ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ ವಿಧಾನ ಪರಿಷತ್‌: ‘ಬಲಾಢ್ಯ’–‘ಅನುಭವಿ’ ಮಧ್ಯೆ ಕದನ

ಕ್ಷೇತ್ರ ಉಳಿಸಿಕೊಳ್ಳುವ ಉಮೇದಿನಲ್ಲಿ ಬಿಜೆಪಿ, ಕಾಂಗ್ರೆಸ್‌ ತೀವ್ರ ಪ್ರಯತ್ನ
Last Updated 2 ಡಿಸೆಂಬರ್ 2021, 19:44 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿ–ಯಾದಗಿರಿ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್‌ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಬಿಜೆಪಿಯ ‘ಬಲಾಢ್ಯ’ ಅಭ್ಯರ್ಥಿ ಬಿ.ಜಿ. ಪಾಟೀಲ ಮತ್ತು ಕೊನೆ ಕ್ಷಣದಲ್ಲಿ ಕಾಂಗ್ರೆಸ್‌ನಿಂದ ಕಣಕ್ಕೆ ಇಳಿದಿರುವ ‘ಅನುಭವಿ’ ಶಿವಾನಂದ ಪಾಟೀಲ ಅವರ ಮಧ್ಯೆ ನೇರ ಕದನ ಏರ್ಪಟ್ಟಿದೆ.

ಕಳೆದ ಬಾರಿ ಕಾಂಗ್ರೆಸ್‌ನ ಅಲ್ಲಮಪ್ರಭು ಪಾಟೀಲ ಈ ಕ್ಷೇತ್ರ ಪ್ರತಿನಿಧಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಇದ್ದಾಗಲೇ ಬಿಜೆಪಿ ‘ಬಲಾಢ್ಯ’ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಪರಿಷತ್‌ ಸ್ಥಾನವನ್ನು ತನ್ನದಾಗಿಸಿಕೊಂಡಿತ್ತು. ಈಗ ತಮ್ಮದೇ ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದು ಮತ್ತು ಕ್ಷೇತ್ರದಲ್ಲಿ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿರುವುದು ಆ ಪಕ್ಷದ ಅಭ್ಯರ್ಥಿಯ ಉಮೇದು ಹೆಚ್ಚಿಸಿದೆ.

ತಂತ್ರಗಾರಿಕೆಯಲ್ಲಿ ಬಿಜೆಪಿ ಮುಂದು:

ಚುನಾವಣಾ ತಂತ್ರಗಾರಿಕೆಯಲ್ಲಿ ಬಿಜೆಪಿಯು ಕಾಂಗ್ರೆಸ್‌ಗಿಂತ ಕೊಂಚ ಮುಂದಿದೆ. ಅಭ್ಯರ್ಥಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನವೇ ಕಲಬುರಗಿ–ಯಾದಗಿರಿ ಜಿಲ್ಲೆಗಳ ಮತದಾರರನ್ನು ಸೇರಿಸಿ ಜನ ಸ್ವರಾಜ್ ಸಮಾವೇಶವನ್ನು ನಡೆಸಿ ಚುನಾವಣಾ ಪ್ರಚಾರಕ್ಕೆ ಮುನ್ನುಡಿ ಬರೆದಿತ್ತು.

ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ಅಲ್ಲಮಪ್ರಭು ಪಾಟೀಲ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದು, ಪರಿಷತ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ ನಂತರಕಾಂಗ್ರೆಸ್‌ಗೆ ಅಭ್ಯರ್ಥಿಯನ್ನು ಹುಡುಕುವುದೇ ಸವಾಲಾಗಿತ್ತು. ಶಾಸಕ ಪ್ರಿಯಾಂಕ್‌ ಖರ್ಗೆ ಅವರ ಆಪ್ತ, ಅವರ ಚಿತ್ತಾಪುರ ವಿಧಾನಸಭಾ ಕ್ಷೇತ್ರದ ಶಿವಾನಂದ ಪಾಟೀಲ ಮರತೂರ ಅವರಿಗೆ ಟಿಕೆಟ್‌ ನೀಡಲಾಗಿದೆ.

ಕಾಂಗ್ರೆಸ್‌ನ ಸಾಂಘಿಕ ಯತ್ನ:

ಶಿವಾನಂದ ಪಾಟೀಲ ಅವರು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರೊಂದಿಗೆ ತಾವು ನಿಕಟ ಸಂಪರ್ಕ ಹೊಂದಿರುವುದು ಹಾಗೂ ಕಾಂಗ್ರೆಸ್‌ನ ಸಾಂಘಿಕ ಯತ್ನ ತಮ್ಮ ಗೆಲುವಿಗೆ ನೆರವಾಗಬಹುದು ಎಂಬುದು ಅವರ ನಂಬಿಕೆ.

ಬಿ.ಜಿ. ಪಾಟೀಲ ಅವರ ತೀವ್ರ ಪೈಪೋಟಿ ನಡುವೆ ಶಿವಾನಂದ ಪಾಟೀಲ ತಮಗೆ ಸಿಕ್ಕ ಅಲ್ಪ ಸಮಯದಲ್ಲಿಯೇ ವಿವಿಧ ಗ್ರಾಮ ಪಂಚಾಯಿತಿ ಸದಸ್ಯರನ್ನು ಭೇಟಿ ಮಾಡುತ್ತಿದ್ದಾರೆ. ಇಬ್ಬರೂ ಅವಳಿ ಜಿಲ್ಲೆಯಲ್ಲಿ ಪ್ರಬಲವಾಗಿರುವ ದೀಕ್ಷ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು.

‘ಕ್ಷೇತ್ರಕ್ಕೆ ಬಿ.ಜಿ. ಪಾಟೀಲರ ಕೊಡುಗೆ ಏನೂ ಇಲ್ಲ. ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಲ್ಲ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿ’ ಎಂದು ಕಾಂಗ್ರೆಸ್ಸಿಗರು ಕೇಳುತ್ತಿದ್ದರೆ, ‘ನಮ್ಮ ಬಲಾಢ್ಯ ಅಭ್ಯರ್ಥಿ ಎದುರು ನಿಲ್ಲಲು ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಗಳೇ ಇರಲಿಲ್ಲ’ ಎಂದು ಪ್ರಚಾರ ಸಭೆಗಳಲ್ಲಿ ಲೇವಡಿ ಮಾಡುತ್ತಿರುವ ಬಿಜೆಪಿ ನಾಯಕರು, ‘ನಾವು ಈಗಾಗಲೇ ಗೆದ್ದಾಗಿದೆ’ ಎಂದು ಬೀಗುತ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಕೋಡ್ಲಿ ಕಣದಲ್ಲಿದ್ದಾರೆ.

ಈ ಕ್ಷೇತ್ರವು ಕಲಬುರಗಿ ಜಿಲ್ಲೆಯಲ್ಲಿ ಒಂಬತ್ತು ಹಾಗೂ ಯಾದಗಿರಿ ಜಿಲ್ಲೆಯಲ್ಲಿ ನಾಲ್ಕು ಸೇರಿ 13 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿ ಹೊಂದಿದೆ. ಆ ಪೈಕಿ ಬಿಜೆಪಿಯ ಏಳು, ಕಾಂಗ್ರೆಸ್‌ನ ಐವರು ಹಾಗೂ ಜೆಡಿಎಸ್‌ನ ಒಬ್ಬ ಶಾಸಕರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT