ್ದ ಸ್ಥಳಗಳ ಅಕ್ಕ‍‍ಪಕ್ಕದಲ್ಲಿದ್ದ ಸಿಬ್ಬಂದಿ ಹಾಗೂ ರೋಗಿಗಳಿಗೂ ದುಗುಡ ಶುರುವಾಗಿದೆ.

ಶಸ್ತ್ರಚಿಕಿತ್ಸೆ ನಡೆಸಿದ ಮತ್ತು ತಪಾಸಣೆ ಮಾಡಿದ ಐವರು ಹೃದ್ರೋಗ ತಜ್ಞರು (ಕಾರ್ಡಿಯಾಲಾಜಿಸ್ಟ್) ಆರೋಗ್ಯ ಸಹಾಯಕಿಯರು, ಸಿ ಮತ್ತು ಡಿ ಗ್ರೂಪ್ ನೌಕರರು ಸೇರಿ 32 ಜನ ನೇರ ಸಂಪರ್ಕಕ್ಕೆ ಬಂದಿದ್ದು, ಅವರೆಲ್ಲರನ್ನು ತಕ್ಷಣವೇ ಹೋಂ ಕ್ವಾರಂಟೈನ್‍ಗೆ ಸೂಚಿಸಲಾಗಿದೆ. ಪರೀಕ್ಷೆಗಾಗಿ ಎಲ್ಲರ ಮಾದರಿ ಸಂಗ್ರಹಿಸಿ ಜಿಮ್ಸ್ ಕೊರೊನಾ ಲ್ಯಾಬ್‍ಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಹೃದ್ರೋಗಿಯು ತನಗೆ ಕೊರೊನಾ ಲಕ್ಷಣ ಇರುವ ಅಥವಾ ಗಂಣಲು ಮಾದರಿ ತಪಾಸಣೆಗೆ ನೀಡಿದ ವಿಷಯವನ್ನು ಮೊದಲೇ ತಿಳಿಸಿದ್ದರೆ, ಹೆಚ್ಚಿನ ಮುನ್ನೆಚ್ಚರಿಕೆ ವಹಿಸಿ ಶಸ್ತ್ರಚಿಕಿತ್ಸೆ ಮಾಡಬಹುದಿತ್ತು. ರೋಗಿ ಮಾಡಿದ ಯಡವಟ್ಟಿನಿಂದಾಗಿ ಆಸ್ಪತ್ರೆಯಲ್ಲಿ ವೈದ್ಯರು, ಸಹಾಯಕರು, ಸಿಬ್ಬಂದಿ ಕೊರತೆ ಉಂಟಾಗಿದೆ’ ಎಂದು ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರೊಬ್ಬರು ಮಾಹಿತಿ ನೀಡಿದರು.

box

ಸೋಂಕಿತರ ಓಡಾಟ; ಜಿ.ಪಂ ಕಚೇರಿ ಸೀಲ್‍ಡೌನ್

ಕಲಬುರ್ಗಿ: ಕೋವಿಡ್‌ ಸೋಂಕಿತ ಇಬ್ಬರು ವ್ಯಕ್ತಿಗಳು ಇಲ್ಲಿನ ಜಿಲ್ಲಾ ಪಂಚಾಯಿತಿ ಕಚೇರಿಯ ಒಳ– ಹೊರಗೆ ಓಡಾಡಿದ ಕಾರಣ, ಮಂಗಳವಾರ ಇಡೀ ಕಟ್ಟಡವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಭಾನುವಾರ ಕೋವಿಡ್‌ ಪಾಸಿಟಿವ್ ದೃಢಪಟ್ಟ ವ್ಯಕ್ತಿಯ ಟ್ರಾವೆಲ್‌ ಹಿಸ್ಟರಿ ಹುಡುಕಿದಾಗ, ಆತ ಮೂರು ದಿನಗಳ ಹಿಂದೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಬಂದು ತನ್ನ ಕೆಲಸ ಕಾರ್ಯಗಳಿಗೆ ಓಡಾಡಿದ್ದು ಗೊತ್ತಾಗಿದೆ. ಹೀಗಾಗಿ, ಸೋಮವಾರ ಸಂಜೆ ಇಡೀ ಕಟ್ಟಡವನ್ನು ಸ್ಯಾನಿಟೈಸ್‌ ಮಾಡಲಾಯಿತು. ಮಂಗಳವಾರ ಎಲ್ಲ ಸಿಬ್ಬಂದಿಗೂ ರಜೆ ನೀಡಲಾಯಿತು. ಕಟ್ಟಡದ ಸಮೀಪ‍ ಬರದಂತೆ ಜನರನ್ನು ತಡೆಯಲಾಯಿತು.

ಅಫಜಲಪುರ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಸದಸ್ಯೆಯೊಬ್ಬರ ಒಬ್ಬ ಪುತ್ರ ಹಾಗೂ ಚಿತ್ತಾಪುರ ತಾಲ್ಲೂಕಿನ ಗ್ರಾಮ ಪಂಚಾಯಿತಿಯೊಂದರ ಒಬ್ಬ ಅಭಿವೃದ್ಧಿ (ಪಿಡಿಒ) ಸೋಂಕಿತರು. ಇವರಿಬ್ಬರೂ ಸೋಂಕು ದೃಢಪಡುವ ಮುನ್ನ ಎರಡು ದಿನ ಕೆಲಸಗಳ ನಿಮಿತ್ತ ಜಿಲ್ಲಾ ಪಂಚಾಯಿತಿಗೆ ಭೇಟಿ ನೀಡಿದ್ದರು. ವಿವಿಧ ಶಾಖೆಗಲ್ಲಿ ಓಡಾಡಿದ್ದರು ಎಂದು ಮೂಲಗಳು ತಿಳಿಸಿವೆ.

ಇಂದು ಮತ್ತೆ ಆರಂಭ

ಜಿಲ್ಲಾ ಪಂಚಾಯಿತಿಯ ಯಾವುದೇ ಸಿಬ್ಬಂದಿಗೆ ಪಾಸಿಟಿವ್‌ ಬಂದಿರದ ಕಾರಣ, ಬುಧವಾರ (ಜುಲೈ 8) ಮತ್ತೆ ಕೆಲಸ ಕಾರ್ಯಗಳು ಆರಂಭವಾಗಲಿವೆ ಎಂದು ಮೂಲಗಳು ತಿಳಿಸಿವೆ.

ಇಬ್ಬರಿಗೆ ಕೊರೊನಾ ದೃಢವಾದ ಬೆನ್ನಲ್ಲಿಯೇ ಸಿಇಒ ಡಾ.ರಾಜಾ.ಪಿ, ಅವರ ಸೂಚನೆಯಂತೆ ಇಡೀ ಕಚೇರಿಯನ್ನು ಸ್ಯಾನಿಟೈಸ್ ಮಾಡಿ, ಒಂದು ದಿನದ ಮಟ್ಟಿಗೆ ಸೀಲ್‍ಡೌನ್ ಮಾಡಲಾಯಿತು. ಸೋಂಕಿತರಿಬ್ಬರನ್ನು ಐಸೋಲೇಷನ್ ವಾರ್ಡ್‍ಗೆ ದಾಖಲಿಸಲಾಯಿತು. ಅವರ ನೇರ ಸೋಂಕಿತರ ಸಂಪರ್ಕಕ್ಕೆ ಬಂದಿರುವರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಪತ್ತೆ ಹಚ್ಚಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.