ಕಲಬುರಗಿ: ವಿಶ್ವ ಶಾಂತಿ ದಿನಾಚರಣೆ ಅಂಗವಾಗಿ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಲಬುರಗಿ ಘಟಕ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದ ವಿವಿಧ ಕಾಲೇಜುಗಳ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶನಿವಾರ ವಾಕಥಾನ್ ನಡೆಸಿದರು.
ನಗರದ ಜಗತ್ ವೃತ್ತದಲ್ಲಿ ವಾಕಥಾನ್ ಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದಯಾನಂದ ಅಗಸರ ಚಾಲನೆ ನೀಡಿದರು.
ಬಳಿಕ ವಿದ್ಯಾರ್ಥಿಗಳು ಜಗತ್ ವೃತ್ತದಿಂದ ಅನ್ನಪೂರ್ಣ ಕ್ರಾಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತನಕ ಕಾಲ್ನಡಿಗೆ ಜಾಥಾ ನಡೆಸಿದರು.
'ಮಾಡಲೇಬೇಕು ಮಾಡಲೇಬೇಕು, ರಕ್ತ ದಾನ ಮಾಡಲೇಬೇಕು'
'ನಮ್ಮ ನಡೆ ಶಾಂತಿಯ ಕಡೆ' ಘೋಷಣೆ ಮೊಳಗಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ರೆಡ್ ಕ್ರಾಸ್ ಸೊಸೈಟಿ ಕಲಬುರಗಿ ಘಟಕದ ಚೇರಮನ್ ಅರುಣಕುಮಾರ ಲೋಯಾ, ವೈಸ್ ಚೇರಮನ್ ಭಾಗ್ಯಲಕ್ಷ್ಮಿ ಹಾಗೂ ಗುಲಬರ್ಗ ವಿಶ್ವವಿದ್ಯಾಲಯದ ಬಸವರಾಜ ಸಣ್ಣಕ್ಕಿ ಮಾತನಾಡಿದರು.
ಅಪ್ಪಾರಾವ ಅಕ್ಕೋಣೆ, ರವೀಂದ್ರ ಶಾಬಾದಿ, ಪದ್ಮರಾಜ ರಾಸಣಗಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.