ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಗೆಲುವಿನ ಹೊಸ್ತಿಲಲ್ಲಿ ಬಿದ್ದವರು

Last Updated 2 ಏಪ್ರಿಲ್ 2023, 6:51 IST
ಅಕ್ಷರ ಗಾತ್ರ

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಲು ಮತಗಳೇ ಅಡಿಪಾಯ ಆಗುತ್ತವೆ. ಒಂದೊಂದು ಮತವೂ ಅಭ್ಯರ್ಥಿಗಳ ಹಣೆಬರಹ ನಿರ್ಣಯಿಸುತ್ತವೆ. ಜಿಲ್ಲೆಯ ವಿಧನಾಸಭಾ ಚುನಾವಣೆಯ ಇತಿಹಾಸದಲ್ಲಿ ಮತದಾರರು ಅಚ್ಚರಿಯ ಮತ್ತು ಆಘಾತಕಾರಿ ಫಲಿತಾಂಶ ನೀಡಿ, ರಾಜಕೀಯ ಲೆಕ್ಕಾಚಾರಗಳನ್ನೇ ತಲೆ ಕೆಳಗೆ ಮಾಡಿದ ಸಾಕಷ್ಟು ನಿದರ್ಶನಗಳಿವೆ.

ಜೇವರ್ಗಿ ಕ್ಷೇತ್ರದಲ್ಲಿ ಎನ್‌.ಧರ್ಮಸಿಂಗ್ ಅವರನ್ನು 1974ರಿಂದ 2008ರ ನಡುವೆ ಸತತ ಗೆಲ್ಲಿಸಿ, ಹಲವು ಖಾತೆಗಳನ್ನು ನಿರ್ವಹಿಸುವಂತೆ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೂ ಏರಿವಂತೆ ಮಾಡಿದ್ದ ಮತದಾರರೇ ಕೇವಲ 70 ಮತಗಳಿಂದ ಅವರನ್ನು ಸೋಲಿಸಿದ್ದರು. ಜನತಂತ್ರ ವ್ಯವಸ್ಥೆಯಲ್ಲಿ ಮತದಾರರು ಆಘಾತಕಾರಿ ಫಲಿತಾಂಶ ಕೊಡುವರು ಎಂಬುದಕ್ಕೆ ಇದೇ ಉದಾಹರಣೆ.

ರಾಜ್ಯದಲ್ಲಿ ಈವರೆಗೆ ನಡೆದ 15 ವಿಧಾನಸಭಾ ಚುನಾವಣೆಗಳ ಪೈಕಿ ಜಿಲ್ಲೆಯಲ್ಲಿ ಅತಿ ಕಡಿಮೆ ಅಂತರದಿಂದ ಹೆಚ್ಚು ಅಭ್ಯರ್ಥಿಗಳನ್ನು ಗೆಲ್ಲಿಸಿದ ಮತ್ತು ಸೋಲಿಸಿದ ಶ್ರೇಯಸ್ಸು ಆಳಂದ ಮತ್ತು ಜೇವರ್ಗಿ ಕ್ಷೇತ್ರಗಳ ಮತದಾರರಿಗೆ ಸಲ್ಲುತ್ತದೆ ಎಂಬುದು ಚುನಾವಣೆ ಆಯೋಗದಲ್ಲಿನ ಅಂಕಿಅಂಶಗಳಿಂದ ತಿಳಿದುಬರುತ್ತದೆ.

ಆಳಂದ ವಿಧಾನಸಭಾ ಕ್ಷೇತ್ರದಲ್ಲಿ 1967ರಲ್ಲಿ ಪಿಎಸ್‌ಪಿಯಿಂದ ಸ್ಪರ್ಧಿಸಿದ್ದ ದಿಗಂಬರರಾವ ಬಲವಂತ ರಾವ ಅವರು ಕಾಂಗ್ರೆಸ್‌ನ ಅಣ್ಣರಾವ ಭೀಮರಾವ ಅವರನ್ನು 380 ಮತಗಳಿಂದ ಸೋಲಿಸಿದ್ದರು. 1985ರಲ್ಲಿ ಕಾಂಗ್ರೆಸ್‌ನ ಶರಣಸಪ್ಪ ಪಾಟೀಲ ದಂಗಾಪೂರೆ ಅವರು ಜೆಎನ್‌ಪಿಯ ಬಿ.ಆರ್‌. ಪಾಟೀಲ ಅವರನ್ನು 662 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. 2018ರಲ್ಲಿ ಕಾಂಗ್ರೆಸ್‌ನ ಬಿ.ಆರ್. ಪಾಟೀಲ ಅವರು ಬಿಜೆಪಿಯ ಸುಭಾಷ ಗುತ್ತೇದಾರ ಅವರ ವಿರುದ್ಧ 697 ಮತಗಳಿಂದ ಸೋತರು.

ಜಿಲ್ಲೆಯಿಂದ ಚಿಂಚೋಳಿ ಬಳಿಕ ರಾಜ್ಯಕ್ಕೆ ಎರಡನೇ ಮುಖ್ಯಮಂತ್ರಿಯನ್ನು ಕೊಟ್ಟ ಜೇವರ್ಗಿಯ ಮತದಾರರು ಮೂರು ಬಾರಿ ಕಡಿಮೆ ಮತಗಳಿಂದ ಮೂವರನ್ನು ಕೆಡವಿದ್ದಾರೆ. 1957ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಶರಣಗೌಡ ಸಿದ್ರಾಮಪ್ಪ ಅವರು ಕಾಂಗ್ರೆಸ್‌ನ ರುದ್ರಪ್ಪ ನಾಗಪ್ಪ ಅವರನ್ನು 100 ಮತಗಳಿಂದ ಸೋಲಿಸಿದರು. 1962ರಲ್ಲಿ ಕಾಂಗ್ರೆಸ್‌ ನೀಲಕಂಟಪ್ಪ ಶರಣಪ್ಪ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಕೆ. ಚನ್ನಬಸಪ್ಪ ದಂಡಪ್ಪ ಅವರನ್ನು 656 ಮತಗಳಿಂದ ಪರಾಜಯಗೊಳಿಸಿದ್ದರು.

ಜೇವರ್ಗಿಯಲ್ಲಿ ದಶಕಗಳ ಕಾಲ ಪ್ರಾಬಲ್ಯ ಮೆರೆದು ಮುಖ್ಯಮಂತ್ರಿ ಆಗಿದ್ದ ಧರ್ಮಸಿಂಗ್ ಅವರನ್ನು ಬಿಜೆಪಿಯಿಂದ ಸ್ಪರ್ಧಿಸಿದ್ದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರು 70 ಮತಗಳಿಂದ ಸೋಲಿಸಿದ್ದರು. ಈ ಮೂಲಕ ತಮ್ಮ ತಂದೆಯ ಹ್ಯಾಟ್ರಿಕ್ ಸೋಲಿಗೆ ಸೇಡು ತೀರಿಸಿಕೊಂಡರು.

ಅಫಜಲಪುರ ಕ್ಷೇತ್ರದಲ್ಲಿ 1978ರಲ್ಲಿ ಜೆಎನ್‌ಪಿಯ ಎಂ.ವೈ ಪಾಟೀಲ ಅವರು ಕಾಂಗ್ರೆಸ್‌ನ ಹಣಮಂತರಾವ ದೇಸಾಯಿ ಅವರನ್ನು 387, ಚಿತ್ತಾಪುರದಲ್ಲಿ 1994ರಲ್ಲಿ ಕಾಂಗ್ರೆಸ್‌ನ ಬಾಬುರಾವ ಚಿಂಚನಸೂರ ಅವರು ಪಕ್ಷೇತ್ರ ಅಭ್ಯರ್ಥಿ ವಿಶ್ವನಾಥ ಹೆಬ್ಬಾಳ ಅವರನ್ನು 826, ಸೇಡಂನಲ್ಲಿ 1972ರಲ್ಲಿ ಕಾಂಗ್ರೆಸ್‌ನ ಜೆ.ಪಿ. ಸರ್ವೇಶ ಅವರು ಎನ್‌ಸಿಒನ ಭೋಜಪ್ಪ ಮೊಗಲಪ್ಪ ಅವರನ್ನು 969 ಹಾಗೂ ಚಿಂಚೋಳಿಯಲ್ಲಿ 1983ರಲ್ಲಿ ಕಾಂಗ್ರೆಸ್‌ನ ದೇವೇಂದ್ರಪ್ಪ ಘಾಳಪ್ಪ ಅವರು ಜೆಎನ್‌ಪಿಯ ವೈಜನಾಥ ಪಾಟೀಲ ಅವರನ್ನು 88 ಮತಗಳ ಅಂತರದಿಂದ ಪರಾಭವಗೊಳಿಸಿದ್ದರು.

ಕಲಬುರಗಿ ವಿಧಾನಸಭಾ ಕ್ಷೇತ್ರದಲ್ಲಿ(2008ರಲ್ಲಿ ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರಗಳಾಗಿ ವಿಭಜನೆ) 1978ರಲ್ಲಿ ಖಮರುಲ್ ಇಸ್ಲಾಂ ಅವರು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಜೆಎನ್‌ಪಿಯ ಸಾದರ್‌ಹುಸೇನ್ ಉಸ್ತಾದ್ ಅವರನ್ನು 763 ಮತಗಳಿಂದ ಸೋಲಿಸಿದ್ದರು.

ಎರಡು ಬಾರಿ ಕಡಿಮೆ ಮತಗಳಿಂದ ಗೆಲುವು

ಜಿಲ್ಲೆಯ ವಿಧಾನಸಭಾ ಚುನಾವಣೆಗಳಲ್ಲಿ ಅತ್ಯಂತ ಕಡಿಮೆ ಅಂತರದಿಂದ ಸತತ ಎರಡು ಬಾರಿ ಗೆಲುವು ಸಾಧಿಸಿದ್ದವರು ಸಿಪಿಐನ ಕೆ.ಬಿ ಶಾಣಪ್ಪ.

ಕಲಬುರಗಿ ಗ್ರಾಮೀಣ ಕ್ಷೇತ್ರದಲ್ಲಿ ವಿಲೀನಕ್ಕೂ(2008) ಮುನ್ನ ಮೀಸಲು ಕ್ಷೇತ್ರವಾಗಿದ್ದ ಶಹಾಬಾದ್‌ನಲ್ಲಿ 1983 ಮತ್ತು 1985ರಲ್ಲಿ ಸಿಪಿಐನಿಂದ ಸ್ಪರ್ಧಿಸಿದ್ದ ಶಾಣಪ್ಪ ಅವರು ನರಸಿಂಗ್‌ರಾವ ಜಾಧವ(ಕಾಂಗ್ರೆಸ್‌) ಮತ್ತು ಗುರುನಾಥ ಚಂದ್ರಾಮ(ಸ್ವತಂತ್ರ) ಅವರ ವಿರುದ್ಧ ಕ್ರಮವಾಗಿ 298 ಹಾಗೂ 75 ಮತಗಳ ಅಂತರದಿಂದ ಗೆದ್ದರು.

ವೈಜನಾಥ ಹೆಸರಲ್ಲೇ ಉಳಿದ ದಾಖಲೆ

ಕಾಂಗ್ರೆಸ್‌ನ ಭದ್ರಕೋಟೆ ಆಗಿದ್ದ ಚಿಂಚೋಳಿ ಕ್ಷೇತ್ರದಲ್ಲಿ 1994ರಲ್ಲಿ ಜೆಡಿಎಸ್‌ನಿಂದ ವೈಜನಾಥ ಪಾಟೀಲ ಅವರು ಕಾಂಗ್ರೆಸ್‌ನ ಕೈಲಾಸನಾಥ ಪಾಟೀಲ ಅವರನ್ನು 39,051 ಮತಗಳ ಅಂತರದಿಂದ ಸೋಲಿಸಿದ್ದರು. ಇದು ಜಿಲ್ಲೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದ ಅಭ್ಯರ್ಥಿ ಎಂಬ ಹಿರಿಮೆಗೆ ವೈಜನಾಥ ಅವರು ಪಾತ್ರರಾಗಿದ್ದಾರೆ.

ಚಲಾವಣೆಯಾದ ಒಟ್ಟು 81,1552 ಮತಗಳ ಪೈಕಿ ವೈಜನಾಥ ಅವರು 56,373(ಶೇ 69.13) ಮತಗಳು ಪಡೆದಿದ್ದರು. ಪ್ರತಿಸ್ಪರ್ಧಿ ಕೈಲಾಸನಾಥ ಅವರು 17,320(ಶೇ 21.24ರಷ್ಟು) ಮತ ಗಳಿಸಿದ್ದರು. ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳು ಇದ್ದರು.

ವೈಜನಾಥರ ಬಳಿಕ ಅಧಿಕ ಮತಗಳ ಅಂತರದಿಂದ ಗೆದ್ದ ಶ್ರೇಯಸ್ಸು ಜೇವರ್ಗಿಯ ಡಾ.ಅಜಯ ಸಿಂಗ್ ಅವರಿಗಿದೆ. 2008ರಲ್ಲಿ ತಂದೆ ಧರ್ಮಸಿಂಗ್ ಅವರನ್ನು 70 ಮತಗಳಿಂದ ಸೋಲಿಸಿದ್ದ ಬಿಜೆಪಿಯ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರನ್ನು 2013ರಲ್ಲಿ 36,700 ಮತಗಳಿಂದ ಪರಾಭವಗೊಳಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT