ಕಮಲಾಪುರ: ಪಟ್ಟಣದಿಂದ ಜೀವಣಗಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕೋಹಿನೂರ ಕಲ್ಯಾಣ ಮಂಟಪ ಸಮೀಪದ ಸೇತುವೆ ಮಂಗಳವಾರ ಕುಸಿದು ಬಿದ್ದಿದೆ.
ಮರಳು ತುಂಬಿದ್ದ ಸೇತುವೆ ಮೇಲೆ ಲಾರಿಯೊಂದು ತೆರಳುತ್ತಿದ್ದಾಗ ಬಿರುಕು ಬಿಟ್ಟು ಕುಸಿಯುತ್ತಿದ್ದಂತೆ ತಕ್ಷಣವೇ ಚಾಲಕ ಲಾರಿಯನ್ನು ಹಿಂದಕ್ಕೆ ತೆಗೆದುಕೊಂಡರು. ಯಾವುದೇ ಅನಾಹುತ ಸಂಭವಿಸಿಲ್ಲ. ಕೋಹಿನೂರ ಕಲ್ಯಾಣ ಮಂಟಪದ ಕಡೆಯಿಂದ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ.
ಕಮಲಾಪುರದಿಂದ ಜೀವಣಗಿ, ಬೇಲೂರ, ಭುಂಯಾರ, ಗೋಗಿ, ಅರಣಕಲ್, ರೇವಗ್ಗಿ, ರೇವಣಸಿದ್ದೇಶ್ವರ ದೇವಸ್ಥಾನ, ರಟಕಲ ಸೇರಿದಂತೆ ವಿವಿಧ ಗ್ರಾಮಗಳಿಗೆ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಈ ಗ್ರಾಮಗಳ ಗ್ರಾಮಸ್ಥರು ಕೋಹಿನೂರ ಕಲ್ಯಾಣ ಮಂಟಪದ ಕಡೆಗೆ ಸಂಚರಿಸದೆ ಕಮಲಾಪುರ ಪಟ್ಟಣದೊಳಗಿಂದ ಸಂಚರಿಸುವಂತೆ ಪೊಲೀಸರು ತಿಳಿಸಿದ್ದಾರೆ.
ಈ ಸೇತುವೆ ಸುಮಾರು 60 ವರ್ಷಕ್ಕಿಂತ ಹಳೆಯದಾಗಿದೆ. ಕಲ್ಲಿನ ಗೋಡೆ ಮೇಲೆ ಸೇತುವೆ ನಿರ್ಮಿಸಲಾಗಿತ್ತು. ಬೆಳಿಗ್ಗೆ ಕುಸಿದಿದ್ದು ಅದೃಷ್ಟವಶಾತ ಯಾವುದೇ ದುರ್ಘಟನೆ ಸಂಭವಿಸಿಲ್ಲ ಎಂದು ಸ್ಥಳೀಯರು ನಿಟ್ಟುಸಿರು ಬಿಟ್ಟರು.