ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನಿಷೇಧದ ನಡುವೆಯೂ ಬಣ್ಣದ ಸಂಭ್ರಮ

Last Updated 29 ಮಾರ್ಚ್ 2021, 6:13 IST
ಅಕ್ಷರ ಗಾತ್ರ

ಕಲಬುರ್ಗಿ: ಸಾಮೂಹಿಕ ಹೋಳಿ ನಿಷೇಧ ಮಧ್ಯೆಯೂ ಸೋಮವಾರ ಯುವಕ, ಯುವತಿಯರ ಗುಂಪುಗಳು ರಂಗಿನಾಟದಲ್ಲಿ ಮಿಂದೆದ್ದವು. ಭಾನುವಾರ ರಾ‌ತ್ರಿಯೇ ಕಾಮದಹನ ಮಾಡಿದ ಸಂಭ್ರಮದಲ್ಲಿದ್ದ ನಗರದ ಜನ, ಸೋಮವಾರ ಬೆಳಗಾಗುತ್ತಿದ್ದಂತೆಯೇ ಬಣ್ಣದೋಕುಳಿ ಆಡಿ ಸಂಭ್ರಮಿಸಿದರು.

ಮಕ್ಕಳು, ಮಹಿಳೆಯರು, ಯುವಕರು, ಹಿರಿಯರೂ ಸೇರಿ ಅಲ್ಲಲ್ಲಿ ಬಣ್ಣಾಟವಾಡಿದರು. ನಗರದ ಪ್ರಮುಖ ರಸ್ತೆ, ಗಲ್ಲಿ, ಬಡಾವಣೆಗಳ ಬೀದಿಗಳೆಲ್ಲ ‘ಕಲರ್‌ಫುಲ್‌’ ಆಗಿ ಮಿಂಚಿದವು.

ಬೆಳಿಗ್ಗೆ 9ಕ್ಕೇ ಆರಂಭವಾದ ವರ್ಣಗಳ ಓಕುಳಿಯಲ್ಲಿ ಯುವಕ, ಯುವತಿಯರು ಗುಂಪು ಕಟ್ಟಿಕೊಂಡು ಬಾಯಿಬಾಯಿ ಬಡಿದುಕೊಳ್ಳುತ್ತ ಬಡಾವಣೆಯ ಬೀದಿಬೀದಿ ಸುತ್ತಾಡಿದರು. ಬೈಕ್‌ ಏರಿ ಬೊಬ್ಬೆ ಹಾಕುತ್ತ ನಗರವನ್ನು ಸುತ್ತಿದರು.‌

ಗೃಹಿಣಿಯರು ಕೂಡ ತಮ್ಮ ಸ್ನೇಹಿತರು, ಬಂಧುಗಳು, ಆಪ್ತರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು. ಗೆಳೆಯ– ಗೆಳತಿಯರು ಚಲನಚಿತ್ರ ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಸಿದರು.

ಜಗತ್‌ ವೃತ್ತ, ಸೂಪರ್‌ ಮಾರ್ಕೆಟ್‌, ಬಸ್‌ ನಿಲ್ದಾಣ ರಸ್ತೆ, ಹಳೆ ಜೇವರ್ಗಿ ರಸ್ತೆ, ಹೊಸ ಜೇವರ್ಗಿ, ಆಳಂದ ಚೌಕ್‌, ಎಪಿಎಂಸಿ, ಶರಣಬಸವೇಶ್ವರ ದೇವಸ್ಥಾನ, ಕೋರ್ಟ್‌ ರಸ್ತೆ, ರೈಲ್ವೆ ಸ್ಟೇಷನ್‌ ರಸ್ತೆ, ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತ, ರಾಮ ಮಂದಿರ, ಕಾಂತಾ ಕಾಲೊನಿ, ವೀರೇಂದ್ರ ಪಾಟೀಲ ಬಡಾವಣೆ ಮುಂತಾದ ಕಡೆಗಳಲ್ಲಿ ಗುಂಪು ಗುಂಪಾಗಿ ಬಣ್ಣ ಎರಚಾಟದಲ್ಲಿ ತೊಡಗಿದ್ದು ಕಂಡುಬಂತು.

ಇಲ್ಲಿನ ಗಂಗಾನಗರ, ಗೋದುತಾಯಿ ಕಾಲೊನಿ, ಬ್ರಹ್ಮಪೂರ, ಶ್ರೀರಾಮ ಮಂದಿರ ಸೇರಿದಂತೆ ವಿವಿಧ ಕಡೆಗಳಲ್ಲಿ ಯುವಕರು ಬಣ್ಣದ ಮಡಕೆ ಒಡೆಯುವ ಆಟವಾಡಿ ಖುಷಿಪಟ್ಟರು.

ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿರುವ ಕಾರಣ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸೂಚನೆ ಮೇರೆಗೆ ಜಿಲ್ಲಾಡಳಿತವು ಸಾಮೂಹಿಕ ಹಬ್ಬ ಆಚರಣೆಗೆ ನಿರ್ಬಂಧ ವಿಧಿಸಿದೆ. ಆದರೆ, ಬಣ್ಣ ಹಾಗೂ ಪಿಚಕಾರಿಗಳ ಮಾರಾಟಕ್ಕೆ ಯಾವುದೇ ಅಡ್ಡಿ ಆಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT