ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ನಿರ್ವಹಣೆಯಿಲ್ಲದ ಜಿಮ್‌– ಸೌಲಭ್ಯಗಳ ಕೊರತೆ

ಸ್ವಚ್ಛತೆ ಮರೀಚಿಕೆ, ದುರಸ್ತಿಗೆ ಕಾಯುತ್ತಿರುವ ಥ್ರೆಡ್‌ಮಿಲ್‌ ಸೇರಿ ಹಲವು ಸಾಧನಗಳು, ತಾಲ್ಲೂಕುಗಳಲ್ಲಿ ಜಿಮ್‌ ಸೌಲಭ್ಯಗಳಿಲ್ಲ
Last Updated 11 ಜುಲೈ 2022, 19:30 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕ್ರೀಡಾಪಟುಗಳ ದೈಹಿಕ ಸಾಮರ್ಥ್ಯ ವೃದ್ಧಿ ಮತ್ತು ವ್ಯಾಯಾಮಕ್ಕೆ ಪೂರಕವಾಗಿ ಜಿಲ್ಲಾ ಕ್ರೀಡಾಂಗಣದಲ್ಲಿ ‘ಜಿಮ್’ನ ಸೌಲಭ್ಯವಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಈ ಸೌಲಭ್ಯ ಕಲ್ಪಿಸಲಾಗಿದ್ದರೂ ನಿರ್ವಹಣೆ ಕೊರತೆ ಎದ್ದು ಕಾಣಿಸುತ್ತಿದೆ. ಹೀಗಾಗಿ ಕ್ರೀಡಾಪಟುಗಳಿಗೂ ನಿರೀಕ್ಷಿತ ಮಟ್ಟದಲ್ಲಿ ಪ್ರಯೋಜನವಾಗುತ್ತಿಲ್ಲ.

ಜಿಲ್ಲಾ ಕ್ರೀಡಾಂಗಣದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ‘ಜಿಮ್‌’ ವ್ಯವಸ್ಥೆ ಇದೆ. ಶುಲ್ಕ ಪಾವತಿಸಿದರೆ ಸಾರ್ವಜನಿಕರೂ ಕೂಡ ಕಸರತ್ತು(ವರ್ಕೌಟ್‌) ಮಾಡಬಹುದು. ಥ್ರೆಡ್‌ ಮಿಲ್‌, ಮಸಾಜ್‌ ಯಂತ್ರ ಸೇರಿ ಸಾಕಷ್ಟು ಸಾಮಗ್ರಿಗಳು ಜಿಮ್‌ನಲ್ಲಿವೆ. ಆದರೆ, ಬಹುತೇಕ ಯಾಂತ್ರಿಕ ಸಾಮಗ್ರಿಗಳು ಹಾಳಾಗಿವೆ. ಅವುಗಳ ಸಮರ್ಪಕ ನಿರ್ವಹಣೆಯಾಗದ ಕಾರಣ ಕ್ರೀಡಾಪಟುಗಳ ಪ್ರಯೋಜನಕ್ಕೆ ಬರುತ್ತಿಲ್ಲ.

‘ಸಾರ್ವಜನಿಕರಿಗೂಜಿಮ್‌ಗೆ ಅವಕಾಶ ಇರುವುದರಿಂದ ಜಿಮ್‌ ಆರಂಭಗೊಂಡ ಸಂದರ್ಭದಲ್ಲಿ 150ಕ್ಕೂ ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಂಡಿದ್ದರು. ಆದರೆ, ಸೂಕ್ತ ನಿರ್ವಹಣೆ ಇಲ್ಲದ ಕಾರಣ ಸದಸ್ಯರ ಸಂಖ್ಯೆ ಈಗ 20ಕ್ಕಿಂತಲೂ ಕಡಿಮೆಯಾಗಿದೆ. ಥ್ರೆಡ್‌ ಮಿಲ್‌ ದುರಸ್ತಿ ಸೇರಿ ಇನ್ನು ಕೆಲ ಸಾಮಗ್ರಿಗಳ ಅಗತ್ಯವಿದೆ. ಅವುಗಳನ್ನು ಒದಗಿಸಿದರೆ ಮತ್ತೆ ಸದಸ್ಯರ ಸಂಖ್ಯೆ ಹೆಚ್ಚುತ್ತದೆ’ ಎಂದು ಜಿಮ್‌ ನಿರ್ವಾಹಕ ಸ್ಟೀವನ್‌ ತಿಳಿಸಿದರು.

‘ಜಿಮ್‌ನಲ್ಲಿ ಕ್ರಾಸ್‌ ಕೇಬಲ್‌ ಯಂತ್ರ, ಸ್ಟೆಪ್‌ ಯಂತ್ರ, ಮಸಾಜ್‌ ಯಂತ್ರ, 25 ಕೆಜಿ ವರೆಗಿನ ಡಂಬೆಲ್ಸ್‌, ಒಲಿಂಪಿಕ್ಸ್‌ ಬಾರ್ಬಲ್ಸ್‌, ಥ್ರೆಡ್‌ ಮಿಲ್ಸ್‌ ಸೇರಿ ಹಲವು ಸಾಮಗ್ರಿಗಳಿವೆ. ಒಟ್ಟು 9 ಥ್ರೆಡ್‌ ಮಿಲ್‌ಗಳಿದ್ದು, ಎಲ್ಲವೂ ಕೆಟ್ಟು ನಿಂತಿವೆ. ಮಸಾಜ್‌ ಯಂತ್ರವೂ ದುರಸ್ತಿಯಾಗಬೇಕಿದೆ. ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ಎಂದು ಹೇಳುತ್ತಾರೆ ಅವರು.

‘ಜಿಮ್‌ ವೀಕ್ಷಣೆಗೆ ಹಿರಿಯ ಅಧಿಕಾರಿಗಳು ಬರುತ್ತಾರೆ. ಕೆಟ್ಟಿರುವ ಥ್ರೆಡ್‌ ಮಿಲ್‌ ಸೇರಿ ಜಿಮ್‌ ಅನ್ನು ವೀಕ್ಷಿಸಿ ಮರುಳುತ್ತಾರೆ. ಆದರೆ, ಜಿಮ್‌ ಮಾತ್ರ ಸುಧಾರಣೆ ಆಗಿಲ್ಲ. ಜಿಮ್‌ನ ಶಟರ್ ಬಹುತೇಕ ಹಾಳಾಗಿದ್ದು, ಜೋರಾಗಿ ಮಳೆ ಬಂದರೆ ನೀರು ಒಳಗೆ ಬರುತ್ತದೆ. ಹೀಗಾಗಿ ಅವುಗಳನ್ನು ಹೊಸದಾಗಿ ಅಳವಡಿಸಬೇಕಿದೆ’ ಎಂಬುದು ಜಿಮ್‌ ಸದಸ್ಯರ ದೂರಾಗಿದೆ.

‘ಜಿಮ್‌ ಆವರಣದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಸ್ವಚ್ಛತೆಗಾಗಿ ನೇಮಿಸಿರುವವರುಜಿಮ್‌ಗೆ ಬಂದು ಕೆಲಸ ನಿರ್ವಹಿಸುವುದಿಲ್ಲ. ಸ್ವಚ್ಛಗೊಳಿಸಲು ತಿಳಿಸಿದರೂ ಅಸಡ್ಡೆ ತೋರುತ್ತಾರೆ. ಸ್ವಚ್ಛತೆ ಕಾಯ್ದುಕೊಳ್ಳಲು ಪ್ರತಿನಿತ್ಯವೂ ಅವರಿಗೆ ಗೋಗರೆಯುವಂತಹ ಸ್ಥಿತಿಯಿದೆ’ ಎಂದು ಕ್ರೀಡಾಪಟುಗಳು ಹೇಳುತ್ತಾರೆ.

ಶೀಘ್ರ ಹೊಸ ಜಿಮ್‌ ನಿರ್ಮಾಣ

ಜೇವರ್ಗಿ: ತಾಲ್ಲೂಕು ಕ್ರೀಡಾಂಗಣದಲ್ಲಿ ಜಿಮ್‌ ಇದೆ. ಆದರೆ ತುಂಬಾ ವರ್ಷಗಳಾ ಗಿರುವುದರಿಂದ ಜಿಮ್‌ ಸಲಕರಣೆಗಳು ಕಡಿಮೆಯಿದ್ದು, ಕೆಲವು ಸಲಕರಣೆಗಳು ಹಾಳಾಗಿವೆ. ಹೊಸ ಕ್ರೀಡಾಂಗಣ ನಿರ್ಮಾಣ ವಾಗುತ್ತಿರುವುದರಿಂದ ಇತ್ತೀಚೆಗಷ್ಟೇ ಜಿಮ್‌ ಹಾಗೂ ಮಲ್ಟಿ ಜಿಮ್‌ ಸಲಕರಣೆಗಳು ಬಂದಿವೆ. ಆದರೆ ಅವುಗಳನ್ನು ಇನ್ನು ಅಳವಡಿಸಿಲ್ಲ. ಕ್ರೀಡಾಂಗಣ ಉದ್ಘಾಟನೆಯಾದ ಬೆನ್ನಲ್ಲೇ ನೂತನ ಜಿಮ್ ದುರಸ್ತಿ ಕಾಮಗಾರಿ ನಡೆಸಲು ಕ್ರಮಕೈಗೊಳ್ಳಲಾಗುವುದು ಎಂದು ತಾಲ್ಲೂಕು ಕ್ರೀಡಾಂಗಣದ ವ್ಯವಸ್ಥಾಪಕ ಸಂಗಮೇಶ ಕೊಂಬಿನ್ ಮಾಹಿತಿ ನೀಡಿದರು.

ಬೆಳಿಗ್ಗೆ 6ರಿಂದ 8:30ರವರಗೆ ಜಿಮ್‌ ಆರಂಭವಿರುತ್ತದೆ. ಜಿಮ್‌ಗೆ ಸುಮಾರು 10 ಜನ ಬರುತ್ತಾರೆ. ಅವರಿಗೆ ₹ 200 ಶುಲ್ಕ ವಿಧಿಸಲಾಗುತ್ತದೆ. ಶುಲ್ಕವನ್ನು ಸಲಕರಣೆಗಳ ದುರಸ್ತಿಗಾಗಿಯೇ ಬಳಸಲಾಗುತ್ತಿದೆ. ಹೀಗಾಗಿ ಜಿಮ್‌ನಿಂದ ಹೆಚ್ಚಿನ
ಲಾಭವಿಲ್ಲ. ಇಲಾಖೆಯಿಂದಲೂ ಹೆಚ್ಚುವರಿ ಅನುದಾನ ಸಿಗುತ್ತಿಲ್ಲ. ಅದರ ನಿರ್ಹವಣೆ ಕಷ್ಟವಾಗಿದೆ ಎಂದರು.

ನೂತನ ಕ್ರೀಡಾಂಗಣ ನಿರ್ಮಾಣವಾಗುತ್ತಿದ್ದು, ಅದರ ಸುತ್ತಲು ಸಿ.ಸಿ. ಕಾಮಗಾರಿ ಪ್ರಗತಿ ಹಂತದಲ್ಲಿದೆ. ಗ್ಯಾಲರಿಯ ಮೇಲ್ಛಾವಣಿ ನಿರ್ಮಾಣ ಕಾಮಗಾರಿ ಪ್ರಗತಿ ಹಂತದಲ್ಲಿದೆ. ವಿ.ಐ.ಪಿ. ಗ್ಯಾಲರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಮುಂಬರುವ ಆಗಸ್ಟ್ 15ರಂದು ತಾಲ್ಲೂಕು ಕ್ರೀಡಾಂಗಣದ ಉದ್ಘಾಟನೆ ನೆರವೇರಲಿದೆ ಎಂದು ವ್ಯವಸ್ಥಾಪಕ ಸಂಗಮೇಶ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಚಿಂಚೋಳಿಯಲ್ಲಿ
ಜಿಮ್ ಇಲ್ಲ

ಚಿಂಚೋಳಿ: ಪಟ್ಟಣದ ಚಂದಾ ಪುರದ ಲಿಟಲ್‌ಫ್ಲವರ್‌ ಶಾಲೆಸಮೀಪ ನಿರ್ಮಿಸಲಾಗಿರುವ ಒಳಾಂಗಣಕ್ರೀಡಾಂಗಣ ನಿರ್ಮಾಣಕಾಮಗಾರಿ ಬಹುತೇಕ ಪೂರ್ಣ ಗೊಂಡಿದೆ. ಈಒಳಾಂಗಣ ಕ್ರೀಡಾಂಗಣ ದಲ್ಲಿಯೇಜಿಮ್‌ ಸ್ಥಾಪನೆಯಾಗಬೇಕಿದೆ. ಆದರೆಈವರೆಗೂಜಿಮ್‌ ಸಲಕರಣೆಗಳನ್ನು ಅಳವಡಿಸಿಲ್ಲ. ಶೀಘ್ರದಲ್ಲಿಯೇ ಜಿಮ್‌ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಯುಜನತೆಗೆ ದೈಹಿಕ ಕಸರತ್ತು ನಡೆಸಲು ಜಿಮ್‌ ವ್ಯವಸ್ಥೆ ಹಾಗೂತಾಲ್ಲೂಕು ಕ್ರೀಡಾಂಗಣ ಇಲ್ಲ. ಇದರಿಂದಾಗಿ ಕ್ರೀಡೆಯಲ್ಲಿ ಸಾಧನೆ ಮಾಡುವ ಯುವಜನರ ಕನಸು ಕನಸಾಗಿಯೇ ಉಳಿದಿದೆ. ಆದರೆ ಚಂದಾಪುರ ಪೋಲಕಪಳ್ಳಿ ಮಧ್ಯೆ 8 ಎಕರೆ ಜಮೀನಿನಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಶೀಘ್ರ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ತಿಳಿಸಿದರು.

ಪೂರಕ ಮಾಹಿತಿ:
ಶಿವಾನಂದ ಹಸರಗುಂಡಗಿ, ವೆಂಕಟೇಶ ಹೆರವಾಳ, ಜಗನ್ನಾಥ ಶೇರಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT