ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಖಾಲಿ ಹುದ್ದೆಗಳ ವಿವರ ಮುಚ್ಚಿಟ್ಟು ವರ್ಗಾವಣೆ

Last Updated 28 ಡಿಸೆಂಬರ್ 2022, 4:42 IST
ಅಕ್ಷರ ಗಾತ್ರ

ಕಲಬುರಗಿ: ತಾಂತ್ರಿಕ ಶಿಕ್ಷಣ ಇಲಾಖೆ ವ್ಯಾಪ್ತಿಯ ಸರ್ಕಾರಿ ಪಾಲಿಟೆಕ್ನಿಕ್, ಕಿರಿಯ ತಾಂತ್ರಿಕ ಶಾಲೆ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ವಿವರ ಪ್ರಕಟಿಸದೆ ವರ್ಗಾವಣೆಗೆ ಲಭ್ಯ ಇರುವ ಹುದ್ದೆಗಳ ಮಾಹಿತಿಯಷ್ಟೇ ಪ್ರಕಟಿಸಿದೆ.

ತಾಂತ್ರಿಕ ಶಿಕ್ಷಣ ಇಲಾಖೆಯು ತಾಂತ್ರಿಕ ಕಾರಣಗಳ ನೆಪವೊಡ್ಡಿ ಮೂರು ಬಾರಿ ವರ್ಗಾವಣೆ ಕೌನ್ಸಿಲಿಂಗ್ ಪಟ್ಟಿ ಮುಂದೂಡಿತ್ತು. ಮಂಗಳವಾರ (ಡಿಸೆಂಬರ್ 27) ಮಧ್ಯಾಹ್ನ 3.30ಕ್ಕೆ ವರ್ಗಾವಣೆ ಪ್ರಕ್ರಿಯೆ ಅಧಿಸೂಚನೆ ಹೊರಡಿಸಿದ್ದು, ಬುಧವಾರ(ಡಿಸೆಂಬರ್ 28) ಬೆಳಿಗ್ಗೆ 9.30ಕ್ಕೆ ಕೌನ್ಸಿಲಿಂಗ್‌ಗೆ ಹಾಜರಾಗಲು ಸೂಚಿಸಿದೆ. ಈ ನಡೆ ಬಗ್ಗೆ ಪ್ರಾಧ್ಯಾಪಕರಿಂದ ಅಸಮಾಧಾನ ವ್ಯಕ್ತವಾಗಿದೆ.

ಈಚೆಗೆ ಪದವಿ ಕಾಲೇಜು ಪ್ರಾಧ್ಯಾಪಕರ ವರ್ಗಾವಣೆಗೆ ಲಭ್ಯವಿರುವ ವಿಷಯವಾರು ಎಲ್ಲ ಖಾಲಿ ಹುದ್ದೆಗಳ ಮಾಹಿತಿ ನೀಡಲು ಸರ್ಕಾರ ನಿರ್ಧರಿಸಿತ್ತು. ಆದರೆ, ಒತ್ತಡಕ್ಕೆ ಒಳಗಾದ ಸರ್ಕಾರವು ಪದವಿ ಕಾಲೇಜುಪ್ರಾಧ್ಯಾಪಕರ ಎಲ್ಲ ಖಾಲಿ ಇರುವ ಹುದ್ದೆಗಳ ಮಾಹಿತಿ ನೀಡುವುದಾಗಿ ತಿಳಿಸಿದೆ.

‘ವರ್ಗಾವಣೆ ನೀತಿಗಳು ಸರ್ಕಾರದ ಎಲ್ಲ ಇಲಾಖೆಗಳಿಗೆ ಏಕರೂಪ ಇರುತ್ತವೆ. ಆದರೆ, ತಾಂತ್ರಿಕ ಶಿಕ್ಷಣ ಇಲಾಖೆ ಅದರ ನಿಯಮ ಉಲ್ಲಂಘಿಸುತ್ತಿದೆ. ನ್ಯಾಯಾಲಯವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದರೂ ನನ್ನ ಹೆಸರನ್ನು ವರ್ಗಾವಣೆ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಕಲಬುರಗಿಯ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು ಪ್ರಾಧ್ಯಾಪಕರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಪಾಲಿಟೆಕ್ನಿಕ್ ಕಾಲೇಜು, ಕಿರಿಯ ತಾಂತ್ರಿಕ ಶಾಲೆ ಮತ್ತು ಎಂಜಿನಿಯರಿಂಗ್ ಕಾಲೇಜು ಸೇರಿ ಒಟ್ಟು 600ಪ್ರಾಧ್ಯಾಪಕರ ಹೆಸರು ವರ್ಗಾವಣೆಯ ಸುತ್ತೋಲೆ ಪಟ್ಟಿಯಲ್ಲಿ ಇದೆ. ವರ್ಗಾವಣೆಗೆ ಆಯ್ದುಕೊಳ್ಳುವ ಕಾಲೇಜಿನಲ್ಲಿ ಯಾವ ವಿಷಯಗಳ ಹುದ್ದೆಗಳು ಖಾಲಿ ಇವೆ ಎಂಬುದು ತಿಳಿಯುತ್ತಿಲ್ಲ. ಇದೇ ಮೊದಲ ಬಾರಿಗೆ ಖಾಲಿ ಇರುವ ಹುದ್ದೆಗಳ ಮಾಹಿತಿ ಮುಚ್ಚಿಟ್ಟು, ವರ್ಗಾವಣೆ ಪ್ರಕ್ರಿಯೆ ಕೈಗೊಂಡಿದ್ದು ಸರಿಯಲ್ಲ’ ಎಂದು ಮತ್ತೊಬ್ಬ ಪ್ರಾಧ್ಯಾಪಕರು ಹೇಳಿದರು.

‘ವರ್ಗಾವಣೆ ನಿಯಮದ ಪ್ರಕಾರ, ಮಂಜೂರಾದ ಎಲ್ಲ ಹುದ್ದೆಗಳು ಸೇರಿ ಶೇ 15ರಷ್ಟು ಹುದ್ದೆಗೆ ವರ್ಗಾವಣೆ ಮಾಡಬೇಕು. ಆದರೆ, ಸುಮಾರು 600 ಪ್ರಾಧ್ಯಾಪಕರು ಮಾತ್ರ ವರ್ಗಾವಣೆ ಪಟ್ಟಿಯಲ್ಲಿ ಇದ್ದಾರೆ. ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು ಸರ್ಕಾರ ಉದ್ದೇಶ ಪೂರ್ವಕವಾಗಿ ಮುಚ್ಚಿಟ್ಟಿದೆ. ಸಾಮಾನ್ಯವಾಗಿ ಏಪ್ರಿಲ್–ಜೂನ್‌ ತಿಂಗಳಲ್ಲಿ ವರ್ಗಾವಣೆ ಪ್ರಕ್ರಿಯ ನಡೆಯುತ್ತದೆ.ಕೆಲವೊಮ್ಮೆ ಸರ್ಕಾರದ ಅನುಮತಿ ಪಡೆದು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ವರ್ಗಾವಣೆ ನಡೆಸಬಹುದು ಎಂಬ ನಿಯಮ ಇದೆ. ಇದರಡಿ ಅನುಮತಿ ಪಡೆದಿದ್ದು, ಡಿ.31ಕ್ಕೆ ಗಡುವು ಮುಗಿಯುವುದರಿಂದ ತರಾತುರಿಯಲ್ಲಿ ವರ್ಗಾವಣೆಗೆ ಮುಂದಾಗಿದೆ’ ಎಂದರು.

ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆ!

ಪಾಲಿಟೆಕ್ನಿಕ್‌ನ ಅಂತಿಮ ವರ್ಷದ ಪ್ರತಿ ಬ್ರಾಂಚ್‌ಗೆ ಅಡ್ವಾನ್ಸ್‌ ಪಠ್ಯ ರೂಪಿಸಿ, ಪಾಥ್‌ ವೇಗಳು ಮಾಡಲಾಗಿದೆ. ಇದರಡಿ ‘ಬಹು ವಿಶೇಷ ವಿಷಯ’ಗಳನ್ನು ಬೋಧಿಸಲಾಗುತ್ತದೆ. ಇದು ಪ್ರಸ್ತುತ ಕೈಗಾರಿಕೆಯಲ್ಲಿ ಚಾಲ್ತಿಯಲ್ಲಿ ಇರುವ ವಿಷಯಗಳನ್ನು ಆಧರಿಸಿ ಬೋಧಿಸಲಾಗುತ್ತದೆ. ಇದು ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟಿದ್ದು, ತನ್ನ ಇಚ್ಛೆಯ ವಿಷಯ ಆಯ್ದುಕೊಳ್ಳಬಹುದು.

ವಿದ್ಯಾರ್ಥಿಗಳು ಒಂದೊಂದು ಕಾಲೇಜಿನಲ್ಲಿ ಒಂದೊಂದು ರೀತಿಯ ವಿಷಯ ತೆಗೆದುಕೊಂಡು ಅಧ್ಯಯನ ಮಾಡುತ್ತಾರೆ. ಪ್ರಾಧ್ಯಾಪಕರು ಸಹ ಅದಕ್ಕೆ ತಕ್ಕಂತೆ 13 ವಾರಗಳ ಬೋಧನೆಯ ಕಾಲಮಿತಿ ಹಾಕಿಕೊಂಡು, ಪರಿಕರಗಳನ್ನು ತಯಾರಿಸಿ, ಅಧ್ಯಯನ ಮಾಡಿ ಬೋಧಿಸುತ್ತಾರೆ.

ಉದಾ: ಕಲಬುರಗಿ ಪಾಲಿಟೆಕ್ನಿಕ್‌ ಕಾಲೇಜಿನ ವಿದ್ಯಾರ್ಥಿಗಳಿಗೆ ಪವರ್ ಎಂಜಿನಿಯರಿಂಗ್‌ ಬೋಧಿಸುವ ಪ್ರಾಧ್ಯಾಪಕ ಒಬ್ಬರನ್ನು ಬೀದರ್‌ಗೆ ವರ್ಗಾಯಿಸಿದರೆ, ಅಲ್ಲಿನ ವಿದ್ಯಾರ್ಥಿಗಳು ಆಟೊಮೇಷನ್‌ ತೆಗೆದುಕೊಂಡಿರುತ್ತಾರೆ. ಆಗ ವಿಷಯಕ್ಕೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಪರಿಣಾಮ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ಪ್ರಾಧ್ಯಾಪಕರು.

*ವಲಯದಿಂದ ವರ್ಗಾವಣೆ ಆಗುವ ಪ್ರಾಧ್ಯಾಪಕರ ವಿವರ ನೀಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ವರ್ಗಾವಣೆ ತಡವಾಗಿದೆ. ನ್ಯಾಯಾಲಯದ ಆದೇಶದ ಬಳಿಕ ವರ್ಗಾವಣೆ ಪ್ರಕ್ರಿಯೆ ನಡೆಸುತ್ತಿದ್ದೇವೆ
-ಪ್ರದೀಪ್ ಪಿ., ಆಯುಕ್ತರು, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ

*ಹಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಪ್ರಾಧ್ಯಾಪಕರ ಸಂಖ್ಯೆ ಕಡಿಮೆ ಇದೆ. ಎಲ್ಲ ಕಡೆ ಉಪನ್ಯಾಸಕರನ್ನು ಸಮನಾಗಿ ಹಂಚಿಕೆ ಮಾಡಿ, ಸಿ & ಡಿ ವಲಯದಲ್ಲಿ ಉಪನ್ಯಾಸಕರ ಕೊರತೆ ತಪ್ಪಿಸಲು ಈ ರೀತಿ ಮಾಡಲಾಗಿದೆ
-ಶ್ರೀಕಾಂತ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಜಂಟಿ ಆಯುಕ್ತರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT